ಬಾಲ ಕಾರ್ಮಿಕ ನಿಷೇಧ ಕಾಯ್ದೆ ಜಾಗೃತಿ ಸಂಚಾರಿ ರಥಕ್ಕೆ ನ್ಯಾ. ಪ್ರವೀಣ್ ನಾಯಕ್ ಚಾಲನೆ
ದಾವಣಗೆರೆ: ಸಂವಿಧಾನದ ಆಶಯದಂತೆ ಪ್ರತಿಯೊಂದು ಮಕ್ಕಳಿಗೂ ಬಾಲ್ಯವನ್ನು ಅನುಭವಿಸುವ ಹಕ್ಕಿದೆ ಅದನ್ನು ಯಾರಿಂದಲೂ ಕಸಿದುಕೊಳ್ಳಲು ಸಾಧ್ಯವಿಲ್ಲ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಯಾದ ಪ್ರವೀಣ್ ನಾಯಕ್ ಹೇಳಿದರು.
ಶುಕ್ರವಾರ ನಗರದ ಜಿಲ್ಲಾ ಕಾರ್ಮಿಕ ಅಧಿಕಾರಿಗಳ ಕಚೇರಿ ಆವರಣದಲ್ಲಿ ಆಯೋಜಿಸಿದ್ದ ಬಾಲ ಕಾರ್ಮಿಕ ಹಾಗೂ ಕಿಶೋರ ಕಾರ್ಮಿಕ ನಿಷೇಧ ಹಾಗೂ ನಿಯಂತ್ರಣ ಕಾಯ್ದೆ ಕುರಿತ ಸಂಚಾರಿ ರಥದ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಸಂವಿಧಾನದ ೨೧ನೇ ವಿಧಿಯಲ್ಲಿ ಯಾವುದೇ ವ್ಯಕ್ತಿಯ ಜೀವಿಸುವ ಹಕ್ಕು ಮತ್ತು ಸ್ವಾತಂತ್ರ್ಯದ ಹಕ್ಕು ಇದೆ, ಅದರಂತೆ ಪ್ರತಿಯೊಂದು ಮಕ್ಕಳಿಗೂ ಬಾಲ್ಯವನ್ನು ಅನುಭವಿಸುವ ಅಧಿಕಾರ ಕೂಡ ಇದೆ, ಅದನ್ನು ಯಾರಿಂದಲೂ ಕಸಿದುಕೊಳ್ಳಲು ಸಾಧ್ಯವಿಲ್ಲ. ಇದನ್ನು ರಕ್ಷಿಸುವ ನಿಟ್ಟಿನಲ್ಲಿ ಸರ್ಕಾರ ವಿವಿಧ ಕಾನೂನುಗಳನ್ನು ಜಾರಿ ಮಾಡಿದೆ. ೧೪ ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಕಡ್ಡಾಯ ಉಚಿತ ಶಿಕ್ಷಣ, ಸೂಕ್ತ ಆಹಾರ ನೀಡುವಲ್ಲಿ ನಿರಂತರ ಕಾರ್ಯ ನಿರ್ವಹಿಸುತ್ತಿದೆ ಎಂದರು.
ಬಹಳಷ್ಟು ಜನರಿಗೆ ಕಾನೂನು ಸೇವಾ ಪ್ರಾಧಿಕಾರದ ಬಗ್ಗೆ ಅರಿವು ಇರುವುದಿಲ್ಲ. ಕಾನೂನು ಸೇವಾ ಪ್ರಾಧಿಕಾರದ ವತಿಯಿಂದ ರಾಷ್ಟ್ರ ಮಟ್ಟದಿಂದ ತಾಲ್ಲೂಕು ಮಟ್ಟದವರೆಗೆ ಎಲ್ಲರಿಗೂ ಕಾನೂನಿನ ಅರಿವು ಮೂಡಿಸಲಾಗುತ್ತಿದೆ. ಬಾಲ್ಯಾವಸ್ಥೆ ಮತ್ತು ಕಿಶೋರಾವಸ್ಥೆ ಕಾರ್ಮಿಕ ಪದ್ಧತಿ ನಿರ್ಮೂಲನಾ ಸಂಚಾರ ಜಾಗೃತಿ ಜಾಥಾ ಕಾರ್ಯಕ್ರಮ ಅತ್ಯಂತ ಮಹತ್ವದ್ದಾಗಿದೆ. ಜಾಗೃತಿ ಜಾಥಾ ಜಿಲ್ಲೆಯಾದ್ಯಂತ ಜ. ೧೪ ರವರೆಗೆ ಸಂಚರಿಸಲಿದ್ದು, ಪ್ರತಿಯೊಬ್ಬರು ಕೂಡ ಈ ಕಾರ್ಯಕ್ರಮಕ್ಕೆ ಕೈಜೋಡಿಸಬೇಕು ಎಂದು ಪ್ರವೀಣ್ ನಾಯಕ್ ಹೇಳಿದರು.
