ರೋಬೋಟಿಕ್ಸ್ ವಿಭಾಗದ ವಿದ್ಯಾರ್ಥಿಗಳಿಗೆ ಕೌಶಲ್ಯ ತರಬೇತಿ ಕಾರ್ಯಕ್ರಮ
ದಾವಣಗೆರೆ: ನಗರದ ಪ್ರತಿಷ್ಠಿತ ಜಿಎಂ ತಾಂತ್ರಿಕ ಮಹಾವಿದ್ಯಾಲಯದ ರೋಬೋಟಿಕ್ ಅಂಡ್ ಆಟೋಮೇಷನ್ ಇಂಜಿನಿಯರಿಂಗ್ ವಿಭಾಗದ ಮೊದಲನೇ ಮತ್ತು ಮೂರನೇ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ಮೂರು ದಿನದ ಕೌಶಲ್ಯ ತರಬೇತಿ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಲಾಯಿತು.
ಈ ತರಬೇತಿ ಕಾರ್ಯಕ್ರಮವನ್ನು ಪುಣೆಮೂಲದ ಗ್ಲೋಬಲ್ ಟ್ಯಾಲೆಂಟ್ ಟ್ರ್ಯಾಕ್ ಸಂಸ್ಥೆಯ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲರಾದ ಡಾ ಸಂಜಯ್ ಪಾಂಡೆ ಎಂ ಬಿ, ಕೈಗಾರಿಕಾ ಕೌಶಲ್ಯತೆಗಳೊಡನೆ ತಾಳ್ಮೆ, ಶಿಸ್ತು ಮತ್ತು ಸಮಯದ ಬಳಕೆ ಅತಿ ಮಹತ್ತರವಾದ ಪಾತ್ರವನ್ನು ವಹಿಸುತ್ತದೆ. ಇವುಗಳನ್ನು ಅಳವಡಿಸಿಕೊಂಡಿದ್ದೆ ಆದರೆ ಉತ್ತಮ ಪ್ರಜೆಯಾಗಿ ಹೊರಹೊಮ್ಮಬಹುದೆಂದು ತಿಳಿಸಿದರು.
ವಿಭಾಗದ ಮುಖ್ಯಸ್ಥರಾದ ಡಾ ರಾಜಕುಮಾರ್ ಮಾತನಾಡಿ, ಮುಂದಿನ ದಿನಗಳಲ್ಲಿ ಸಾಕಷ್ಟು ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳು ನಡೆಯಲಿದ್ದು, ಅವುಗಳಲ್ಲಿ ಭಾಗವಹಿಸಿ ಉತ್ತಮ ನಾಯಕತ್ವ ಗುಣಗಳನ್ನು ಗಳಿಸಿಕೊಳ್ಳಬಹುದಾಗಿದೆ, ಕೈಗಾರಿಕಾ ಅವಶ್ಯಕತೆಗಳಿಗೆ ಪೂರಕವಾಗಿ ವಿದ್ಯಾರ್ಥಿಗಳನ್ನು ತರಬೇತಿಗೊಳಿಸಿ, ಮುಂದಿನ ಕ್ಯಾಂಪಸ್ ಸಂದರ್ಶನ ಪ್ರಕ್ರಿಯೆಗೆ ಸಜ್ಜುಗೊಳಿಸಲಾಗುವುದು ಎಂದು ತಿಳಿಸಿದರು. ಕಾರ್ಯಕ್ರಮದ ನಿರೂಪಣೆಯನ್ನು ವಿಭಾಗದ ಪ್ರೊ ಶಿವಪ್ರಕಾಶ್ ನಡೆಸಿಕೊಟ್ಟರು.
ಕಾರ್ಯಕ್ರಮದಲ್ಲಿ ಕಾಲೇಜಿನ ತರಬೇತಿ ಮತ್ತು ಉದ್ಯೋಗ ವಿಭಾಗದ ಮುಖ್ಯಸ್ಥರಾದ ಶ್ರೀ ತೇಜಸ್ವಿ ಕಟ್ಟಿಮನಿ ಟಿ ಆರ್, ಸಂಪನ್ಮೂಲ ವ್ಯಕ್ತಿಯಾಗಿ ಶ್ರೀ ಸಾಯಿ ರಮಣ, ವಿಭಾಗದ ಅಧ್ಯಾಪಕ ವರ್ಗದವರು ಮತ್ತು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.