ಸಾಣೇಹಳ್ಳಿ ವಿದ್ಯಾರ್ಥಿ ಸಂಘಗಳ ಉಧ್ಘಾಟನೆ ಮತ್ತು ಪ್ರತಿಭಾ ಪುರಸ್ಕಾರ

ಸಾಣೇಹಳ್ಳಿ ವಿದ್ಯಾರ್ಥಿ ಸಂಘಗಳ ಉಧ್ಘಾಟನೆ ಮತ್ತು ಪ್ರತಿಭಾ  ಪುರಸ್ಕಾರ

ಸಾಣೇಹಳ್ಳಿ ; ಇಲ್ಲಿನ ಶ್ರೀ ಗುರುಪಾದೇಶ್ವರ ಪ್ರೌಢಶಾಲೆ ಮತ್ತು ಶ್ರೀ ಶಿವಕುಮಾರ ಹಿರಿಯ ಪ್ರಾಥಮಿಕ ಶಾಲೆಗಳ ಸಂಯುಕ್ತಾಶ್ರಯದಲ್ಲಿ ಶ್ರೀ ಶಿವಕುಮಾರ ರಂಗಮಂದಿರದಲ್ಲಿ ಆಯೋಜಿಸಿದ್ದ ೨೦೨೩-೨೪ ನೆಯ ಸಾಲಿನ `ವಿದ್ಯಾರ್ಥಿ ಸಂಘಗಳ ಉದ್ಘಾಟನೆ ಮತ್ತು ಪ್ರತಿಭಾ ಪುರಸ್ಕಾರ’ ಸಮಾರಂಭದ ಸಾನ್ನಿಧ್ಯ ವಹಿಸಿದ್ದ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ ಸಾಧನೆಗೆ ಯಾವುದೇ ಅಡ್ಡ ದಾರಿಗಳು ಇರುವುದಿಲ್ಲ; ಇರುವುದೊಂದೇ ದಾರಿ ಅದು ಪರಿಶ್ರಮದ ದಾರಿ.

ಸಾಣೇಹಳ್ಳಿ ವಿದ್ಯಾರ್ಥಿ ಸಂಘಗಳ ಉಧ್ಘಾಟನೆ ಮತ್ತು ಪ್ರತಿಭಾ  ಪುರಸ್ಕಾರ

ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ನಕಾರಾತ್ಮಕ ಭಾವನೆಗಳನ್ನು ಬಿಟ್ಟು ಸಕಾರಾತ್ಮಕ ಭಾವನೆಗಳನ್ನು ಬೆಳೆಸಿಕೊಳ್ಳಬೇಕು. ಆದರೆ ಇಂದು ದೊಡ್ಡ-ದೊಡ್ಡ ಸ್ಥಾನಗಳಲ್ಲಿರುವವರೇ ಅಡ್ಡ ದಾರಿ ಹಿಡಿದು ಬದುಕಿನಲ್ಲಿ
ವಿಫಲರಾಗುತ್ತಿರುವುದನ್ನು ಕಾಣುತ್ತಿದ್ದೇವೆ.

ಇದಕ್ಕೆ ಮುಖ್ಯವಾದ ಕಾರಣ ಮನೆ ಮತ್ತು ಶಾಲೆಗಳಲ್ಲಿ ಸಕಾರಾತ್ಮಕವಾದ ಸಂಸ್ಕಾರ ದೊರೆಯದೇ ಇರುವುದು.ಮನೆಯಲ್ಲಿ ತಂದೆ-ತಾಯಿ-ಬಂದುಬಾಂಧವರು ಮತ್ತು ಶಾಲೆಯಲ್ಲಿ ಶಿಕ್ಷಕರು ವಿದ್ಯಾಭ್ಯಾಸದ ಜೊತೆಗೆ ಸಂಸ್ಕಾರ ನೀಡುವ ಕೆಲಸವನ್ನೂ ಮಾಡಬೇಕು. ಮಗು ಸ್ವಲ್ಪ ಸಾಧನೆ ಮಾಡಿದರೂ ಬೆನ್ನು ತಟ್ಟಿ ಪ್ರೋತ್ಸಾಹಿಸಬೇಕು.

