ಕೋವಿಡ್ ಮಾರ್ಗಸೂಚಿ ಉಲ್ಲಂಘನೆ: ರಾಜ್ಯದ ಜನರ ಕ್ಷಮೆ ಕೇಳಿದ ರೇಣುಕಾಚಾರ್ಯ
ದಾವಣಗೆರೆ: ಕೋವಿಡ್ ಮಾರ್ಗಸೂಚಿ ಉಲ್ಲಂಘಿಸಿ ಆಯೋಜಿಸಲಾಗಿದ್ದ ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಭಾಗಿಯಾಗಿದ್ದಕ್ಕೆ ಹೊನ್ನಾಳಿ ಶಾಸಕ ಹಾಗೂ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ರಾಜ್ಯದ ಜನತೆಯ ಕ್ಷಮೆ ಕೇಳಿದ್ದಾರೆ.
ಈ ಕುರಿತು ವಿಡಿಯೋ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಹೋರಿ ಬೆದರಿಸುವ ಸ್ಪರ್ಧೆ 15 ದಿನದ ಮುಂಚೆ ಆಯೋಜನೆ ಮಾಡಲಾಗಿತ್ತು.
ಯುವಕರು ನನ್ನ ಬಳಿ ಬಂದು ಹೇಳಿಕೊಂಡಿದ್ದರು. ಯುವಕರ ಒತ್ತಾಯದ ಮೇರೆಗೆ ನಾನು ಹೋರಿ ಬೆದರಿಸುವ ಸ್ಪರ್ಧೆಗೆ ಚಾಲನೆ ನೀಡಿದೆ. ಇದರಿಂದ ಕೋವಿಡ್ ಮಾರ್ಗಸೂಚಿ ಉಲ್ಲಂಘನೆಯಾಗಿದೆ. ನಾನು ಇಂದು ರಾಜ್ಯದ ಜನರಿಗೆ ಕ್ಷಮೆಯಾಚನೆ ಮಾಡುತ್ತಿದ್ದೇನೆ ಎಂದು ಹೇಳಿದ್ದಾರೆ.
ಇಂದು ಬೆಳಗ್ಗೆ ಹೊನ್ನಾಳಿ ತಾಲೂಕಿನ ಬಲಮುರಿ ಗ್ರಾಮದಲ್ಲಿ ಹೋರಿ ಬೆದರಿಸುವ ಸ್ಪರ್ಧೆಗೆ ಶಾಸಕ ರೇಣುಕಾಚಾರ್ಯ ಅವರು ಸಾವಿರಾರು ಯುವಕರ ಮಧ್ಯೆ ಹೋರಿ ಬೆದರಿಸುವ ಸ್ಪರ್ಧೆಗೆ ಚಾಲನೆ ನೀಡಿದ್ದರು. ಯುವಕರ ಮಧ್ಯೆ ಮೆರವಣಿಗೆ ಮಾಡಿದ್ದಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು.