ಫೆ.17 ರಂದು ಕೊನೆಯ ಬಜೆಟ್ ಮಂಡನೆ

ಬಜೆಟ್ ಮಂಡನೆ
ಬೆಂಗಳೂರು : ಕರ್ನಾಟಕದ ಕೊನೆಯ ಬಜೆಟ್ ಮಂಡನೆ ಇದೇ ಫೆ.17 ರಂದು ಮಂಡನೆಯಾಗಲಿದೆ. ಸಿಎಂ ಬಸವರಾಜ ಬೊಮ್ಮಾಯಿ ಅವರ ಕೊನೇ ಬಜೆಟ್ ಮಂಡನೆ ಇದಾಗಿದ್ದು, ಇಂದಿನಿಂದ ವಿಧಾನಮಂಡಲ ಅಧಿವೇಶನ ನಡೆಯಲಿದೆ. ಫೆ.24ರವರೆಗೂ ವಿಧಾನಸೌಧ ಸುತ್ತಮುತ್ತ 2 ಕಿಮೀ ವ್ಯಾಪ್ತಿಯಲ್ಲಿ ಭದ್ರತಾ ದೃಷ್ಟಿಯಿಂದ ನಿಷೇಧಾಜ್ಞೆ ಜಾರಿಗೆ ತರಲಾಗಿದೆ.
ಈ ಪ್ರದೇಶದಲ್ಲಿ 5ಕ್ಕಿಂತ ಹೆಚ್ಚು ಜನರು ಗುಂಪು ಸೇರುವಂತಿಲ್ಲ. ಮೆರವಣಿಗೆ, ಪ್ರತಿಭಟನೆ, ಸಭೆಗಳನ್ನು ಆಯೋಜಿಸುವಂತಿಲ್ಲ. ಯಾವುದೇ ಪ್ರತಿಕೃತಿಗಳ ದಹನ ಮಾಡುವುದಾಗಲೀ, ಪ್ರದರ್ಶನ ಮಾಡುವುದಾಗಲೀ ನಿಷೇಧ ಇದೆ ಎಂದು ಬೆಂಗಳೂರುನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಆದೇಶ ಹೊರಡಿಸಿದ್ದಾರೆ.
ಈ ಬಾರಿಯ ವಿಧಾನಸಭೆಯ 15ನೇ ಮತ್ತು ಕೊನೆಯ ವಿಧಾನಮಂಡಲ ಅಧಿವೇಶನ ಇಂದು ಆರಂಭವಾಗುತ್ತಿದೆ. ಇಂದು ಮೊದಲ ದಿನ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋತ್ ವಿಧಾನಸಭೆಯಲ್ಲಿ ಜಂಟಿ ಅಧಿವೇಶನ ಉದ್ದೇಶಿಸಿ ಮಾತನಾಡಲಿದ್ದಾರೆ. ಅಧಿವೇಶನ ಆರಂಭದ ಮೊದಲ ವಾರ ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆ ಮತ್ತು ವಂದನಾ ನಿರ್ಣಯ ನಡೆಯಲಿದೆ.
ಈ ಬಾರಿ ವಿವಿಧ ಕಾರಣಗಳಿಂದ ಬಜೆಟ್ ಮೇಲೆ ಸದಸ್ಯರಿಗೆ ಆಸಕ್ತಿ ಕಡಿಮೆ ಇದೆ ಎನ್ನುವಂತಹ ಮಾತು ಕೇಳಿಬರುತ್ತಿದೆ. ಈ ಬಜೆಟ್ ಮುಗಿದ ಬಳಿಕ ಕೆಲ ದಿನಗಳಲ್ಲಿ ರಾಜ್ಯ ವಿಧಾನಸಭಾ ಚುನಾವಣೆ ಘೋಷಣೆ ಆಗುವ ಸಾಧ್ಯತೆ ಇದೆ. ಬಜೆಟ್ನಲ್ಲಿ ಜನಪ್ರಿಯ ಯೋಜನೆಗಳನ್ನು ಸಿಎಂ ಬೊಮ್ಮಾಯಿ ಘೋಷಿಸಿ ಅನುದಾನ ಬಿಡುಗಡೆ ಮಾಡಿದರೂ ನೀತಿ ಸಂಹಿತೆ ಕಾರಣಕ್ಕೆ ಅದನ್ನು ಖರ್ಚು ಮಾಡಲು ಆಗುವುದಿಲ್ಲ. ಬಜೆಟ್ ಅಧಿವೇಶನದ ಮೊದಲ ವಾರವು ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆ ಮತ್ತು ವಂದನಾ ನಿರ್ಣಯಕ್ಕೆ ಸೀಮಿತವಾದರೆ ಬಜೆಟ್ ಮೇಲೆ ಸಿಗುವ ಕಾಲಾವಕಾಶ ಕಡಿಮೆ ಇದೆ. ಹೀಗಾಗಿ, ವಿಪಕ್ಷಗಳ ಸದಸ್ಯರೂ ಹೆಚ್ಚು ಆಸಕ್ತಿ ಹೊಂದಿಲ್ಲ ಎನ್ನಲಾಗುತ್ತಿದೆ.