ಸಾಣೇಹಳ್ಳಿ ವಿದ್ಯಾರ್ಥಿ ಸಂಘಗಳ ಉಧ್ಘಾಟನೆ ಮತ್ತು ಪ್ರತಿಭಾ  ಪುರಸ್ಕಾರ

ಅಡ್ಡ ದಾರಿ ಹಿಡಿದು ಹೆಚ್ಚು ಅಂಕ ಗಳಿಸಿ ಪಾಸಾಗುವುದಕ್ಕಿಂತ ಫೇಲಾಗುವುದೇ ಉತ್ತಮವೆಂದು ತಿಳಿ ಹೇಳಬೇಕು. ಫೇಲಾಗುವುದು ಅವಮಾನವಲ್ಲ; ಅದು ಅನುಭವವನ್ನು ಗಟ್ಟಿಗೊಳಿಸುವುದು ಎನ್ನುವುದನ್ನು ಮನವರಿಕೆ ಮಾಡಿಕೊಡಬೇಕು.

ಇದಕ್ಕೆ ಫೇಲು-ಫೇಲಾಗುತ್ತಲೇ ರ‍್ಯಾಂಕ್ ಬಂದಿರುವ ನಮ್ಮ ಬದುಕೇ ಉದಾಹರಣೆ. ಇಲ್ಲಿನ ಪ್ರೌಢಶಾಲೆಯಲ್ಲಿ ಕಳೆದ ಬಾರಿ ಎಸ್ ಎಸ್ ಎಲ್ ಸಿ ಓದುತ್ತಿದ್ದ ಪಲ್ಲವಿ ಎನ್ನುವ ವಿದ್ಯಾರ್ಥಿನಿ ಆಟೋದಿಂದ ಬಿದ್ದು ತಲೆಬುರುಡೆಗೆ ಗಾಯವಾಗಿ ಸುಮಾರು ೨೦ ದಿನಗಳ ಕಾಲ ಎಚ್ಚರವಿಲ್ಲದೆ ಆಸ್ಪತ್ರೆಯಲ್ಲಿ ಮಲಗಿದ್ದಳು. ಆಗ ನಾವು ವೈದ್ಯರನ್ನು ಸಂಪರ್ಕಿಸಿ ಎಷ್ಟು ಖರ್ಚಾದರೂ ಪರವಾಗಿಲ್ಲ ಚಿಕಿತ್ಸೆ ಕೊಡಿ ಎಂದಾಗ ಅವರು ಹೇಳಿದ್ದು; ಬುದ್ದಿ ನಾವು ನಮ್ಮ ಪ್ರಯತ್ನ ಮಾಡುತ್ತಿದ್ದೇವೆ.

ಸಾಣೇಹಳ್ಳಿ ವಿದ್ಯಾರ್ಥಿ ಸಂಘಗಳ ಉಧ್ಘಾಟನೆ ಮತ್ತು ಪ್ರತಿಭಾ  ಪುರಸ್ಕಾರ

ಆದರೆ ಈ ಮಗು ಉಳಿಯುವುದು ಕಷ್ಟ ಎಂದು. ಆದರೆ ಪಲ್ಲವಿ ಜೀವನ್ಮರಣದ ಮಧ್ಯೆ ಹೊರಾಡಿ ಬದುಕಿ ಬಂದಿದ್ದಾಳೆ. ಅಷ್ಟೇ ಅಲ್ಲ ೫೩೦ ಅಂಕಗಳನ್ನು ಪಡೆದುಕೊಂಡಿದ್ದಾಳೆ. ಇದು ಎಲ್ಲರೂ ಹೆಮ್ಮೆ ಪಡಬೇಕಾದ
ವಿಷಯ. ಪಲ್ಲವಿಯ ಆತ್ಮವಿಶ್ವಾಸ, ಛಲ ಮಕ್ಕಳೆಲ್ಲರಿಗೂ ಮಾದರಿಯಾದುದು. ಯಾವ ಮಕ್ಕಳೂ ದಡ್ಡರಲ್ಲ. ಇರುವ ಬುದ್ದಿಯನ್ನು ಸತತ ಪರಿಶ್ರಮದ ಮೂಲಕ ಉತ್ತಮ ಗೊಳಿಸಿಕೊಂಡರೆ ಸಾಧನೆ ಸಿದ್ದಿಸುವುದು. ಪಠ್ಯವನ್ನು ಕಂಠಪಾಠ ಮಾಡದೆ ಪುನರ್ ಮನನದ ಮೂಲಕ ಕರಗತ ಮಾಡಿಕೊಂಡರೆ ಎಂಥದ್ದೇ ಪ್ರಶ್ನೆಗಳಿಗೆ ಉತ್ತರಿಸುವುದು ಸುಲಭವಾಗುವುದು.

