ಖಾಸಗಿ ಆಸ್ಪತ್ರೆ, ಮೆಡಿಕಲ್ ಕಾಲೇಜುಗಳ ಸಹಕಾರ ಅಗತ್ಯ: ಡಿಸಿ
ದಾವಣಗೆರೆ: ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕೋವಿಡ್ ಪ್ರಕರಣಗಳು ಕಂಡುಬಂದಲ್ಲಿ ಜಿಲ್ಲಾಸ್ಪತ್ರೆಯನ್ನು ಸಂಪೂರ್ಣ ಕೋವಿಡ್ ಆಸ್ಪತ್ರೆಯನ್ನಾಗಿಸಲಾಗುವುದು ಎಂದು ಡಿಸಿ ಮಹಾಂತೇಶ್ ಬೀಳಗಿ ಹೇಳಿದರು. ಈ ವೇಳೆ ಜಿಲ್ಲಾ ಆಸ್ಪತ್ರೆಗೆ ಕೋವಿಡ್ ಹೊರತುಪಡಿಸಿ, ಇತರೆ ಖಾಯಿಲೆಗಳಿಗಾಗಿ ಬರುವ ರೋಗಿಗಳನ್ನು ಖಾಸಗಿ ಆಸ್ಪತ್ರೆಗಳಿಗೆ ಶಿಫಾರಸು ಮಾಡಲಾಗುವುದು. ಅಂತಹ ರೋಗಿಗಳಿಗೆ ಸೂಕ್ತ ಚಿಕಿತ್ಸೆ ನೀಡುವ ಮೂಲಕ ಖಾಸಗಿ ಆಸ್ಪತ್ರೆಗಳು, ವೈದ್ಯಕೀಯ ಕಾಲೇಜುಗಳು ಸಹಕರಿಸಬೇಕು ಎಂದರು.
ಉಚಿತ ಚಿಕಿತ್ಸೆ ಕೊಡಿ: ಸರಕಾರದ ಆದೇಶದಂತೆ ಖಾಸಗಿ ಆಸ್ಪತ್ರೆಗಳು ಶೇ. ೫೦ ರಷ್ಟು ಹಾಗೂ ಖಾಸಗಿ ಮೆಡಿಕಲ್ ಕಾಲೇಜುಗಳು ಶೇ. ೭೫ ರಷ್ಟು ಬೆಡ್‌ಗಳನ್ನು ಸರಕಾರದಕ್ಕೆ ಬಿಟ್ಟುಕೊಡಬೇಕು. ಈ ಬಗ್ಗೆ ಯಾವುದೇ ರಾಜಿ ಇಲ್ಲ. ಸರಕಾರಿ ವೈದ್ಯರಿಂದ ಶಿಫಾರಸ್ಸು ತರುವ ರೋಗಿಗಳಿಗೆ ಎಬಿಎಆರ್‌ಕೆ ಯೋಜನೆಯಡಿ ದಾಖಲಿಸಿ, ಉಚಿತವಾಗಿ ಚಿಕಿತ್ಸೆ ಕೊಡಬೇಕು, ಸರ್ಕಾರದ ಸೂಚನೆಯಂತೆ ಎಬಿಎಆರ್‌ಕೆ ಕಾರ್ಡ್ ಹೊರತುಪಡಿಸಿ, ರೋಗಿಗಳಿಂದ ಯಾವುದೇ ದಾಖಲೆ ಕೇಳಬಾರದು ಅಲ್ಲದೆ, ಇಂತಹವರಿಂದ ಯಾವುದೇ ಬಗೆಯ ಮುಂಗಡ ಹಣ ಪಾವತಿಸಿಕೊಳ್ಳುವಂತಿಲ್ಲ. ಕಳೆದ ಬಾರಿ ಇಂತಹ ಅನೇಕ ದೂರುಗಳು ಬಂದಿವೆ ಎಂದು ಜಿಲ್ಲಾಧಿಕಾರಿಗಳು ಎಚ್ಚರಿಕೆ ನೀಡಿದರು.
ಕೋವಿಡ್ ಕೇರ್ ಸೆಂಟರ್ ಪ್ರಾರಂಭಕ್ಕೆ ಸಿದ್ಧತೆ : ಜಿಲ್ಲೆಯಲ್ಲಿ ಕೋವಿಡ್ ೩ನೇ ಅಲೆ ಎದುರಿಸಲು ಜಿಲ್ಲಾಡಳಿತ ಸಕಲ ರೀತಿಯಲ್ಲಿ ಸಜ್ಜಾಗಿದೆ. ಜಿಲ್ಲಾ ಆಸ್ಪತ್ರೆ ಸೇರಿದಂತೆ ಎಲ್ಲ ತಾಲ್ಲೂಕು ಆಸ್ಪತ್ರೆಗಳನ್ನು ಈಗಾಗಲೆ ಸಜ್ಜುಗೊಳಿಸಲಾಗಿದೆ. ಆಕ್ಸಿಜನ್ ಘಟಕಗಳು ಕಾರ್ಯಾರಂಭವಾಗಿದ್ದು, ಯಾವುದೇ ಕೊರತೆ ಈ ಬಾರಿ ಬಾಧಿಸದು ಎಂಬ ವಿಶ್ವಾಸವಿದೆ. ಅಲ್ಲದೆ ಆಸ್ಪತ್ರೆಗಳಲ್ಲಿ ಆಕ್ಸಿಜನ್, ವೆಂಟಿಲೇಟರ್, ಮಾನಿಟರ್, ಐಸಿಯುಗಳು, ಆಕ್ಸಿಜನ್ ಕಾನ್ಸ್ಂಟರೇಟರ್‌ಗಳು ಸಹ ಎಲ್ಲವೂ ಸಿದ್ಧವಾಗಿವೆ. ಅಗತ್ಯ ಮಾನವ ಸಂಪನ್ಮೂಲ, ಔಷಧಿಗಳು ಕೂಡ ವ್ಯವಸ್ಥೆಗೊಳಿಸಲಾಗುತ್ತಿದೆ ಎಂದು ಹೇಳಿದರು.