ಸಮಾಜ ಬದಲಾವಣೆಗೆ ನೈತಿಕ ಬಲ ತುಂಬಿದವರು ಸಾವಿತ್ರಿಬಾಯಿ ಫುಲೆ, ಫಾತಿಮಾ ಶೇಖ್: ಕಲ್ಪಿತರಾಣಿ

ದಾವಣಗೆರೆ: ದೇಶದ ಪ್ರಥಮ ಶಿಕ್ಷಕಿಯರಾದ ಫಾತಿಮಾ ಶೇಖ್ ಮತ್ತು ಸಾವಿತ್ರಿಬಾಯಿ ಫುಲೆ ಮಕ್ಕಳಲ್ಲಿ ಸಮಾಜ ಬದಲಾವಣೆಯ ನೈತಿಕ ಬೆಂಬಲ ತುಂಬಿದ ಮಹಾನ್ ಸಾಧಕಿಯರು ಎಂದು ಫುಲೆ ಮಾರ್ಗಿ ಪ್ರಶಸ್ತಿ ಪುರಸ್ಕೃತೆ ಬಿ.ಪಿ.ಕಲ್ಪಿತರಾಣಿ ಅಭಿಪ್ರಾಯ ವ್ಯಕ್ತಪಡಿಸಿದರು.

ನಗರದ ನೆರಳು ಬೀಡಿ ಕಾರ್ಮಿಕರ ಯೂನಿಯನ್ ಕಚೇರಿಯಲ್ಲಿ ಯೂನಿಯನ್ ಆಶ್ರಯದಲ್ಲಿ ಏರ್ಪಡಿಸಿದ್ದ ಭಾರತದ ಪ್ರಥಮ ಶಿಕ್ಷಕಿಯಾದ ಫಾತಿಮಾ ಶೇಖ್ ಮತ್ತು ಸಾವಿತ್ರಿಬಾಯಿ ಫುಲೆ ಜನ್ಮದಿನ ಕುರಿತ ವಿಚಾರ ಸಂಕಿರಣ ಮತ್ತು ಫಾತಿಮಾ ಶೇಖ್ ಕುರಿತ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಹೆಣ್ಣು ಮಕ್ಕಳಿಗೆ ಮತ್ತು ವಿಧವಾ ಮಹಿಳೆಯರಿಗೆ ಹುಟ್ಟಿದ ಮಕ್ಕಳಲ್ಲಿ ಓದಿನ ಅರಿವು ಮೂಡಿಸಿದ ಕೀರ್ತಿ ಈ ಇಬ್ಬರೂ ಪ್ರಥಮ ಶಿಕ್ಷಕಿಯರಿಗೆ ಸಲ್ಲುತ್ತದೆ. ಇಂತಹ ಮಹಾನ್ ಸಾಧಕಿಯರ ಹುಟ್ಟಿದ ವರ್ಷವನ್ನು ನಿಖರವಾಗಿ ದಾಖಲಿಸದೇ ಇರುವುದು ಮತ್ತು ಇವರಿಬ್ಬರ ಕಾರ್ಯಗಳ ಬಗ್ಗೆ ಇತಿಹಾಸಕಾರರು ದಾಖಲೆ ಮಾಡದಿರುವುದು ಶೋಷಿತ ಕುಟುಂಬದಿಂದ ಬಂದ ಮಹಿಳೆಯರಿಗೆ ಮಾಡಿದ ಅಪಚಾರವಾಗಿದೆ ಎಂದರು.

