ಶಾಸಕ ತಿಪ್ಪಾರೆಡ್ಡಿಗೆ ಲಂಚ ಆರೋಪ: ತನಿಖೆಗೆ ಕೆಪಿಸಿಸಿ ಒತ್ತಾಯ
ಬೆಂಗಳೂರು: ರಾಜ್ಯ ಗುತ್ತಿಗೆದಾರರ ಸಂಘದ ಕಾರ್ಯಾಧ್ಯಕ್ಷ ಆರ್.ಮಂಜುನಾಥ್ ಅವರಿಂದ ಲಂಚ ಪಡೆದಿರುವ ಆರೋಪದ ಕುರಿತು ತನಿಖೆ ನಡೆಸುವಂತೆ ಒತ್ತಾಯಿಸಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯು(ಕೆಪಿಸಿಸಿ) ಲೋಕಾಯುಕ್ತ ನ್ಯಾಯ ಮೂರ್ತಿ ಬಿ.ಎಸ್. ಪಾಟೀಲ ಅವರಿಗೆ ಮಂಗಳವಾರ ದೂರು ಸಲ್ಲಿಸಿದೆ.
ಚಿತ್ರದುರ್ಗ ಶಾಸಕ ತಿಪ್ಪಾರೆಡ್ಡಿ ಅವರಿಗೆ 90 ಲಕ್ಷ ರೂ. ಲಂಚ ನೀಡಿದ್ದೇನೆ ಎಂದು ಮಂಜುನಾಥ್ ಆರೋಪಿಸಿರುವ ಆಡಿಯೊ ತುಣುಕನ್ನು ಗುತ್ತಿಗೆದಾರರ ಸಂಘದ ಪದಾಧಿಕಾರಿಗಳು ಸೋಮ ವಾರ ಪತ್ರಿಕಾಗೋಷ್ಠಿಯಲ್ಲಿ ಬಿಡುಗಡೆ ಮಾಡಿದ್ದರು. ಪತ್ರಿಕಾಗೋಷ್ಠಿಯ ವಿವರಗಳೊಂದಿಗೆ ಲೋಕಾಯುಕ್ತರಿಗೆ ದೂರು ಸಲ್ಲಿಸಿರುವ ಕಾಂಗ್ರೆಸ್ ಮುಖಂಡರಾದ ಎಸ್. ಮನೋಹರ್, ಎ. ಆನಂದ ಮತ್ತು ಪುಟ್ಟರಾಜು, ತನಿಖೆ ನಡೆಸುವಂತೆ ಆಗ್ರಹಿಸಿದ್ದಾರೆ.