ಕಾಂಗ್ರೆಸ್-ಬಿಜೆಪಿ ನಡೆ ನಮ್ಮ ಗೆಲವಿಗೆ ಸಹಕಾರಿ: ಶಿವಶಂಕರ್

ಹರಿಹರ: ರಾಜ್ಯದಲ್ಲಿ ಬಿಜೆಪಿ ಸರ್ಕಾರದ 40 ಪರ್ಸೆಂಟ್ ಭ್ರಷ್ಟಾಚಾರದ ದುರಾಡಳಿತ ಹಾಗೂ ಶಾಸಕ ಎಸ್. ರಾಮಪ್ಪ ಅವರ ನಿಷ್ಕ್ರಿಯ ಆಡಳಿತವು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕ್ಷೇತ್ರದಲ್ಲಿ ಜೆಡಿಎಸ್ ಗೆಲುವಿಗೆ ಸಹಕಾರಿಯಾಗಲಿದೆ ಎಂದು ಮಾಜಿ ಶಾಸಕ ಹೆಚ್.ಎಸ್. ಶಿವಶಂಕರ್ ಹೇಳಿದ್ದಾರೆ.
ನಗರದ ಹೆಚ್. ಕೆ. ವೀರಪ್ಪ ಸಮುದಾಯ ಭವನದಲ್ಲಿ ಜೆಡಿಎಸ್ ಪಕ್ಷದಿಂದ ಆಯೋಜಿಸಿರುವ ಜ.22ರ ಅಲ್ಪಸಂಖ್ಯಾತರ ಸಮಾವೇಶ ಹಾಗೂ ಫೆ.2ರ ಪಂಚರತ್ನ ರಥಯಾತ್ರೆಯ ಪೂರ್ವಭಾವಿ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ನಾನು ತಿನ್ನುವುದಿಲ್ಲ, ತಿನ್ನುವವರನ್ನು ಬಿಡುವುದಿಲ್ಲ ಎನ್ನುತ್ತಾರೆ. ಆದರೆ, ಬಿಜೆಪಿ ಸರ್ಕಾರ 40 ಪರ್ಸೆಂಟ್ ಕಮೀಷನ್ ಭ್ರಷ್ಟ ಆಡಳಿತ ನಡೆಸುತ್ತಿದೆ ಎಂದು ಗುತ್ತಿಗೆದಾರರೇ ಆರೋಪಿಸುತ್ತಿದ್ದಾರೆ ಎಂದರು.
ಕಾಂಗ್ರೆಸ್ ಪಕ್ಷದ ಭಾರತ್ ಜೋಡೋ ಯಾತ್ರೆಗೆ ಜನಬೆಂಬಲವಿಲ್ಲ. ಬಿಜೆಪಿ ಪಕ್ಷದ ಜನ ಸಂಕಲ್ಪ ಯಾತ್ರೆಗೆ ಹಣ ಕೊಟ್ಟು ಜನರನ್ನು ಕರೆ ತರುವ ಪರಿಸ್ಥಿತಿ ನಿರ್ಮಾಣವಾಗಿದೆ. ಅದೇ ಜೆಡಿಎಸ್ ಪಕ್ಷದ ಜನತಾ ಜಲಧಾರೆ ಸಮಾವೇಶಕ್ಕೆ 25,000ಕ್ಕೂ ಹೆಚ್ಚು ಜನರು ಸೇರಿ ಸ್ವಾಗತ ಮಾಡಿದ್ದರು ಎಂದವರು ಹೇಳಿದರು.
ಜಿಲ್ಲಾ ಜೆಡಿಎಸ್ ಪಕ್ಷದ ಅಧ್ಯಕ್ಷ ಮಲೆಬೆನ್ನೂರು ಚಿದಾನಂದಪ್ಪ, ಮಾತನಾಡಿ,ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಕೊಟ್ಟಂತ ಕೊಡುಗೆಗಳನ್ನು ಜನರು ಇಂದಿಗೂ ಸ್ಮರಿಸುತ್ತಾರೆ ಎಂದರು.

Leave a Reply

Your email address will not be published. Required fields are marked *

error: Content is protected !!