ದಾವಣಗೆರೆ: ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಹಂತದಲ್ಲಿರುವಾಗಲೇ ಯಾವುದೇ ರೀತಿಯ ಟೋಲ್ ಶುಲ್ಕ ಹೆಚ್ಚಿಸಬಾರದೆಂಬ ಕೇಂದ್ರ ಸರ್ಕಾರದ ಆದೇಶವಿದ್ದರೂ ಸರಿಯಾದ ಮೂಲ ಸೌಕರ್ಯಗಳೇ ಇಲ್ಲದಿದ್ದರೂ ಟೋಲ್ ಸಂಗ್ರಹ ವಿರೋಧಿಸಿ ದಾವಣಗೆರೆ ಜಿಲ್ಲಾ ಲಾರಿ ಮಾಲೀಕರ ಮತ್ತು ಟ್ರಾನ್ಸಪೋರ್ಟ್ ಏಜೆಂಟರ ಸಂಘದಿಂದ ಹಾವೇರಿ ಜಿಲ್ಲೆ ಚಳಗೇರಿ ಟೋಲ್ ಬಳಿ ಪ್ರತಿಭಟನೆ ನಡೆಸಲಾಯಿತು.
ರಾಣೆಬೆನ್ನೂರು ತಾ. ಚಳಗೇರಿ ಟೋಲ್ ಗೇಟ್‌ನಲ್ಲಿ ಫೆ.೧೧ರಿಂದ ಅನ್ವಯವಾಗುವಂತೆ ಏಕಾಏಕಿ ಟೋಲ್ ಶುಲ್ಕ ದ್ವಿಗುಣಗೊಳಿಸಿದ್ದನ್ನು ವಿರೋಧಿಸಿ ಜಿಲ್ಲಾ ಲಾರಿ ಮಾಲೀಕರ ಮತ್ತು ಟ್ರಾನ್ಸಪೋರ್ಟ್ ಏಜೆಂಟರ ಸಂಘದ ಅಧ್ಯಕ್ಷ ಸೈಯದ್ ಸೈಫುಲ್ಲಾ ನೇತೃತ್ವದಲ್ಲಿ ಚಳಗೇರಿ ಟೋಲ್ ಬಂದ್ ಮಾಡಿದ ಲಾರಿ ಮಾಲೀಕರು, ಟ್ರಾನ್ಸಪೋರ್ಟ್ ಏಜೆಂಟರು ಪ್ರತಿಭಟಿಸಿ, ಟೋಲ್‌ನ ಶ್ರೀ ಸಾಯಿ ಎಂಟರ್‌ಪ್ರೈಸಸ್‌ನ ಪ್ರತಿನಿಧಿಗೆ ಮನವಿ ಸಲ್ಲಿಸಿದರು.
ಇದೇ ವೇಳೆ ಮಾತನಾಡಿದ ಸೈಯದ್ ಸೈಫುಲ್ಲಾ, ಏಕಾಏಕಿ ಟೋಲ್ ಶುಲ್ಕ ದ್ವಿಗುಣವಗೊಳಿಸಿದ್ದು ಸರಿಯಲ್ಲ. ರಸ್ತೆಯು ಇನ್ನೂ ನಿರ್ಮಾಣ ಹಂತದಲ್ಲಿದೆ. ಹೀಗಿರುವಾಗ ಯಾವುದೇ ರೀತಿಯ ಟೋಲ್ ಶುಲ್ಕ ಹೆಚ್ಚಿಸಬಾರದು ಎಂಬುದಾಗಿ ಕೇಂದ್ರ ಸರ್ಕಾರದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಆದೇಶವೇ ಇದೆ. ಆದರೂ, ಚಳಗೇರಿ ಟೋಲ್‌ನಲ್ಲಿ ಲಾರಿ ಮತ್ತಿತರೆ ವಾಹನಗಳಿಂದ ಸುಲಿಗೆ ಮಾತ್ರ ನಿಂತಿಲ್ಲ ಎಂದು ಕಿಡಿಕಾರಿದರು.
ಸಂಘದ ಕಾರ್ಯದರ್ಶಿ ಎಸ್.ಕೆ.ಮಲ್ಲಿಕಾರ್ಜುನ, ಖಜಾಂಚಿ ಮಹಾಂತೇಶ ವಿ.ಒಣರೊಟ್ಟಿ, ಸೋಗಿ ಮುರುಗೇಶ, ಸಂಘದ ರಾಣೆಬೆನ್ನೂರು ಅಧ್ಯಕ್ಷ ಪ್ರಸಾದ್, ಹರಿಹರ ಸಂಘ, ಮಲೆಬೆನ್ನೂರು ಸಂಘದ ಪದಾಧಿಕಾರಿಗಳು, ಲಾರಿ ಮಾಲೀಕರು, ಟ್ರಾನ್ಸಪೋರ್ಟ್ ಏಜೆಂಟರು ಸ್ಥಳದಲ್ಲಿ ಹಾಜರಿದ್ದರು.
