ವೇಶ್ಯಾವಾಟಿಕೆ : ಮಾಲ್, ಪಾರ್ಕ್, ಥಿಯೇಟರ್‌ಗಳಲ್ಲಿ ಆಮಿಷ!
ಮಂಗಳೂರು: ಅಪ್ರಾಪ್ತ ವಯಸ್ಸಿನ ಬಾಲಕಿಯರನ್ನು (ವಿದ್ಯಾರ್ಥಿನಿಯರು) ಬಳಸಿ ನಡೆಯುತ್ತಿದ್ದ ಹೈಟೆಕ್ ವೇಶ್ಯಾವಾಟಿಕೆ ದಂಧೆ ಕಳೆದ ತಿಂಗಳು ಮಂಗಳೂರಿನಲ್ಲಿ ಬೆಳಕಿಗೆ ಬಂದಿದ್ದು ಪೊಲೀಸ್ ತನಿಖೆ ಮುಂದುವರಿದಿದೆ. ದಂಧೆಗೆ ಬಾಲಕಿಯರನ್ನು ಕರೆತರಲು ಪಿಂಪ್‌ಗಳು ಮಾಲ್, ಸಿನೆಮಾ ಥಿಯೇಟರ್, ಹೊಟೇಲ್, ಪಾರ್ಕ್ ಮೊದಲಾದೆಡೆ ಹಲವು ದಿನಗಳ ಕಾಲ ಹೊಂಚು ಹಾಕಿರುವುದು ತನಿಖೆ ವೇಳೆ ಗೊತ್ತಾಗಿದೆ. ಅಲ್ಲದೆ ಹೆಚ್ಚಾಗಿ ಬಡವರ್ಗದ ವಿದ್ಯಾರ್ಥಿನಿಯರನ್ನೇ ಗುರಿ ಮಾಡಿರುವುದು ತಿಳಿದುಬಂದಿದೆ.
ವಿದ್ಯಾರ್ಥಿನಿಯರನ್ನು ನಿರಂತರವಾಗಿ ಗಮನಿಸುತ್ತಾ ಅವರ ಬೇಕು-ಬೇಡಗಳ ಬಗ್ಗೆ ತಿಳಿದು ಮಹಿಳಾ ಪಿಂಪ್‌ಗಳು ಬಲೆ ಬೀಸುತ್ತಾರೆ. ಮೊದಲಿಗೆ ಪರಿಚಯಸ್ಥರಂತೆ ವರ್ತಿಸುತ್ತಾರೆ. ಅದರಲ್ಲಿ ಯಶಸ್ವಿಯಾದರೆ ಮುಂದುವರಿಯುತ್ತಾರೆ. ಇಲ್ಲವಾದರೆ ಸಮಸ್ಯೆ ಇಲ್ಲವೇ ಸಹಾಯದ ಬಗ್ಗೆ ಮಾತು ಆರಂಭಿಸುತ್ತಾರೆ. ಹೆಣ್ಣು ಮಕ್ಕಳಿಗೆ ಹಿತವಾಗುವಂತೆ ಆತ್ಮೀಯವಾಗಿ ಮಾತಿಗಿಳಿದು ಅವರ ಸಂಪರ್ಕ ಸಾಧಿಸುತ್ತಾರೆ. ಮುಂದೆ ಗೆಳೆತನ ಸಾಧಿಸಿ ಕೆಲವೊಂದು ಸಹಾಯವನ್ನೂ ಪಿಂಪ್‌ಗಳು ಮಾಡುತ್ತಾರೆ. ಅಗತ್ಯವಿರುವ ಹಣ, ಬಟ್ಟೆ ಇನ್ನಿತರ ಗಿಫ್ಟ್ ಅನ್ನು ಕೊಡುತ್ತಾರೆ. ಮಾಲ್, ಹೊಟೇಲ್‌ಗಳಿಗೆ ಕರೆದೊಯ್ದು ಎಲ್ಲ ಬಿಲ್‌ಗಳನ್ನು ಪಾವತಿಸುತ್ತಾರೆ. ಐಷಾರಾಮಿ ಬದುಕಿನ ರುಚಿ ಹಿಡಿಸುತ್ತಾರೆ. ಆ ಬಳಿಕ ಹೀನ ಕೃತ್ಯ ಆರಂಭಿಸುತ್ತಾರೆ. ಬಲೆಗೆ ಬಿದ್ದ ಬಾಲಕಿಯ ಮೂಲಕ ಸಾಧ್ಯವಾದಷ್ಟು ಇತರ ಬಾಲಕಿಯರನ್ನು ತಮ್ಮ ತೆಕ್ಕೆಗೆ ಸೆಳೆಯಲು ತಂತ್ರ ಹೆಣೆಯುತ್ತಾರೆ.
ಆರಂಭದಲ್ಲಿ ಕೇಳಿದ್ದನ್ನೆಲ್ಲ ಕೊಡುವ ದಂಧೆಕೋರರು ಅನಂತರ ಬಾಲಕಿಯರ ಫೋಟೋ, ವೀಡಿಯೋವನ್ನು ತೆಗೆದಿಟ್ಟುಕೊಂಡು ಬ್ಲಾ÷್ಯಕ್‌ಮೇಲ್ ಆರಂಭಿಸುತ್ತಾರೆ. ಆಗ ಸಂತ್ರಸ್ತೆಯರು ಏನೂ ಮಾಡಲಾಗದ ಸ್ಥಿತಿಯಲ್ಲಿರುತ್ತಾರೆ. ಇದಕ್ಕೆ ಅಂಜದೆ ಪೊಲೀಸ್ ಅಧಿಕಾರಿಗಳ ಗಮನಕ್ಕೆ ತರಬೇಕು. ಅವರು ಗೌಪ್ಯತೆಯಿಂದ ಕಾರ್ಯಾಚರಣೆ ನಡೆಸುತ್ತಾರೆ.ಪ್ರಕರಣಕ್ಕೆ ಸಂಬಧಿಸಿ ಸಿಸಿಬಿ ಪೊಲೀಸರು ಈಗಾಗಲೇ 16 ಮಂದಿಯನ್ನು ಬಂಧಿಸಿದ್ದಾರೆ. ಪೋಕ್ಪೊ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಬಂಧಿತರಲ್ಲಿ ಮೂಡುಬಿದಿರೆ, ಉಳ್ಳಾಲ, ಕಾಸರ ಗೋಡಿನವರಿದ್ದಾರೆ. ವಿವಿಧ ರಾಜಕೀಯ ಮುಖಂಡರ ಸಹವರ್ತಿಗಳು, ರಾಜಕೀಯ ಪಕ್ಷಗಳಲ್ಲಿ ಸಕ್ರಿಯರಾಗಿರುವವರು ಕೂಡ ಸೇರಿದ್ದಾರೆ. ಇನ್ನೂ ಹಲವು ಪ್ರಭಾವಿಗಳು ಜಾಲದಲ್ಲಿ ತೊಡಗಿಸಿಕೊಂಡಿದ್ದಾರೆನ್ನಲಾಗಿದೆ.