ಈ ನಿಟ್ಟಿನಲ್ಲಿ ಶಿಕ್ಷಕರು ಜಡತ್ವ ಬಿಟ್ಟು ಪಠ್ಯಕ್ಕೆ ಪೂರಕವಾದ ಚಟುವಟಿಕೆಗಳನ್ನು ರೂಪಿಸಿಕೊಳ್ಳಬೇಕು. ಇಂಥ ಸ್ಪೂರ್ತಿದಾಯಕ ಕಾರ್ಯಕ್ರಮ ಮಕ್ಕಳ ನಾಳಿನ ಬಾಳಬುತ್ತಿಯಾಗಬಲ್ಲವು. ಹೆಚ್ಚಿನ ಮಕ್ಕಳಿಗೆ ಮದ್ರಾಸ್ ಐ ಬಂದಿದೆ. ಅದಕ್ಕೇನೂ ಭಯ ಪಡುವ ಅಗತ್ಯವಿಲ್ಲ. ಅದೊಂದು ಅಂಟು ರೋಗ. ವೈದ್ಯರ ಸಲಹೆಯಂತೆ ಸೂಕ್ತ ಚಿಕಿತ್ಸೆ ಪಡೆದುಕೊಂಡರೆ ಬೇಗ ಗುಣಮುಖರಾಗಬಹುದು. ಇನ್ನೊಬ್ಬರಿಗೆ ಹರಡದಂತೆ ಎಚ್ಚರಿಕೆ ವಹಿಸಬೇಕು.

ಸಾಣೇಹಳ್ಳಿ ವಿದ್ಯಾರ್ಥಿ ಸಂಘಗಳ ಉಧ್ಘಾಟನೆ ಮತ್ತು ಪ್ರತಿಭಾ  ಪುರಸ್ಕಾರ

ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ರವಿಶಂಕರ ರೆಡ್ಡಿಯವರ ನಿರಂತರ ಪರಿಶ್ರಮದ ಫಲವಾಗಿ ಈ ವರ್ಷ ಎಸ್ ಎಸ್ ಎಲ್ ಸಿ ಫಲಿತಾಂಶದಲ್ಲಿ ಜಿಲ್ಲೆ ರಾಜ್ಯದಲ್ಲಿಯೇ ಮೊದಲ ಸ್ಥಾನದಲ್ಲಿದೆ. ಅವರ ಈ ಪ್ರಯತ್ನ
ನಿರಂತರವಾಗಿ ಸಾಗಲಿ. ಹೊಸದಾಗಿ ಹೊಸದುರ್ಗ ಕ್ಷೇತ್ರಕ್ಕೆ ಕ್ಷೇತ್ರಶಿಕ್ಷಣಾಧಿಕಾರಿಗಳಾಗಿ ಸೈಯದ್ ಮೋಸಿನ್ ಬಂದಿದ್ದಾರೆ.

ಅವರು ಸಿರಿಗೆರೆಯಲ್ಲಿ ವಿದ್ಯಾಭ್ಯಾಸ ಪಡೆದವರು. ಅವರು ಈ ಹಿಂದೆ ಕ್ಷೇತ್ರಶಿಕ್ಷಣಾಧಿಕಾರಿಗಳಾಗಿದ್ದ ಜಯಪ್ಪನವರಂತೆ ತಾಲ್ಲೂಕಿನಲ್ಲಿ ಗುಣಮಟ್ಟದ ಶಿಕ್ಷಣ ನೀಡುವ ಕಾರ್ಯಯೋಜನೆಗಳನ್ನು ರೂಪಿಸಿ ಕಾರ್ಯಕಾರಿಗೊಳಿಸಲಿ. ಅದಕ್ಕೆ ಬೇಕಾದ ಸಲಹೆ-ಸಹಕಾರವನ್ನು ಶ್ರೀಮಠದಿಂದ ನೀಡಲಾಗುವುದು ಎಂದರು. ದೀಪ ಬೆಳಗಿಸುವುದರ ಮೂಲಕ ವಿದ್ಯಾರ್ಥಿ ಸಂಘಗಳ ಉದ್ಘಾಟನಾ ಕಾರ್ಯ
ನೆರವೇರಿಸಿದ ಚಿತ್ರದುರ್ಗ ಜಿಲ್ಲಾ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ

