ಕೆಹೆಚ್‌ಬಿ ಕಾಲೋನಿಯಲ್ಲಿ ರಸ್ತೆ ಕಾಮಗಾರಿ ಕಳಪೆ; ಗಡಿಗುಡಾಳ್ ಆರೋಪ

ಕೆಹೆಚ್‌ಬಿ ಕಾಲೋನಿಯಲ್ಲಿ ರಸ್ತೆ ಕಾಮಗಾರಿ ಕಳಪೆ; ಗಡಿಗುಡಾಳ್ ಆರೋಪ

ದಾವಣಗೆರೆ: ಮಹಾನಗರ ಪಾಲಿಕೆಯ ೪೪ನೇ ವಾರ್ಡ್ ನ ಶಾಮನೂರು ಮತ್ತು ಹೊಸಕುಂದವಾಡದ ಕೆಹೆಚ್ ಬಿ ಮೊದಲನೇ ಹಂತದ ಪ್ರದೇಶದಲ್ಲಿ ನಡೆಸುತ್ತಿರುವ ರಸ್ತೆ ಡಾಂಬರೀಕರಣ ಕಳಪೆ ಗುಣಮಟ್ಟದಿಂದ ಕೂಡಿದೆ ಎಂಬ ಆರೋಪ ಸ್ಥಳೀಯರಿಂದ ಕೇಳಿ ಬಂದ ಕಾರಣ ಸ್ಥಳಕ್ಕೆ ಮಹಾನಗರ ಪಾಲಿಕೆ ವಿರೋಧ ಪಕ್ಷದ ನಾಯಕ ಗಡಿಗುಡಾಳ್ ಮಂಜುನಾಥ್ ಭೇಟಿ ನೀಡಿ ಪರಿಶೀಲಿಸಿದರು. ಗುಣಮಟ್ಟದ ಕಾಮಗಾರಿ ನಡೆಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜನನಿಬಿಡ ಮತ್ತು ಜನರು ವಾಸ ಮಾಡುತ್ತಿರುವ ಪ್ರದೇಶಗಳಲ್ಲಿ ರಸ್ತೆ ಡಾಂಬರೀಕರಣ ಮಾಡಿಲ್ಲ. ಬೀದಿ ದೀಪ ಅಳವಡಿಕೆ ಮಾಡಿಲ್ಲ. ಈಗ ಮಾಡುತ್ತಿರುವ ರಸ್ತೆ ಡಾಂಬರೀಕರಣ ಕಳಪೆಯಿಂದ ಕೂಡಿದೆ. ಮೇಲೆ ಮೇಲೆ ರಸ್ತೆ ಮಾಡಲಾಗುತ್ತಿದ್ದು, ವೈರ್ ಗಳು ಕಾಣಿಸುತ್ತಿವೆ. ಈ ಬಗ್ಗೆ ಸಂಬಂಧಪಟ್ಟವರಿಗೆ ಮನವಿ ಮಾಡಿದ್ದರೂ ಪ್ರಯೋಜನ ಇಲ್ಲ. ಈ ಹಿನ್ನೆಲೆಯಲ್ಲಿ ಪಾಲಿಕೆ ವಿಪಕ್ಷ ನಾಯಕ ಗಡಿಗುಡಾಳ್ ಮಂಜುನಾಥ್ ಅವರ ಗಮನಕ್ಕೆ ತಂದೆವು. ಸ್ಥಳಕ್ಕೆ ಬಂದಾಗ ಅವರೂ ಪರಿಶೀಲಿಸಿದ್ದಾರೆ ಎಂದು ಸ್ಥಳೀಯರು ಮಾಹಿತಿ ನೀಡಿದರು.

ಕೆಹೆಚ್ ಬಿ ಕಾಲೋನಿಯ ಮೊದಲನೇ ಹಂತದಲ್ಲಿ ಯಾರೂ ವಾಸ ಮಾಡುತ್ತಿಲ್ಲದ ಪ್ರದೇಶದಲ್ಲಿ ಕೆಲಸ ನಡೆಯುತ್ತಿದೆ. ಇದಕ್ಕೆ ನಮ್ಮ ಅಭ್ಯಂತರ ಇಲ್ಲ. ಜನರು, ವಾಹನಗಳ ಓಡಾಟದ ಪ್ರದೇಶದಲ್ಲಿ ರಸ್ತೆ ಹಾಳಾಗಿದೆ. ಇಲ್ಲಿ ಮೊದಲು ಸರಿಪಡಿಸಲಿ. ಅನುದಾನ ಇದ್ದರೆ ಅಲ್ಲಿಯೂ ಮಾಡಲಿ. ಇದಕ್ಕೆ ನಮ್ಮ ಅಭ್ಯಂತರ ಏನಿಲ್ಲ. ತುರ್ತಾಗಿ ಎಲ್ಲಿ ಕೆಲಸ ಆಗಬೇಕೋ ಅಲ್ಲಿ ಮಾಡಲಿ. ಅದನ್ನು ಬಿಟ್ಟು ಜನರೇ ವಾಸ ಮಾಡದ ಪ್ರದೇಶದಲ್ಲಿ ರಸ್ತೆ ಡಾಂಬರೀಕರಣ ಮಾಡಿದರೆ ಹೇಗೆ? ಜನರಿಗಿಂತ ಜನವಾಸ ಮಾಡದ ಪ್ರದೇಶದಲ್ಲಿ ಆಸಕ್ತಿ ಏಕೆ ಎಂಬ ಅನುಮಾನ ಮೂಡುತ್ತಿದೆ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದರು.

ರಸ್ತೆ ಡಾಂಬರೀಕರಣ ಕೆಲಸ ಗುಣಮಟ್ಟದ್ದಾಗಬೇಕು. ಕಳಪೆ ಕಾಮಗಾರಿ ನಡೆಸಿದರೆ ಸಹಿಸಲ್ಲ. ಆದ್ಯತೆ ಪ್ರಕಾರ ಕಾಮಗಾರಿ ನಿರ್ವಹಿಸಿ. ಜನನಿಬಿಡ ಪ್ರದೇಶದಲ್ಲಿ ಮೊದಲು ಕಾಮಗಾರಿ ನಡೆಸಲಿ. ಆಮೇಲೆ ಖಾಲಿ ಇರುವ ನಿವೇಶನಗಳಿರುವ ಕಡೆ ರಸ್ತೆ ಮಾಡಲಿ. ಆದಷ್ಟು ಬೇಗ ಬೀದಿದೀಪ ಅಳವಡಿಸಬೇಕು ಎಂದು ಅಧಿಕಾರಿಗಳಿಗೆ ಮಂಜುನಾಥ್ ಸೂಚಿಸಿದರು.

ಈ ವೇಳೆ ಮಾತನಾಡಿದ ಪಾಲಿಕೆ ಸದಸ್ಯ ಕಲ್ಲಳ್ಳಿ ನಾಗರಾಜ್, ಪಾಲಿಕೆಯ ಮಾಜಿ ಸದಸ್ಯ ಹುಲ್ಲುಮನೆ ಗಣೇಶ್, ಅಧಿಕಾರಿಗಳು ಹಾಗೂ ಸ್ಥಳೀಯರು ಹಾಜರಿದ್ದರು.

Leave a Reply

Your email address will not be published. Required fields are marked *

error: Content is protected !!