ದೂರವಾಗಲು ತೀರ್ಮಾನಿಸಿದ್ದ ದಂಪತಿಯನ್ನು ಒಂದು ಮಾಡಿದ ಕೋರ್ಟ್
ದಾವಣಗೆರೆ: ಕೌಟುಂಬಿಕ ವೈಮನಸ್ಸಿನಿಂದ ಪರಸ್ಪರ ದೂರವಾಗಲು ನ್ಯಾಯಾಲಯದ ಮೊರೆ ಹೋಗಿದ್ದ ದಂಪತಿಯನ್ನು ಅವರ ಮಕ್ಕಳ ಭವಿಷ್ಯದ ಬಗ್ಗೆ ತಿಳುವಳಿಕೆ ಮೂಡಿಸಿ, ಅವರ ಮನವೊಲಿಸಿ ದೂರವಾಗಬೇಕಿದ್ದ ದಂಪತಿಗಳನ್ನು ನ್ಯಾಯಾಧೀಶರು, ರಾಜೀ ಸಂಧಾನಕಾರರು ಮತ್ತೆ ಒಂದು ಮಾಡಿದ್ದಾರೆ.
ಜಿಲ್ಲಾ ನ್ಯಾಯಾಲಯದ ಸಂಕೀರ್ಣದಲ್ಲಿ ಶನಿವಾರ ಆಯೋಜಿಸಲಾಗಿದ್ದ ಲೋಕ್ ಆದಾಲತ್‍ನಲ್ಲಿ ದಂಪತಿಗಳು ವೈಮನಸ್ಸು ಬಿಟ್ಟು ಒಂದಾಗಿದ್ದಾರೆ. 2011ರಲ್ಲಿ ಮದುವೆ ಆಗಿದ್ದ ದಾವಣಗೆರೆಯ ಉದ್ಯಮಿ ವ್ಯಕ್ತಿ ಮತ್ತು ಖಾಸಗಿ ಸಂಸ್ಥೆಯಲ್ಲಿ ಉದ್ಯೋಗಿ ಆಗಿರುವ ಮಹಿಳೆ 2020ರಲ್ಲಿ ಪತಿ ಮೇಲೆ ದೌರ್ಜನ್ಯ ಪ್ರಕರಣವನ್ನು ಪತ್ನಿ ದಾಖಲಿಸಿದ್ದರು.
ಈ ದಂಪತಿಗೆ ಮೂವರು ಹೆಣ್ಣುಮಕ್ಕಳು ಇದ್ದು, ಮೂವರೂ ತಾಯಿ ಜತೆಗೆ ಇದ್ದರು. ಎರಡನೇ ಹೆಚ್ಚುವರಿ ನ್ಯಾಯಾಲಯದ ನ್ಯಾಯಾಧೀಶರಾದ ಟಿ.ಎಂ.ನಿವೇದಿತಾ ಪ್ರಕರಣದ ವಿಚಾರಣೆ ನಡೆಸುತ್ತಿದ್ದರು. ನ್ಯಾಯಾಧೀಶರ ಜತೆಗೆ ವಕೀಲ ಎಸ್.ತಿಪ್ಪೇಸ್ವಾಮಿ ಈ ಪ್ರಕರಣವನ್ನು ಅದಾಲತ್‍ನಲ್ಲಿ ಇತ್ಯರ್ಥಪಡಿಸಲು ದಂಪತಿಯ ಮನವೊಲಿಸಿದರು.
ಕೊನೆಗೂ ಲೋಕ ಅದಾಲತ್‍ನಲ್ಲಿ ರಾಜೀ ಸಂಧಾನಕಾರರು ದಂಪತಿಗೆ ತಿಳಿಹೇಳಿ ಒಂದುಗೂಡಿಸಿದರು. ಒಬ್ಬಳು ಮಗಳು ಇದಕ್ಕೆ ಸಾಕ್ಷಿಯಾದಳು. ಇದೇ ಸಂದರ್ಭದಲ್ಲಿ ವಿಚ್ಛೇದನವಾಗಿ ಎರಡು ವರ್ಷವಾಗಿದ್ದ ಜೋಡಿಯನ್ನೂ ಮತ್ತೆ ಒಂದುಗೂಡಿಸಲಾಯಿತು. ಒಗ್ಗೂಡಿದ ಎರಡು ಜೋಡಿಗಳೂ ನ್ಯಾಯಾಲಯದಲ್ಲಿಯೇ ಪರಸ್ಪರ ಹಾರ ಬದಲಾಯಿಸಿಕೊಂಡು, ಸಿಹಿ ತಿಂದೂ, ಮಗಳಿಗೂ ತಿನ್ನಿಸಿ ಖುಷಿಪಟ್ಟರು.