ಉಪನಿರ್ದೇಶಕರಾದ ಕೆ ರವಿಶಂಕರರೆಡ್ಡಿ ಮಾತನಾಡಿ ಇಲ್ಲಿನ ಆಶ್ರಮದ ಪ್ರಾಶಾಂತ ವಾತಾವರಣದಲ್ಲಿ ನಡೆಯುತ್ತಿರುವ ಈ ಕಾರ್ಯಕ್ರಮದಲ್ಲಿ ಭಾಗವಹಿಸಿರುವುದರಿಂದ ನನ್ನ ಒತ್ತಡ ನಿವಾರಣೆಯಾಗಿದೆ.

ಇದು ಬಹುಮುಖಿ ಪ್ರತಿಭೆಯ ಅನಾವರಣದ ಕಾರ್ಯಕ್ರಮ. ಮಗುವಿನ ಸರ್ವಾಂಗೀಣ ಅಭಿವೃದ್ಧಿಯೇ ಶಿಕ್ಷಣದ ಮೂಲ ಉದ್ದೇಶ. ಅಂಥ ಸರ್ವಪ್ರಯತ್ನಗಳು ಇಲ್ಲಿ ನಡೆಯುತ್ತಿರುತ್ತವೆ. ಪ್ರತಿಭೆ ಪರಿಶ್ರಮ ಪಡುವವರ ಸ್ವತ್ತೇ ಹೊರತು; ಸೋಮಾರಿಗಳದ್ದಲ್ಲ. ತಂದೆ-ತಾಯಿಗಳಿಗೆ ಹೆಸರು ಬರುವುದು ಮಕ್ಕಳ ವ್ಯಕ್ತಿತ್ವದಿಂದ. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಅತ್ಯಂತ ಪ್ರತಿಭಾವಂತರು. ಇಂದು ಅತ್ಯುನ್ನತ ಹುದ್ದೆಗಳನ್ನು ಅಲಂಕರಿಸಿದ್ದಾರೆ.

ಇದಕ್ಕೆ ನಾನೇ ಸಾಕ್ಷಿ. ನಾನು ಶೈಕ್ಷಣಿಕವಾಗಿ ಹಿಂದುಳಿದ ಚಳ್ಳಕೆರೆ ತಾಲ್ಲೂಕಿನವನು. ಕನ್ನಡ ಮಾಧ್ಯಮದಲ್ಲಿಯೇ ಓದಿದವನು. ಹಳ್ಳಿಮಕ್ಕಳು ದಡ್ಡರು, ಇವರಿಂದ ಏನೂ ಆಗದು ಎನ್ನುವವರು ತಮ್ಮ ಮನೋಭಾವನೆಯನ್ನು ಬದಲಾಯಿಸಿಕೊಳ್ಳಬೇಕಾಗಿದೆ. ನೈತಿಕತೆಯ ಕೊರತೆ ಎಲ್ಲೆಲ್ಲೂ ಎದ್ದು ಕಾಣುತ್ತಿದೆ.

 

ಇದರ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕಾಗಿರುವವರು ಶಿಕ್ಷಣ ಇಲಾಖೆಯವರಾದ ನಾವು. ಮೌಲ್ಯಗಳನ್ನು ಪುನರ್ ಸ್ಥಾಪನೆ ಮಾಡಬೇಕಾಗಿದೆ. ಸ್ವಾವಲಂಬೀ ಜೀವನದ ಮೂಲಕ ಸಂಸ್ಕಾರವಂತ ಜೀವನ ರೂಪಿಸಬೇಕಾಗಿದೆ. ಅನಾಥಾಶ್ರಮಗಳು, ವೃದ್ಧಾಶ್ರಮಗಳು ಹೆಚ್ಚಾಗುತ್ತಿರುವುದು ದುರದೃಷ್ಟಕರ ಸಂಗತಿ.