ಕಲಬುರಗಿ ಪ್ರಾದೇಶಿಕ ಉಪ ಕಾರ್ಮಿಕ ಆಯಕ್ತ ಡಿ.ಜಿ ನಾಗೇಶ್ ಮಾತನಾಡಿ, ಪ್ರಪಂಚದ ಎಲ್ಲಾ ದೇಶಗಳು ಪ್ರಸ್ತುತ ದಿನಮಾನದಲ್ಲಿ ಭಾರಿ ಪ್ರಮಾಣದಲ್ಲಿ ಆರ್ಥಿಕವಾಗಿ ಸಾಮಾಜಿಕವಾಗಿ ಮುನ್ನಡೆಯುತ್ತಿವೆ, ಮಾನವ ಹಕ್ಕುಗಳು ಜಗತ್ತಿನ ಅತೀ ಪ್ರಮುಖ ಅಂಶವಾಗಿದೆ. ದಕ್ಷಿಣ ಏಷ್ಯಾ, ಆಫ್ರಿಕಾದಂತಹ ಖಂಡಗಳಲ್ಲಿ ಭಾರತ ಸೇರಿದಂತೆ ಸಾಕಷ್ಟು ರಾಷ್ಟ್ರಗಳಲ್ಲಿ ಇನ್ನೂ ಬಾಲಕಾರ್ಮಿಕ ಪದ್ಧತಿ ಜೀವಂತವಿದೆ.
ಸಾಮಾಜಿಕ ವ್ಯವಸ್ಥೆಗೆ ಕೊಡುಗೆಯಾಗಿ ಮಾರ್ಪಾಡಬೇಕಾದಂತಹ ಸಂದರ್ಭದಲ್ಲಿ ಮಕ್ಕಳು ಕೂಲಿಯಾಳುಗಳಾಗಿ ಹಣಕ್ಕಾಗಿ ದುಡಿಯುವಂತಹದ್ದು ಅತ್ಯಂತ ಕೆಟ್ಟ ಪದ್ಧತಿ. ಇದನ್ನು ಕೊನೆಗಾಣಿಸಲು ಬಾಲ್ಯಾವಸ್ಥೆ ಮತ್ತು ಕೀಶೊರಾವಸ್ಥೆಯಲ್ಲಿ ಶೈಕ್ಷಣಿಕವಾಗಿ ಪ್ರಗತಿಗೊಳಿಸುವ ಮೂಲಕ ಆರೋಗ್ಯವಾದ ವಾತಾವರಣ ನಿರ್ಮಿಸುವ ಅಗತ್ಯವಿದೆ ಎಂದರು.
ಬಾಲ ಕಾರ್ಮಿಕರಾಗಿ ದುಡಿದಿದ್ದವರು ಇಂದು ಸಮಾಜದ ದೊಡ್ಡ ಹುದ್ದೆಗಳಲ್ಲಿ ಕೇವಲ ಬೆರಳೆಣಿಕೆಯಷ್ಟು ಜನ ಮಾತ್ರ ಇದ್ದಾರೆ. ಬಾಲಕಾರ್ಮಿಕರಾದ ಮಕ್ಕಳು ವೈಯಕ್ತಿಕವಾಗಿ ಆರೋಗ್ಯ, ಶಿಕ್ಷಣ, ಸಾಮಾಜಿಕ ಗುರುತಿಸುವಿಕೆಯನ್ನು ಕಳೆದುಕೊಳ್ಳುತ್ತಾರೆ. ಹಾಗಾಗಿ, ಈ ಪದ್ಧತಿಯನ್ನು ನಿರ್ಮೂಲನೆ ಮಾಡಬೇಕಾಗಿದೆ. ಇತ್ತೀಚಿನ ಸಮೀಕ್ಷೆಯ ಪ್ರಕಾರ ದಾವಣಗೆರೆ ಒಂದರಲ್ಲೇ ೫೪ ಬಾಲಕಾರ್ಮಿಕ ಮಕ್ಕಳನ್ನು ಗುರುತಿಸಲಾಗಿದ್ದು, ಕಳೆದ ವರ್ಷ ೦೬ ಮತ್ತು ಈ ವರ್ಷ ೦೧ ಪ್ರಕರಣ ದಾಖಲಿಸಲಾಗಿದೆ ಎಂದು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ತಿಪ್ಪೇಶಪ್ಪ ಜಿ ಆರ್, ಬಳ್ಳಾರಿ ವಿಭಾಗದ ಸಹಾಯಕ ಕಾರ್ಮಿಕ ಆಯುಕ್ತೆ ಎಸ್.ಆರ್ ವೀಣಾ, ದಾವಣಗೆರೆ ಸ್ಪೂರ್ತಿ ಸ್ವಯಂ ಸೇವಾ ಸಂಸ್ಥೆಯ ಅಧ್ಯಕ್ಷ ರೂಪ್ಲಾನಾಯ್ಕ್, ಕಾರ್ಮಿಕ ಅಧಿಕಾರಿ ಜಿ. ಇಬ್ರಾಹಿಂ ಸಾಬ್, ಪೀಪಲ್ ಸ್ವಯಂ ಸೇವಾ ಸಂಸ್ಥೆಯ ಕಾರ್ಯದರ್ಶಿ ಮಂಜುನಾಥ ಹಾಗೂ ಕಾರ್ಮಿಕ ಇಲಾಖೆಯ ಸಿಬ್ಬಂದಿ ಉಪಸ್ಥಿತರಿದ್ದರು.
ಬಾಲ ಕಾರ್ಮಿಕ ಹಾಗೂ ಕಿಶೋರ ಕಾರ್ಮಿಕ (ನಿಷೇಧ ಹಾಗೂ ನಿಯಂತ್ರಣ) ಕಾಯ್ದೆ ಕುರಿತ ಭಿತ್ತಿ ಪತ್ರವನ್ನು ಗಣ್ಯರು ಇದೇ ಸಂದರ್ಭದಲ್ಲಿ ಬಿಡುಗಡೆ ಮಾಡಿದರು.