ನಾಳೆ ಎಸ್ಸೆಸ್ಸೆಲ್ಸಿ ರಿಸಲ್ಟ್: ಫಲಿತಾಂಶ ನೋಡಲು ಹೀಗೆ ಮಾಡಿ
ಬೆಂಗಳೂರು: 2022–23ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯ ಫಲಿತಾಂಶ ನಾಳೆ (ಸೋಮವಾರ ಮೇ, 8) ಪ್ರಕಟವಾಗಲಿದೆ ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಹೇಳಿದೆ.
ಬೆಳಗ್ಗೆ 10 ಗಂಟೆಗೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯಲ್ಲಿ ಫಲಿತಾಂಶ ಸಂಬಂಧ ಸುದ್ದಿಗೋಷ್ಠಿ ನಡೆಯಲಿದೆ. ನಂತರ ಫಲಿತಾಂಶ ಪ್ರಕಟಿಸಲಾಗುವುದು.
ಮಧ್ಯಾಹ್ನ 11 ಗಂಟೆ ನಂತರ ಇಲಾಖೆಯ ವೆಬ್‌ಸೈಟ್ https://karresults.nic.in/ನಲ್ಲಿ ಫಲಿತಾಂಶ ಪ್ರಕಟವಾಗಲಿದೆ.
ರಾಜ್ಯದ 15,498 ಪ್ರೌಢಶಾಲೆಗಳ 8.42 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗೆ ಹೆಸರು ನೋಂದಾಯಿಸಿಕೊಂಡಿದ್ದರು. ಮಾರ್ಚ್ 31ರಿಂದ ಏ.15ರವರೆಗೆ 3,305 ಕೇಂದ್ರಗಳಲ್ಲಿ ಪರೀಕ್ಷೆಗಳು ನಡೆದಿದ್ದವು. ಎಲ್ಲ ಜಿಲ್ಲಾ ಕೇಂದ್ರಗಳಲ್ಲೂ ಮೌಲ್ಯಮಾಪನಕ್ಕೆ ವ್ಯವಸ್ಥೆ ಮಾಡಲಾಗಿತ್ತು. 63 ಸಾವಿರ ಶಿಕ್ಷಕರು ಮೌಲ್ಯಮಾಪನ ಕಾರ್ಯದಲ್ಲಿ ಭಾಗವಹಿಸಿದ್ದರು.
ನಾಳೆ ಮಧ್ಯಾಹ್ನ ಆಯಾ ಶಾಲೆಗಳಲ್ಲೂ ಫಲಿತಾಂಶ ಪ್ರಕಟಿಸಲಾಗುತ್ತದೆ.ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿರುವ ಫೋನ್ ನಂಬರ್‌ಗಳಿಗೆ ಎಸ್‌ಎಂಎಸ್ ಮೂಲಕ ಫಲಿತಾಂಶ ಕಳುಹಿಸಲಾಗುತ್ತದೆ ಎಂದು ಪ್ರಕಟಣೆ ತಿಳಿಸಿದೆ.