ಈ ವೇಳೆ ಮಾತನಾಡಿದ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರಾದ ರಾಜೇಶ್ವರಿ ಎನ್ ಹೆಗಡೆ, ವಿಚ್ಛೇದನ ಪಡೆದ ಈ ಎರಡು ಜೋಡಿಗಳು ಮತ್ತೆ ಒಂದಾಗಿ ಜೀವನ ನಡೆಸಲು ಮುಂದಾಗಿರುವುದು ಉತ್ತಮ ವಿಚಾರ. ಇಂಥ ಹಲವು ಪ್ರಕರಣಗಳನ್ನು ಜನತಾ ನ್ಯಾಯಾಲಯದಲ್ಲಿ ಇತ್ಯರ್ಥಪಡಿಸಿದ್ದೇವೆ. ಕೌಟುಂಬಿಕ ಸಮಸ್ಯೆ ಇತ್ಯರ್ಥಪಡಿಸಿಕೊಂಡು ಹೊಂದಿಕೊಂಡು ಹೋಗುವ ಈ ಪ್ರಕರಣಗಳು ಸಮಾಜಕ್ಕೆ ಮಾದರಿಯಾಗಲಿ ಎಂದು ಹೇಳಿದರು.
2ನೇ ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಧೀಶರಾದ ಟಿ.ಎಂ.ನಿವೇದಿತಾ ಮಾತನಾಡಿ, ಕುಟುಂಬದಲ್ಲಿ ಇರುವ ಸಮಸ್ಯೆಗಳನ್ನು ಸರಿಪಡಿಸಿಕೊಂಡು ಪತಿ, ಪತ್ನಿ ಮಾನಸಿಕವಾಗಿ ಹೊಂದಿಕೊಂಡರೆ ಮುಂದಿನ ಬದುಕು ಚೆನ್ನಾಗಿ ಇರುತ್ತದೆ. ಒಂದು ಕುಟುಂಬದಲ್ಲಿ ಒಬ್ಬಳು ಹೆಣ್ಣುಮಗಳು, ಮತ್ತೊಂದು ಕುಟುಂಬದಲ್ಲಿ ಮೂವರು ಹೆಣ್ಣುಮಕ್ಕಳು ಇದ್ದಾರೆ. ಈಗ ಹೆತ್ತವರು ಒಂದಾಗಿರುವುದರಿಂದ ಈ ನಾಲ್ವರು ಮಕ್ಕಳ ಭವಿಷ್ಯ ಚೆನ್ನಾಗಿರುತ್ತದೆ ಹೇಳಿದರು.
ಈ ವೇಳೆ ಹಿರಿಯ ಸಿವಿಲ್ ನ್ಯಾಯಾಧೀಶ, ಒಂದನೇ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ವಿಜಯಾನಂದ, 2ನೇ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಶ್ರೀಪಾದ್, ಕೌಟುಂಬಿಕ ನ್ಯಾಯಾಲಯದ ನ್ಯಾಯಾಧೀಶರಾದ ಧಶರಥ್, ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಪ್ರವೀಣ್ ನಾಯಕ್, ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶರಾದ ಪ್ರೀತಿ ಎಸ್. ಜೋಷಿ, 3ನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರಾದ ಅಫ್ತಾಬ್, ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಸಮೀರ್ ಕೊಳ್ಳಿ, ಹೆಚ್ಚುವರಿ ಸಿವಿಲ್ ನ್ಯಾಯಾಧೀಶರಾದ ಪ್ರಶಾಂತ್, ಮಲ್ಲಿಕಾರ್ಜುನ್, ಸಿದ್ದರಾಜು, ನಾಜೀರಾ ಕೌಸರ್, ಜಿಲ್ಲಾ ನ್ಯಾಯಾಂಗದ ಮುಖ್ಯ ಆಡಳಿತಾಧಿಕಾರಿ ಶ್ರೀನಿವಾಸ್ ಇದ್ದರು. ಸಂಧಾನಕಾರರಾಗಿ ಎಲ್.ಎಚ್. ಅರುಣ್‍ಕುಮಾರ್, ಎಸ್.ತಿಪ್ಪೇಸ್ವಾಮಿ ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ವಕೀಲರು ಭಾಗವಹಿಸಿದ್ದರು.