ಈ ಬಾರಿ ಚಿತ್ರದುರ್ಗ ಜಿಲ್ಲೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ರಾಜ್ಯದಲ್ಲಿ ಮೊದಲ ಸ್ಥಾನ ಪಡೆದಿರುವುದು ಹೆಮ್ಮೆ ತಂದಿದೆ. ಮಠಾಧೀಶರು, ರಾಜಕಾರಣಿಗಳು, ಅಧಿಕಾರಿಗಳು, ಶಿಕ್ಷಕರ ಶ್ರಮದಿಂದ ಇದು ಸಾಧ್ಯವಾಗಿದೆ. ಯಾರೂ ಚಿರಂಜೀವಿಯಾಗಿರಲು ಸಾಧ್ಯವಿಲ್ಲ. ಬದುಕಿರುವವರೆಗೆ ಏನಾದರೂ ಒಳಿತಿನ ಕೆಲಸ ಮಾಡಬೇಕು ಎಂದರು.

ಅತಿಥಿಗಳಾಗಿದ್ದ ಹೊಸದುರ್ಗ ಕ್ಷೇತ್ರ ಶಿಕ್ಷಣಾಧಿಕಾರಿ ಸೈಯದ್ ಮೋಸಿನ್ ಮಾತನಾಡಿ ನಾನು ತರಳಬಾಳು ಜಗದ್ಗುರು ವಿದ್ಯಾಸಂಸ್ಥೆಯ ವಿದ್ಯಾರ್ಥಿ. ಸಿರಿಗೆರೆಯಲ್ಲಿ ಓದಿದವನು. ನನ್ನದು ಹೊಳಲ್ಕೆರೆ ತಾಲ್ಲೂಕು ಕೊಳಹಾಳು ಗ್ರಾಮ. ಪ್ರಾಥಮಿಕ ಶಿಕ್ಷಣದ ನಂತರ ಮುಂದೆ ಎಲ್ಲಿ ಓದಬೇಕು ಎಂದು ತಿಳಿಯಾದಾಗಿತ್ತು. ಹಾಗೊಂದು ದಿನ ನಮ್ಮೂರಿಗೆ ಶ್ರೀ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮಿಗಳವರು ಬಂದಿದ್ದರು.
ಮಕ್ಕಳನ್ನೆಲ್ಲ ಕೂರಿಸಿಕೊಂಡು ಸಿರಿಗೆರೆಯಲ್ಲಿ ಹೈಸ್ಕೂಲ್‌ಶಿಕ್ಷಣ ಮುಂದುವರಿಸಲು ಮಾರ್ಗದರ್ಶನ ನೀಡಿದರು. ಅದರ ಫಲವಾಗಿ ನಾನು ಅಲ್ಲಿಯೇ ಹೈಸ್ಕೂಲು ಮತ್ತು ಪಿಯುಸಿ ವಿದ್ಯಾಭ್ಯಾಸವನ್ನು ಪೂರೈಸಿ ಈಗ ಕ್ಷೇತ್ರಶಿಕ್ಷಣಾಧಿಕಾರಿಯಂತಹ ಉನ್ನತ ಹುದ್ದೆಯನ್ನು ಅಲಂಕರಿಸುವಂತಾಗಿದೆ.

ಬಹುಷಃ ಸಿರಿಗೆರೆಯಲ್ಲಿ ವಿದ್ಯಾಭ್ಯಾಸ ಮಾಡದೇ ಇದ್ದಿದ್ದರೆ ಖಂಡಿತವಾಗಿಯೂ ನಾನು ಇಂಥ ಹುದ್ದೆಗೆ ಏರುತ್ತಿರಲಿಲ್ಲ. ಸಿರಿಗೆರೆಯಲ್ಲಿದ್ದಾಗ ಒಮ್ಮೆ ವಾರ್ಷಿಕ ಪರೀಕ್ಷೆಯ ನಡುವೆಯೇ ಯುಗಾದಿ ಹಬ್ಬ ಬಂದಿತ್ತು. ೩೫-೪೦ ವಿದ್ಯಾರ್ಥಿಗಳನ್ನು ಹೊರತುಪಡಿಸಿ ಹಾಸ್ಟೆಲ್ ವಿದ್ಯಾರ್ಥಿಗಳೆಲ್ಲ ಊರಿಗೆ ಹೋಗಿದ್ದರು.

