ವಿಚ್ಛೇದಿತರಾಗಿ ದೂರವಾಗಿದ್ದ ದಂಪತಿಗಳನ್ನು ಒಗ್ಗೂಡಿಸಿದ ಮಗಳು

ದಾವಣಗೆರೆ: ವಿವಾಹ ವಿಚ್ಛೇದನ ಪಡೆದು ದೂರವಾಗಿದ್ದ ಗಂಡ ಹೆಂಡತಿಯನ್ನು ಸ್ವತಃ ಅವರ ಮಗಳೇ ಒಂದು ಮಾಡಿದ್ದಾಳೆ.
ಇದು ನಡೆದಿದ್ದು ದಾವಣಗೆರೆ ಜಿಲ್ಲಾ ನ್ಯಾಯಾಲಯ ಸಂಕೀರ್ಣದ ಲೋಕ್ ಅದಾಲತ್‍ನಲ್ಲಿ.
ಶನಿವಾರ ನಡೆದ ಜನತಾ ನ್ಯಾಯಾಲಯದಲ್ಲಿ ದೂರವಾಗಿದ್ದ ದಂಪತಿಗಳು ಮತ್ತೆ ಒಂದಾಗಿದ್ದಾರೆ. ಈಗಾಗಲೇ ವಿಚ್ಛೇದನ ಪಡೆದಿದ್ದ ಕಾರಣ ಮತ್ತೆ ಅವರಿಬ್ಬರೂ ಕಾನೂನು ಪ್ರಕಾರ ಮತ್ತೆ ಮದುವೆ ಮಾಡಿಕೊಳ್ಳಬೇಕಾಗಿದೆ.
ವಿವಾಹ ವಿಚ್ಛೇಧನ ಪಡೆದು 8 ವರ್ಷಗಳಿಂದ ದೂರವಿದ್ದ ದಂಪತಿಗಳು ಮಗಳ ಹಠದಿಂದಲೇ ಒಂದಾಗಿದ್ದಾರೆ. ದೂರವಾಗಿದ್ದ ತಂದೆ ತಾಯಿಗಳನ್ನು ಒಂದು ಮಾಡುವಲ್ಲಿ ಮಗಳು ಯಶಸ್ಸು ಕಂಡಿದ್ದಾಳೆ.
2007ರಲ್ಲಿ ಮದುವೆಯಾಗಿದ್ದ ದಂಪತಿ 2014ರವರೆಗೆ ಒಟ್ಟಿಗೆ ಸಂಸಾರ ನಡೆಸಿದ್ದರು. ಇವರಿಗೆ ಒಬ್ಬ ಮಗಳೂ ಹುಟ್ಟಿದ್ದಳು.
2014ರಲ್ಲಿ ವರದಕ್ಷಿಣೆ ಕಿರುಕುಳ, ಮಾನಸಿಕ ಮತ್ತು ದೈಹಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಪತ್ನಿಯು ತನ್ನ ಪತಿ ಮತ್ತು ಇತರ ಮೂವರ ಮೇಲೆ ಮಹಿಳೆ ದೂರು ನೀಡಿದ್ದರು. ಇದೇ ಸಂದರ್ಭದಲ್ಲಿ ವಿವಾಹ ವಿಚ್ಛೇದನಕ್ಕೆ ಪತಿ ಅರ್ಜಿ ಸಲ್ಲಿಸಿದ್ದರು. ಅದರಂತೆ 2020ರಲ್ಲಿ ಕಾನೂನು ಪ್ರಕಾರ ವಿಚ್ಛೇದನ ಕೂಡಾ ಆಗಿತ್ತು.
