ದಾವಣಗೆರೆ ವಿವಿ ಯಲ್ಲಿ ಪರಿಸರ ದಿನಾಚರಣೆ: ಪ್ರಕೃತಿ ಮನುಷ್ಯನ ಬದುಕಿನ ಆಸರೆ – ಫ್ರೋ ಪಿ ಲಕ್ಷ್ಮಣ್

ದಾವಣಗೆರೆ: ಮನುಷ್ಯನ ಬದುಕಿಗೆ ಆಸರೆಯಾಗಿರುವ ಪ್ರಕೃತಿಯೊಂದೇ ಭವಿಷ್ಯ ರೂಪಿಸುವ ಮಾರ್ಗವಾಗಿದೆ. ಹೀಗಾಗಿ ಪರಿಸರ ರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ದಾವಣಗೆರೆ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಪಿ.ಲಕ್ಷ್ಮಣ ಹೇಳಿದರು.

ವಿಶ್ವ ಪರಿಸರ ದಿನಾಚರಣೆ ಮತ್ತು ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ರಾಷ್ಟ್ರೀಯ ಸೇವಾ ಯೋಜನೆ ಮತ್ತು ತೋಟಗಾರಿಕೆ ವಿಭಾಗದ ವತಿಯಿಂದ ಶ್ರುಕ್ರವಾರ ಏರ್ಪಡಿಸಿದ್ದ ಸಸಿ ನೆಡುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಪ್ರಕೃತಿಯನ್ನು ನಾಶ ಮಾಡಿದರೆ ಆಗಬಹುದಾದ ಅನಾಹುತಗಳನ್ನು ಕಳೆದ ನಾಲ್ಕು, ಐದು, ವರ್ಷಗಳಲ್ಲಿ ಎಲ್ಲರಿಗೂ ಅನುಭವವಾಗಿದೆ. ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಮಾರ್ಗ ಕಂಡುಕೊಳ್ಳಬೇಕೇ ಹೊರತು, ಸಮಸ್ಯೆ ಸೃಷ್ಟಿಸಬಾರದು. ಪ್ರಕೃತಿಯ ಭಾಗವಾಗಿ ಬದುಕುವ ಮನುಷ್ಯ, ಪರಿಸರವನ್ನು ನಾಶ ಮಾಡಿ ತನ್ನ ನಾಶಕ್ಕೆ ತಾನೇ ಕಾರಣನಾಗುತ್ತಿದ್ದಾನೆ ಎಂದು ಆತಂಕ ವ್ಯಕ್ತಪಡಿಸಿದರು.
ಕುಲಸಚಿವೆ ಬಿ.ಬಿ.ಸರೋಜಾ ಮಾತನಾಡಿ, ಹಸಿರು ಪ್ರತಿಯೊಬ್ಬರ ಉಸಿರು. ತನ್ನ ಬದುಕು, ಭವಿಷ್ಯವನ್ನು ಪ್ರಕೃತಿಯ ಮೂಲಕವೇ ರೂಪಿಸಿಕೊಳ್ಳುವ ಅನಿವಾರ್ಯತೆಯ ನಡುವೆ ಬದುಕಬೇಕು. ಆದರೆ ಸ್ವಾರ್ಥಕ್ಕಾಗಿ ಪರಿಸರ ನಾಶ ಮಾಡುತ್ತಿರುವ ಪ್ರಕರಣಗಳು ಹೆಚ್ಚಾಗಿರುವುದು ಆತಂಕಕಾರಿ ಸಂಗತಿ ಎಂದು ವಿಷಾದ ವ್ಯಕ್ತಪಡಿಸಿದರು.

ಪರೀಕ್ಷಾಂಗ ಕುಲಸಚಿವೆ ಪ್ರೊ.ಎಚ್.ಎಸ್.ಅನಿತಾ, ಡೀನ್‌ರಾದ ಪ್ರೊ.ವೆಂಕಟರಾವ್ ಪಲಾಟಿ, ಡಾ.ಕೆ.ವೆಂಕಟೇಶ, ಎನ್.ಎಸ್.ಎಸ್. ಅಧಿಕಾರಿ ಡಾ. ಅಶೋಕಕುಮಾರ ಪಾಳೇದ, ಪ್ರಾಧ್ಯಾಪಕರಾದ ಬಸವರಾಜ ಬೆನಕನಹಳ್ಳಿ, ಅಂಬಿಕಾದೇವಿ, ಕುಮಾರ ಸಿದ್ಧಮಲ್ಲಪ್ಪ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!