ಅಂದು ನಮ್ಮ ಹಾಸ್ಟೆಲ್‌ಗೆ ಬಂದಿದ್ದ ಹಿರಿಯ ಶ್ರೀ ತರಳಬಾಳು ಜಗದ್ಗುರು ಶ್ರೀ ಶಿವಕುಮಾರ ಸ್ವಾಮಿಗಳು ಮಕ್ಕಳನ್ನೆಲ್ಲ ಒಂದೆಡೆ ಕೂರಿಸಿಕೊಂಡು ಪರಿಚಯ ಮಾಡಿಕೊಳ್ಳುತ್ತಿದ್ದರು. ಆಗ ನಾನು ಮುಸ್ಲೀಂ ಎಂದು
ತಿಳಿದು, ವಾರ್ಡ್ನ್ ಅವರನ್ನು ಕರೆದು ಈ ಹುಡುಗನಿಗೆ ಹಾಸ್ಟೆಲ್‌ನಲ್ಲಿ ವಿಭೂತಿ ಹಚ್ಚುವ ನಿರ್ಬಂಧ ಹೇರಬೇಡಿ, ಸ್ವ-ಇಚ್ಛೆಯಿಂದ ಬೇಕಾದರೆ ಹಚ್ಚಿಕೊಳ್ಳಲಿ.

ಇಂದು ಎಲ್ಲ ಮಕ್ಕಳಿಗೂ ಹಾಸ್ಟೆಲ್‌ನಲ್ಲಿಯೇ ಹೋಳಿಗೆ ಊಟ ಮಾಡಿಸಿರಿ ಎಂದ ಅವರ ಆ ಮಾತುಗಳು ನನ್ನ ಮನಸ್ಸಿನಲ್ಲಿ ಇನ್ನೂ ಅಚ್ಚಳಿಯದೇ ಉಳಿದಿವೆ. ನನಗೆ ವಿದ್ಯಾಬುದ್ದಿಯನ್ನು ಕೊಟ್ಟು ಮಾರ್ಗದರ್ಶನ ಮಾಡಿದಂತಹ ಶ್ರೀಗಳ ಪಕ್ಕದಲ್ಲಿ ಕೂರುವ ಸೌಭಾಗ್ಯ ದೊರೆತದ್ದು ನನ್ನ ಪುಣ್ಯ ವಿಶೇಷವೇ ಸರಿ.

ವಿದ್ಯಾರ್ಥಿಗಳನ್ನು ಎರಡು ರೀತಿಯಲ್ಲಿ ಗುರುತಿಸಬಹುದು; ಒಂದು ಹುಟ್ಟಿನಿಂದಲೇ ಬುದ್ಧಿವಂತರು. ಇನ್ನೊಂದು ಪರಿಶ್ರಮದಿಂದಾಗಿ ಬುದ್ಧಿವಂತರಾದವರು. ಹುಟ್ಟಿನಿಂದಲೇ ಬುದ್ಧಿವಂತರಾದವರು ತಮ್ಮ ನಿರ್ಲಕ್ಷ್ಯದಿಂದ ಅವನತಿಯ ಹಾದಿ ಹಿಡಿಯಬಹುದು.

ಆದರೆ ಪರಿಶ್ರಮದಿಂದ ಬುದ್ಧಿವಂತರಾದವರು ಎಂದೂ ಅವನತಿಯ ಹಾದಿ ತುಳಿಯುವುದಿಲ್ಲ. ಹೀಗಾಗಿ ಪರಿಶ್ರಮವೊಂದೇ ನಮ್ಮನ್ನು ಕಾಪಾಡುವ ದೈವ ಎಂದರು. ಮತ್ತೋರ್ವ ಮುಖ್ಯ ಅತಿಥಿಗಳಾಗಿದ್ದ ಶ್ರೀ ಶಿವಕುಮಾರ ವಿದ್ಯಾವರ್ಧಕ ಸಂಘ ಉಪಾಧ್ಯಕ್ಷರಾದ ಡಿ ವಿ ಗಂಗಾಧರಪ್ಪ ಮಾತನಾಡಿ ಶಾಲಾ ಸಂಸತ್ತಿಗೆ ಆಯ್ಕೆಯಾದ ವಿದ್ಯಾರ್ಥಿ ಪ್ರತಿನಿಧಿಗಳು ತಮ್ಮ ಹೊಣೆಗಾರಿಕೆಯನ್ನು ಅರಿತು ಕೆಲಸ ಕಾರ್ಯಗಳನ್ನು ಮಾಡಬೇಕು.