ಈ ಮಧ್ಯೆ ತಾಯಿ ಬಳಿ ಇದ್ದ 13 ವರ್ಷದ ಮಗಳು ತಂದೆಯ ಜತೆ ಇರಬೇಕೆಂದು ಹಠ ಮಾಡಲು ಆರಂಭಿಸಿದರು. ಅವಳ ಹಠ, ಒತ್ತಾಯ, ಪ್ರೀತಿಗೆ ಮಣಿದ ತಾಯಿ ವಿಚ್ಛೇದನ ಪಡೆದಿದ್ದ ಪತಿಯನ್ನು ಸಂಪರ್ಕಿಸಿದಲ್ಲದೇ ಹಿರಿಯ ನ್ಯಾಯವಾದಿ ಎಲ್.ಹೆಚ್.ಅರುಣ್‍ಕುಮಾರ್ ಅವರ ಬಳಿ ತಮ್ಮ ಅಳಲು ತೋಡಿಕೊಂಡಿದ್ದಾರೆ.
ಈ ವಿಷಯವನ್ನು ನ್ಯಾಯವಾದಿ ಅರುಣ್‍ಕುಮಾರ್ ನ್ಯಾಯಾಲಯದ ಗಮನಕ್ಕೆ ತಂದಿದ್ದಾರೆ. ಈ ಕುರಿತು 2ನೇ ಹೆಚ್ಚುವರಿ ನ್ಯಾಯಾಧೀಶರಾದ ಟಿ.ಎಂ.ನಿವೇದಿತಾ, ದಂಪತಿಗಳನ್ನು ನ್ಯಾಯಾಲಯಕ್ಕೆ ಕರೆಸಿ ಮಾತುಕತೆ ನಡೆಸಿದ್ದಾರೆ. ಕೊನೆಗೆ ಒಂದೇ ಮನೆಯಲ್ಲಿ ಇದ್ದು, ನಂತರ ವಿಚ್ಛೇದಿತರಾಗಿ 8 ವರ್ಷಗಳಿಂದ ದೂರವಿದ್ದ ದಂಪತಿ ಒಂದಾಗುವುದಾಗಿ ಒಪ್ಪಿದ್ದಾರೆ. ವಿಚ್ಛೇದನವಾಗಿ ದೂರವಾಗಿದ್ದ ಹೆತ್ತವರನ್ನು ಮಗಳೇ ಒಂದು ಮಾಡಿದ್ದಾಳೆ.
ಈ ವೇಳೆ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ರಾಜೇಶ್ವರಿ ಎನ್.ಹೆಗಡೆ, ಹಿರಿಯ ಸಿವಿಲ್ ನ್ಯಾಯಾಧೀಶ, ಒಂದನೇ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ವಿಜಯಾನಂದ, 2ನೇ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಶ್ರೀಪಾದ್, ಕೌಟುಂಬಿಕ ನ್ಯಾಯಾಲಯದ ನ್ಯಾಯಾಧೀಶರಾದ ಧಶರಥ್, ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಪ್ರವೀಣ್ ನಾಯಕ್, ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶರಾದ ಪ್ರೀತಿ ಎಸ್. ಜೋಷಿ, ಎರಡನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರಾದ ಟಿ.ಎಂ.ನಿವೇದಿತಾ, 3ನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರಾದ ಅಫ್ತಾಬ್, ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಸಮೀರ್ ಕೊಳ್ಳಿ, ಹೆಚ್ಚುವರಿ ಸಿವಿಲ್ ನ್ಯಾಯಾಧೀಶರಾದ ಪ್ರಶಾಂತ್, ಮಲ್ಲಿಕಾರ್ಜುನ್, ಸಿದ್ದರಾಜು, ನಾಜೀರಾ ಕೌಸರ್, ಜಿಲ್ಲಾ ನ್ಯಾಯಾಂಗದ ಮುಖ್ಯ ಆಡಳಿತಾಧಿಕಾರಿ ಶ್ರೀನಿವಾಸ್ ಇದ್ದರು. ಸಂಧಾನಕಾರರಾಗಿ ಎಲ್.ಎಚ್. ಅರುಣ್‍ಕುಮಾರ್, ಎಸ್.ತಿಪ್ಪೇಸ್ವಾಮಿ ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ವಕೀಲರು ಭಾಗವಹಿಸಿದ್ದರು.