ಮಾರುಕಟ್ಟೆ ಹೂಡಿಕೆ ದೇಶದ ಅಭಿವೃದ್ದಿಗೆ ಪೂರಕ – ರಾಮಶೇಷನ್

ದಾವಣಗೆರೆ: ಸಾರ್ವಜನಿಕರು ಮಾರುಕಟ್ಟೆಯಲ್ಲಿ ಕ್ಷೇತ್ರದಲ್ಲಿ ಹೂಡಿಕೆ ಮಾಡುವ ಹಣ ದೇಶದ ಪ್ರಗತಿಗೆ ಪೂರಕವಾಗಲಿದೆ ಎಂದು ನಿವೃತ್ತ ಐಎಎಸ್ ಅಧಿಕಾರಿ ರಾಮಶೇಷನ್ ಹೇಳಿದರು.
ಶುಕ್ರವಾರ ಜಿಲ್ಲಾಡಳಿತ ಭವನದ ತುಂಗಭದ್ರ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ‘ಆಜಾದಿ ಕಾ ಅಮೃತ ಮಹೋತ್ಸವ’ ಸಮ್ಮೇಳನದ ವರ್ಚುಯಲ್ ಕಾರ್ಯಕ್ರಮದ ನಂತರ ನಡೆದ ವೇದಿಕೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಪ್ರಸ್ತುತ ದಿನಮಾನಗಳಲ್ಲಿ ಮಾರುಕಟ್ಟೆ ವ್ಯವಸ್ಥೆ ಬದಲಾಗಿದೆ, ಆಧುನಿಕತೆಗೆ ತಕ್ಕಂತೆ ಮಾರುಕಟ್ಟೆ ಮೌಲ್ಯವನ್ನು ತಿಳಿದುಕೊಂಡು ಹೂಡಿಕೆ ಮಾಡಬೇಕು. ಮಾರುಕಟ್ಟೆ ಕ್ಷೇತ್ರದಲ್ಲಿ ಬಂಡವಾಳವನ್ನು ಹೂಡಿಕೆ ಮಾಡುವಾಗ ಅದರ ಬಗ್ಗೆ ಸಂಪೂರ್ಣವಾಗಿ ಅಧ್ಯಯನ ನಡೆಸಬೇಕು. 1997 ರಿಂದ ಇಲ್ಲಿಯವರೆಗೆ ದೇಶದ ಆದಾಯ 350 ಪಟ್ಟು ಹೆಚ್ಚಿದೆ, ದೇಶದ ಆದಾಯ ಹೆಚ್ಚಾಗುತ್ತಿರುವ ಸಂದರ್ಭದಲ್ಲಿ ಶ್ರೀಸಾಮಾನ್ಯರ ಆದಾಯ ಕಡಿಮೆಯಾಗುತ್ತಿರುವುದನ್ನು ನಾವು ಗಮನಿಸಬಹುದು. ಅಂದು 1 ಲಕ್ಷ ರೂ ಗೆ 17 ಸಾವಿರ ಬಡ್ಡಿ ಬರುತಿತ್ತು, ಆದರೆ ಇಂದು 5.5 ಸಾವಿರ ಬರ್ತಿದೆ ಹೀಗೆಕೆ ದೇಶದ ಆದಾಯ ವೃದ್ದಿಯಾದರೆ ನಮ್ಮ ಹಣಕ್ಕೂ ಹೆಚ್ಚು ಬಡ್ಡಿ ಬರಬೇಕಲ್ಲವೇ? ಹಾಗಾಗಿ ಮಾರ್ಕೆಟ್ ಸ್ಥಿರತೆಯ ಬಗೆಗೆ ಜ್ಞಾನ ಬೆಳೆಸಿಕೊಳ್ಳಬೇಕಾಗುತ್ತದೆ, ಮಾರ್ಕೆಟ್ ಎಂಬುದು ಒಂದು ರೀತಿಯ ಜೂಜಾಟವಿದ್ದಂತೆ ಹಾಗಾಗಿ ಮಾರ್ಕೆಟ್ ಬಗೆಗೆ ಆಳವಾಗಿ ಅಧ್ಯಯನಮಾಡಿ ಹಣ ತೊಡಗಿಸಿದರೆ ಆದಾಯ ಖಂಡಿತ. ದಶಕಗಳ ಹಿಂದೆ ಬ್ಯಾಂಕ್‍ನಲ್ಲಿ ಸಾಲ ಅಥವಾ ದುಡ್ಡು ಪಡೆಯಬೇಕಾದರೆ ಹಲವಾರು ದಿನಗಳು ಬೇಕಾಗುತ್ತಿದ್ದವು ಆದರೆ ಪ್ರಸ್ತುತ ದಿನಮಾನಗಳಲ್ಲಿ ಕೆಲವೇ ಗಂಟೆಗಳಲ್ಲಿ ಹಣ ಪಡೆಯಬಹುದಾಗಿದೆ. ಹಿಂದಿನ ಕಾಲಘಟ್ಟದಲ್ಲಿ ಜಮೀನು, ಬಂಗಾರದ ಮೇಲೆ ಹಣ ಹೂಡಿಕೆ ಮಾಡಲಾಗುತ್ತಿತ್ತು, ಆದರೆ ವರ್ತಮಾನದಲ್ಲಿ ಸರಿಯಾದ ಪ್ರಮಾಣದಲ್ಲಿ ಮಾರುಕಟ್ಟೆ ಮೌಲ್ಯವನ್ನು ತಿಳಿದು ಹೂಡಿಕೆ ಮಾಡಿದರೆ ಇಲ್ಲಿಯೂ ಕೂಡ ಲಾಭಗಳಿಸಬಹುದು, ಮಾರುಕಟ್ಟೆಯಲ್ಲಿನ ಷೇರುಗಳ ಏರಿಳಿತದ ಬಗೆಗೆ ಹೆಚ್ಚು ತಿಳಿದು ಹಣ ವಿನಿಯೋಜಿಸಿ ಎಂದರು.