ಒಬ್ಬರೇ ಮಾಡುವ ಕೆಲಸಕ್ಕೂ ಸಂಘದ ಮೂಲಕ ಮಾಡುವ ಕೆಲಸಕ್ಕೂ ಬಹಳ ವ್ಯತ್ಯಾಸವಿರುತ್ತದೆ. ಸಂಘಕ್ಕೆ ಮಹತ್ತರ ಶಕ್ತಿ ಇರುತ್ತದೆ. ಅದನ್ನು ಸದ್ಬಳಕೆ ಮಾಡಿಕೊಂಡರೆ ಅಸಾಧ್ಯವಾದ ಕೆಲಸಗಳನ್ನೂ ಸಾಧ್ಯವಾಗಿಸಬಹುದು. ವಿದ್ಯಾರ್ಥಿಗಳಿಗೆ ಸಾಣೇಹಳ್ಳಿಯಲ್ಲಿ ಸಿಗುವ ಅವಕಾಶಗಳು ಬೇರೆಡೆ ಸಿಗಲಾರವು.

ಕಲೆ, ಸಾಹಿತ್ಯ, ಸಂಗೀತ, ನಾಟಕ ಮೊದಲಾದವುಗಳಿಂದಾಗಿ ಸಾಣೇಹಳ್ಳಿ ಪ್ರಸಿದ್ದ ಪಡೆದಿದೆ. ಇದರ ಹಿಂದೆ ಪಂಡಿತಾರಧ್ಯ ಶ್ರೀಗಳ ಶ್ರಮ ಅಪಾರವಾಗಿದೆ. ಪೂಜ್ಯರು ಜನರನ್ನು ಜಾಗೃತಗೊಳಿಸುವ ನಿಟ್ಟಿನಲ್ಲಿ ಸದಾ ಒಂದಿಲ್ಲೊಂದು ಚಟುವಟಿಕೆಗಳನ್ನು ಆಯೋಜಿಸುತ್ತಿರುತ್ತಾರೆ ಎಂದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಶ್ರೀ ಗುರುಪಾದೇಶ್ವರ ಪ್ರೌಢಶಾಲೆಯ ಸ್ಥಳೀಯ ಸಲಹಾ ಸಮಿತಿಯ ಅಧ್ಯಕ್ಷರಾದ ಎ ಸಿ ಚಂದ್ರಣ್ಣ ಮಾತನಾಡಿ ಸಾಮಾನ್ಯವಾಗಿ ಮನೆಯಲ್ಲಿ ಮಾತು ಕೇಳದ, ವಿದ್ಯಾಭ್ಯಾಸದಲ್ಲಿ ಹಿಂದುಳಿದ ಮಕ್ಕಳನ್ನು ಇಲ್ಲಿನ ಶಾಲೆಗಳಿಗೆ ತಂದು ಹಾಕುವ ಪದ್ಧತಿಯಿದೆ. ಅಂಥಹ ಮಕ್ಕಳನ್ನು ತಿದ್ದಿತೀಡಿ ಸಂಸ್ಕಾರವಂಥರನ್ನಾಗಿಸುವ ಮಹತ್ತರ ಜವಾಬ್ದಾರಿ ಇಲ್ಲಿನ ಶಿಕ್ಷಕರ ಮೇಲಿರುತ್ತದೆ.

ಆ ಜವಾಬ್ದಾರಿಯನ್ನು ಇಲ್ಲಿನ ಶಿಕ್ಷಕರು ಬಹಳ ಯಶಸ್ವಿಯಾಗಿ ನಿರ್ವಹಿಸುತ್ತಿದ್ದಾರೆ. ಈ ಕಾರಣಕ್ಕಾಗಿಯೇ ಇಲ್ಲಿಗೆ ವರ್ಷದಿಂದ ವರ್ಷಕ್ಕೆ ಬರುವ ಮಕ್ಕಳ ಸಂಖ್ಯೆ ಹೆಚ್ಚುತ್ತಿದೆ. ಅನೇಕ ಶಾಲೆಗಳಲ್ಲಿ ಮಕ್ಕಳ ದಾಖಲಾತಿ
ಆಗುತ್ತಿಲ್ಲ ಎನ್ನುವಾಗಲೇ ಇಲ್ಲಿನ ಶಾಲೆಯಲ್ಲಿ ಸೇರಿಸಿಕೊಳ್ಳಲು ಆಗುತ್ತಿಲ್ಲ ಎಂದು ವಾಪಾಸ್ ಕಳುಹಿಸುವ ಸ್ಥಿತಿ ಇದೆ.

