ಮುಸ್ಲಿಮರು ಇತರೆ ಸಮಾಜದೊಂದಿಗೆ ಉತ್ತಮ ಬಾಂಧವ್ಯ ಹೊಂದಿರಿ;ಸಿ.ಎಂ. ಇಬ್ರಾಹಿಂ

ಸಿ.ಎಂ. ಇಬ್ರಾಹಿಂ
ದಾವಣಗೆರೆ: ಮುಸ್ಲಿಂ ಸಮುದಾಯ ರಾಜಕೀಯ ಕ್ಷೇತ್ರದಲ್ಲಿ ಸೂಕ್ತ ಸ್ಥಾನಮಾನಗಳನ್ನು ಪಡೆಯಲು ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಇತರೆ ಸಮಾಜಗಳ ಜೊತೆಗೆ ಉತ್ತಮ ಬಾಂಧವ್ಯ ಹೊಂದುವ ಮೂಲಕ ಕ್ಷೇತ್ರಗಳಲ್ಲಿ ಜಯ ಸಾಧಿಸಬೇಕಿದೆ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ ಸಲಹೆ ನೀಡಿದರು.
ಇಲ್ಲಿನ ಅಖ್ತರ್ ರಜಾ ವೃತ್ತದ ರಿಂಗ್ ರಸ್ತೆಯಲ್ಲಿರುವ ಜೆಡಿಎಸ್ ಪಕ್ಷದ ದಕ್ಷಿಣ ಕ್ಷೇತ್ರದ ಅಭ್ಯರ್ಥಿ ಜೆ.ಅಮಾನುಲ್ಲಾ ಖಾನ್ ನಿವಾಸಕ್ಕೆ ಭೇಟಿ ನೀಡಿದ್ದ ವೇಳೆ ನಡೆದ ಮುಸ್ಲಿಂ ಸಮಾಜ ಬಾಂಧವರ ಸಭೆಯಲ್ಲಿ ಮಾತನಾಡಿದರು.
ನಾನು ರಾಜಕೀಯದಲ್ಲಿ ಇರುವುದೇ ನನ್ನ ಸಮುದಾಯಕ್ಕೆ ರಾಜಕೀಯ ಶಕ್ತಿ ತುಂಬಲು. ಯಾವ ಪಕ್ಷ ಮುಸ್ಲಿಮರಿಗೆ ದ್ವೇಷ ಮಾಡುತ್ತಿತ್ತೋ ಅಂತಹ ಪಕ್ಷವೇ ಈಗ ಮುಸ್ಲಿಮರ ಬಗ್ಗೆ ಮೃದುಧೋರಣೆ ತೋರುವಂತೆ ತನ್ನ ಪಕ್ಷದವರಿಗೆ ಸೂಚನೆ ನೀಡುತ್ತಿರುವುದು ಮುಸ್ಲಿಮರ ಮತಗಳ ಶಕ್ತಿ ಏನೆಂಬುದನ್ನು ನಮಗೆ ಸಾರಿ ಹೇಳುತ್ತಿದೆ ಎಂದು ಅವರು ತಿಳಿಸಿದರು.
ನನ್ನ ಮೇಲೆ ನಂಬಿಕೆ, ವಿಶ್ವಾಸವಿಟ್ಟು ಮಾಜಿ ಪ್ರಧಾನಿ ಎಚ್.ದೇವೇಗೌಡರು, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾಸಮಿ ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷನಾಗಿ ಮಾಡಿದ್ದಾರೆ. ಇದು ನಮ್ಮ ಸಮಾಜದ ಧಾರ್ಮಿಕ ಗುರುಗಳು, ಬುದ್ಧಿಜೀವಿಗಳು, ಚಿಂತಕರು, ಸಮಾನ ಮನಸ್ಕರು, ಸಾಮಾನ್ಯ ಮುಸ್ಲಿಮರು ಇಂದು ತೀರ್ಮಾನ ಮಾಡಬೇಕಾದ ಅನಿವಾರ್ಯತೆ, ಅಗತ್ಯತೆಯೂ ಇದೆ ಎಂದು ಅವರು ವಿವರಿಸಿದರು.
ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಬೇರೆ ಸಮುದಾಯಗಳ ಜೊತೆಗೆ ಬೆರೆತು, ಮುಸ್ಲಿಮರು ಒಮ್ಮತದ ತೀರ್ಮಾನಕ್ಕೆ ಬಂದರೆ ಜೆಡಿಎಸ್ ಅಭ್ಯರ್ಥಿ ಜೆ.ಅಮಾನುಲ್ಲಾ ಖಾನ್ ಗೆಲುವು ಸಾಧ್ಯವಾಗಲಿದೆ. ಶೀಘ್ರವೇ ರಾಜ್ಯ ವಿಧಾನಸಭೆ ಚುನಾವಣೆ ಘೋಷಣೆಯಾಗಲಿದೆ. ಜೆಡಿಎಸ್ ಪಕ್ಷವೇ ಅಧಿಕಾರಕ್ಕೆ ಬರಲಿದೆ. ಇಂತಹದ್ದೊಂದು ಬದಲಾವಣೆ ಬರಬೇಕೆಂದರೆ ಸಮಸ್ತ ಮುಸ್ಲಿಂ ಬಾಂಧವರು ಎಲ್ಲಾ ಸಮುದಾಯಗಳ ವಿಶ್ವಾಸ ಗಳಿಸಿ, ಜೆಡಿಎಸ್ ಗೆಲುವಿಗೆ ಶ್ರಮಿಸಬೇಕು. ದಾವಣಗೆರೆ ದಕ್ಷಿಣ
ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಜೆಡಿಎಸ್‌ಗೆ ಅವಕಾಶ ಮಾಡಿಕೊಡಿ ಎಂದು ಅವರು ಮನವಿ ಮಾಡಿದರು.
ಸಮುದಾಯದ ಧಾರ್ಮಿಕ ಗುರುಗಳ ಸಾನಿಧ್ಯ ವಹಿಸಿದ್ದರು. ಜೆಡಿಎಸ್ ಪಕ್ಷದ ದಕ್ಷಿಣ ಕ್ಷೇತ್ರದ ಅಭ್ಯರ್ಥಿ ಜೆ.ಅಮಾನುಲ್ಲಾ ಖಾನ್, ಪಕ್ಷದ ರಾಜ್ಯ ಕಾರ್ಯದರ್ಶಿ ಟಿ.ಅಸ್ಗರ್, ಮುಖಂಡರಾದ ಶಹನವಾಜ್ ಖಾನ್, ವಕೀಲ ನಜೀರ್ ಅಹಮ್ಮದ್, ಇಂಜಿನಿಯರ್ ಸಮೀರ್, ಶಫೀವುಲ್ಲಾ ಮತ್ತಿತರರು ಇದ್ದರು.