ದಾವಣಗೆರೆ ವಿ.ವಿ.ಯ ಪ್ರಾಧ್ಯಾಪಕರಾದ ಡಾ. ಹುಚ್ಚೇಗೌಡ ಮಾತನಾಡಿ, ಇಂದು ಭಾರತದ ಆರ್ಥಿಕತೆ 3.21 ಟ್ರಿಲಿಯನ್‍ಗಳಷ್ಟಿದ್ದು, ಆರ್ಥಿಕತೆಯಲ್ಲಿ 5 ನೇ ಸ್ಥಾನದಲ್ಲಿದ್ದೇವೆ, 1992 ಕ್ಕಿಂತ ಮೊದಲು ಕೃಷಿ ಕ್ಷೇತ್ರ ಜಿಡಿಪಿ ಗೆ ನೆರವಾಗುತಿತ್ತು, ನಂತರ ಬಂದ ಹೊಸ ಆರ್ಥಿಕ ನೀತಿ ಹೂಡಿಕೆ ವಾತಾವರಣವನ್ನೇ ಬದಲಾಯಿಸಿತು. ಇಂದು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದ ಹಣ ತೀವ್ರಗತಿಯಲ್ಲಿ ವೃದ್ದಿಯಾಗುತ್ತಿದೆ.ಇದು ದೇಶದ ಪ್ರಗತಿಗೂ ಸಹಕಾರಿಯಾಗಿದ್ದು ನಾವೂ ದೇಶದ ಪ್ರಗತಿಯಲ್ಲಿ ಪಾಲುದಾರರಾಗೋಣ ಎಂದರು.
ಹರಿಹರದ ಕಿರ್ಲೋಸ್ಕರ್ ಕಂಪೆನಿಯ ಬಿಪ್ಲವ್ ಕುಮಾರ್ ಬಿಶ್ವಾಸ್ ಮಾತನಾಡಿ ಇಂದು ಸಾರ್ವಜನಿಕರಲ್ಲಿ ಹೂಡಿಕೆ ಪ್ರವೃತ್ತಿ ಹೆಚ್ಚಾಗುತ್ತಿದೆ,ಇತ್ತೀಚಿನ ವರದಿಯ ಪ್ರಕಾರ ಶೇ.24 ರಷ್ಟು ಮಹಿಳೆಯರು ಹೋಡಿಕೆ ಮಾಡುತಿದ್ದಾರೆ ಹಾಗೂ ಶೇ. 6 ರಷ್ಟು ಗ್ರಾಮೀಣ ಪ್ರದೇಶದ ಜನರು ಹೂಡಿಕೆಯಲ್ಲಿ ತೊಡಗಿಕೊಂಡಿದ್ದಾರೆಂದರು.
ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಮಾತನಾಡಿ, ದೇಶದ 75 ಮಹಾನಗರಗಳಲ್ಲಿ ಆಜಾದಿ ಕಾ ಅಮೃತ ಮಹೋತ್ಸವ ಸಮ್ಮೇಳನ ನಡೆಯುತ್ತಿದೆ, ಅದರಲ್ಲಿ ದಾವಣಗೆರೆಯೂ ಆಯ್ಕೆಯಾಗಿರುವುದು ಹೆಮ್ಮೆಯ ಸಂಗತಿಯಾಗಿದೆ. ಮಾರುಕಟ್ಟೆ ಮೌಲ್ಯ, ಬಂಡವಾಳ ಹೂಡಿಕೆ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಸಲುವಾಗಿ ಸಂಪನ್ಮೂಲ ವ್ಯಕ್ತಿಗಳಿಂದ ಮಾರುಕಟ್ಟೆ ಕ್ಷೇತ್ರದ ಬಗ್ಗೆ ತಿಳಿಸಿಕೊಡಲಾಗುತ್ತದೆ, ಆದ್ದರಿಂದ ಎಲ್ಲರಿಗೂ ಸಮ್ಮೇಳನದ ಸದುಪಯೋಗವಾಗಲಿ ಎಂದರು.

ಕಾರ್ಯಕ್ರಮದಲ್ಲಿ ಹರಿಹರದ ಬಿರ್ಲಾ ಕಂಪನಿ ಅಧಿಕಾರಿ ಅರುಣ್ ಕುಮಾರ್, ಉಪವಿಭಾಗಾಧಿಕಾರಿ ದುರ್ಗಾಶ್ರೀ ಸೇರಿದಂತೆ ವಿವಿಧ ಜಿಲ್ಲಾ ಮಟ್ಟದ ಅಧಿಕಾರಿಗಳು, ಬಂಡವಾಳ ಹೂಡಿಕೆದಾರರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!