ಇಲ್ಲಿನ ಮಕ್ಕಳು ಕೇವಲ ಪಠ್ಯದಲ್ಲಿ ಮಾತ್ರವಲ್ಲ; ಪಠ್ಯೇತರ ಚಟುವಟಿಕೆಗಳಾದ ಕ್ರೀಡೆ, ಸಂಗೀತ, ನೃತ್ಯ, ನಾಟಕ, ಭಾಷಣ ಮೊದಲಾದವುಗಳಲ್ಲೂ ಸದಾ ಮುಂದಿರುತ್ತಾರೆ. ಕಾರ್ಯಕ್ರಮ ನಿರ್ವಹಿಸುತ್ತಿರುವ ಮಕ್ಕಳಲ್ಲಿ ಕಾಗುಣಿತ ದೋಷ, ಉಚ್ಛಾರಣಾ ದೋಷ, ಸಭಾ ಕಂಪನಗಳನ್ನು ಕಾಣಲಾಗದು ಎಂದರು.

ಆರಂಭದಲ್ಲಿ ಪ್ರಾಸ್ತಾವಿಕವಾಗಿ ಅಧ್ಯಾಪಕ ಹೆಚ್ ಎಸ್ ದ್ಯಾಮೇಶ್ ಮಾತನಾಡಿದರು. ವಿದ್ಯಾರ್ಥಿಗಳು ವಚನಗೀತೆ ಮತ್ತು ಸಾಮೂಹಿಕ ಪ್ರಾರ್ಥನೆ ಆಕರ್ಷಕ ನೃತ್ಯರೂಪಕಗಳನ್ನು ನಡೆಸಿಕೊಟ್ಟರು. ಜಿ ಆರ್ ಸುಪ್ರಿಯಾ ಸ್ವಾಗತಿಸಿದರೆ, ಎಂ ಪ್ರತೀಕ್ಷಾ ವಂದಿಸಿದರು. ಜಾಹ್ನವಿ ಎಸ್ ಗೌಡ ಕಾರ್ಯಕ್ರಮ ನಡೆಸಿಕೊಟ್ಟರು.

ವೇದಿಕೆಯ ಮೇಲೆ ಮುಖ್ಯೋಪಾಧ್ಯಾಯರಾದ ಎನ್ ಹೆಚ್ ಹೊನ್ನೇಶಪ್ಪ, ವಿ ಬಿ ಚಳಗೇರಿ, ಎ ಎಸ್ ಶಿಲ್ಪಾ, ಬಿ ಎಸ್ ಶಿವಕುಮಾರ್ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಕಳೆದ ಸಾಲಿನಲ್ಲಿ ಅತಿ ಹೆಚ್ಚು ಅಂಕ ಪಡೆದು ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಬಹುಮಾನ ನೀಡಿ ಪುರಸ್ಕರಿಸಲಾಯಿತು. ಪುರಸ್ಕೃತ ವಿದ್ಯಾರ್ಥಿಗಳು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.

ಅಪಘಾತಕ್ಕೀಡಾಗಿ, ಶಸ್ತ್ರಚಿಕಿತ್ಸೆಗೆ ಒಳಗಾಗಿಯೂ ಧೃತಿಗೆಡದೆ ಎಸ್ ಎಸ್ ಎಲ್ ಸಿ ಪೂರಕ ಪರೀಕ್ಷೆಯಲ್ಲಿ ಜಿಲ್ಲೆಗೇ ಅತಿ ಹೆಚ್ಚು ಅಂಕ(೫೩೦)ಗಳನ್ನು ಪಡೆದ ಎನ್ ಕೆ ಪಲ್ಲವಿಯನ್ನು ವಿಶೇಷವಾಗಿ ಅಭಿನಂದಿಸಲಾಯಿತು.

ಸಾಣೇಹಳ್ಳಿ ವಿದ್ಯಾರ್ಥಿ ಸಂಘಗಳ ಉಧ್ಘಾಟನೆ ಮತ್ತು ಪ್ರತಿಭಾ  ಪುರಸ್ಕಾರ

Leave a Reply

Your email address will not be published. Required fields are marked *

error: Content is protected !!