ಅನಕ್ಷರಸ್ಥೆಯಾಗಿದ್ದ ಸಾವಿತ್ರಿಬಾಯಿ ಫುಲೆ ಅವರಿಗೆ ಜ್ಯೋತಿ ಬಾಫುಲೆ ಅವರು ಸುಶಿಕ್ಷಿತಳನ್ನಾಗಿಸಿ ಸಮಾಜದ ಮಕ್ಕಳಿಗೆ ಅಕ್ಷರ ಕಲಿಸಲು ಹೊರ ಜಗತ್ತಿಗೆ ಬಿಟ್ಟಾಗ ಅವರ ಕುಟುಂಬಸ್ಥರಿಂದಲೇ ವಿರೋಧ ವ್ಯಕ್ತವಾಗಿತ್ತಲ್ಲದೇ ಫುಲೆ ದಂಪತಿಯನ್ನು ಮನೆಯಿಂದ ಹೊರ ಹಾಕಿದಾಗ ಉಸ್ಮಾನ್ ಶೇಖ್ ಮತ್ತು ಫಾತಿಮಾ ಶೇಖ್ ಅವರಿಗೆ ಬೆಂಬಲವಾಗಿ ನಿಲ್ಲುತ್ತಾರೆ. ಅಲ್ಲದೇ ಸಾವಿತ್ರಿ ಬಾಯಿ ಫುಲೆ ಮತ್ತು ಫಾತಿಮಾ ಶೇಖ್ ಇಬ್ಬರೂ ಸೇರಿ ಹೆಣ್ಣು ಮಕ್ಕಳಿಗೆ ಮತ್ತು ಶೋಷಿತ ಸಮುದಾಯಗಳಲ್ಲಿ ಹುಟ್ಟಿದ ಮಕ್ಕಳಿಗೆ ಶಿಕ್ಷಣ ನೀಡಲು ಶಾಲೆಗಳನ್ನು ತೆರೆಯುತ್ತಾರೆ. ಈ ವೇಳೆ ಸಂಪ್ರದಾಯವಾದಿಗಳಿಂದ ವಿರೋಧ ವ್ಯಕ್ತವಾದರೂ ಇವರಿಬ್ಬರೂ ಯಾವುದೇ ದಬ್ಬಾಳಿಕೆ, ಅವಮಾನಕ್ಕೆ ಜಗ್ಗದೆ ಶಿಕ್ಷಣ ಕೊಡುವ ಕೆಲಸ ಮಾಡಿದ್ದಾರೆ ಎಂದರು.

ವಕೀಲ ಎಲ್.ಹೆಚ್. ಅರುಣ್ ಕುಮಾರ್ ಮಾತನಾಡಿ, ಅಕ್ಷರ ವಂಚಿತರಿಗೆ ವಿದ್ಯೆಯ ಹಣತೆ ಬೆಳಗಿಸಿದ ಸಾವಿತ್ರಿ ಬಾಯಿ ಪುಲೆ ಮತ್ತು ಫಾತೀಮ ಶೇಖ್ ಧೀಮಂತ ಮಹಿಳೆಯರಾಗಿದ್ದಾರೆ. ಇವರಿಬ್ಬರ ಕೊಡುಗೆಯನ್ನು ಇಂದಿನ ಸಮಾಜ ನೆನಪಿಸಿಕೊಳ್ಳಬೇಕು. ಮಹಿಳಾ ಹೋರಾಟದ ಮೊದಲ ಪರಂಪರೆಯನ್ನು ೧೯ನೇ ಶತಮಾನದಲ್ಲಿ ಪ್ರಾರಂಭಿಸುವ ಮೂಲಕ ಇಂದಿನ ಮಹಿಳಾ ಹೋರಾಟಕ್ಕೂ ಫಾತೀಮ ಶೇಖ್ ಸ್ಪೂರ್ತಿಯಾಗಿದ್ಧಾರೆ. ಸಾವಿತ್ರಿ ಬಾಯಿ ಪುಲೆ ಮತ್ತು ಫಾತೀಮಾಶೇಖ್, ಜಾತಿ, ಮತ, ಧರ್ಮ ಮೀರಿ ಇಬ್ಬರು ಮಹಿಳೆಯರು ಸಾಮಾಜಿಕ ಸ್ವಾತಂತ್ರ್ಯದ ಹೋರಾಟಕ್ಕೆ ಶಿಕ್ಷಣ ಅತಿಮುಖ್ಯ ಎಂದು ಸಾರಿದರು ಎಂದರು.

ಸಾಹಿತಿ ಬಿ.ಶ್ರೀನಿವಾಸ್, ಯೂನಿಯನ್ ಅಧ್ಯಕ್ಷೆ ಜಬೀನಾ ಖಾನಂ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಅಲ್ಪಸಂಖ್ಯಾತರ ಜಾಗೃತಿ ವೇದಿಕೆಯ ಅಬ್ದುಲ್‌ಘನಿ ತಾಹೀರ್, ಮುಸ್ಲಿಂ ಮಹಿಳಾ ಒಕ್ಕೂಟದ ರಜಿಯಾ ಬಾನು, ನೆರಳು ಬೀಡಿ ಕಾರ್ಮಿಕರ ಪ್ರಧಾನ ಕಾರ್ಯದರ್ಶಿ ಎಂ. ಕರಿಬಸಪ್ಪ, ಸಬ್ರಿನ್‌ತಾಜ್, ನಾಜೀಮಾ ಬಾನು ಮತ್ತಿತರರಿದ್ದರು.

Leave a Reply

Your email address will not be published. Required fields are marked *

error: Content is protected !!