ಟೈಲರ್ ಗಳು ತಮ್ಮ ಕೆಲಸವನ್ನ ಕೀಳಾಗಿ ಕಾಣಬಾರದು – ಓಂಕಾರ ಶಿವಾಚಾರ್ಯ ಶ್ರೀ ಪುರವರ್ಗ ಮಠ

ದಾವಣಗೆರೆ: ಟೈಲರ್ ಗಳು ಧರ್ಮದ ಕಾಯಕ ಮಾಡುತ್ತಿದ್ದು, ನಿಮ್ಮ ಕೆಲಸವನ್ನು ಕೀಳಾಗಿ ಕಾಣಬಾರದೆಂದು ಪುರವರ್ಗ ಮಠದ ಓಂಕಾರ ಶಿವಾಚಾರ್ಯ ಶ್ರೀಗಳು ಹೇಳಿದರು.

ಶನಿವಾರ ನಗರದ ರೋಟರಿ ಬಾಲಭವನದಲ್ಲಿ ಹಮ್ಮಿಕೊಂಡಿದ್ದ ರಾಜ್ಯ ಹೊಲಿಗೆ ಕೆಲಸಗಾರರ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾ ಘಟಕದ ಉದ್ಘಾಟನೆ, ಕಾರ್ಮಿಕ ಇಲಾಖೆಯಿಂದ ದರ್ಜಿಗಳಿಗೆ ಫುಡ್‌ಕಿಟ್ ವಿತರಣೆ ಹಾಗೂ ಹಿರಿಯ ದರ್ಜಿಗಳಿಗೆ ಸನ್ಮಾನ ಸಮಾರಂಭದ ಸಾನಿಧ್ಯ ವಹಿಸಿ ಅವರು ಮಾತನಾಡಿದರು.

ಸಮಾಜದಲ್ಲಿ ಕತ್ತರಿ ಹಾಕುವವರೆ ಹೆಚ್ಚು. ಆದರೆ ನೀವು ಬಟ್ಟೆಯನ್ನು ಸೂಜಿದಾರದಿಂದ ಕೂಡಿಸಿ ಮರ್ಯಾದೆ ಮುಚ್ಚುವ ಕೆಲಸ ಮಾಡುತ್ತಿದ್ದೀರಿ‌. ನಿಮ್ಮ ಕೆಲಸಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ ಎಂದು ಹೇಳಿದರು.

ಕೌಶಲ್ಯ ಗೊತ್ತಿರುವ ಯಾರಾದರೂ ಟೈಲರಿಂಗ್ ವೃತ್ತಿ ಮಾಡಬಹುದು. ದರ್ಜಿಗಳು ಅನ್ನಕ್ಕೆ ದಾರಿ ಮಾಡಿಕೊಟ್ಟಿರುವ ಕುಲಕಸುಬನ್ನು ಕೀಳರಿಮೆಯಿಂದ ಕಾಣಬೇಡಿ. ಒಂದೊಳ್ಳೆಯ ವೃತ್ತಿಯನ್ನು ಆಯ್ಕೆ ಮಾಡಿಕೊಂಡಿರುವ ಬಗ್ಗೆ ಸಂತಸಪಡಿ ಎಂದು ಕಿವಿಮಾತು ಹೇಳಿದರು.

ಸರ್ಕಾರ ಕಾರ್ಮಿಕರ ಅಭಿವೃದ್ಧಿಗೆ ಸಾಕಷ್ಟು ಅನುದಾನವನ್ನು ಇಟ್ಟಿದೆ. ಆದರೆ, ಅದನ್ನು ಸರಿಯಾಗಿ ನಿಮಗೆ ಮುಟ್ಟಿಸುವ ಕೆಲಸವಾಗುತ್ತಿಲ್ಲ. ಸರ್ಕಾರ ಕೊಡಮಾಡುವ ಸೌಲಭ್ಯಗಳನ್ನು ಈ ಸಂಘಟನೆಯ ಮೂಲಕ ಪಡೆದು ನಿಮ್ಮ ಬದುಕಿನ ತಾಪತ್ರಯಗಳಿಂದ ಹೊರಬನ್ನಿರಿ ಎಂದು ತಿಳಿಸಿದರು.

ಮೇಯರ್ ಎಸ್.ಟಿ. ವೀರೇಶ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ನಮ್ಮ ದೇಶದಲ್ಲಿ ಜೀವ ವಿಮೆ ಮಾಡಿಸಿಕೊಳ್ಳುವವರ ಸಂಖ್ಯೆ ಬಹಳಷ್ಟು ಕಡಿಮೆಯಿದೆ. ವಿದೇಶದಲ್ಲಿ ಶೇ.೮೦-೯೦ ರಷ್ಟು ಮಂದಿ ವಿಮೆ ಮಾಡಿಸಿಕೊಂಡರೆ, ನಮ್ಮ ದೇಶದಲ್ಲಿ ಶೇ. ೨-೩ ರಷ್ಟು ಜನರು ಮಾತ್ರ. ಕಾರ್ಮಿಕ ವರ್ಗದವರು ವಿಮೆ ಮಾಡಿಸಿಕೊಳ್ಳಲು ಹೆಚ್ಚಿನ ಪ್ರಾಶಸ್ತ್ಯ ನೀಡಿ. ನಿಮ್ಮ ಕುಟುಂಬದವರು ನಿಮ್ಮನ್ನೇ ನಂಬಿಕೊಂಡಿರುತ್ತಾರೆ. ಆಕಸ್ಮಿಕವಾಗಿ ಅಪಘಾತಕ್ಕೀಡಾದರೆ ವಿಮೆಯ ಹಣ ನಿಮ್ಮ ಕುಟುಂಬದವರ ಬದುಕಿಗೆ ಸಹಾಯವಾಗುತ್ತದೆ ಎಂದು ತಿಳಿಸಿದರು.

ಸಂಘಟಕರಾಗುವ ಮೂಲಕ ಸರ್ಕಾರದ ಸೌಲಭ್ಯಗಳನ್ನು ಪಡೆಯಿರಿ. ಸಂಘಟನೆ ಮಾಡಿಕೊಳ್ಳುವುದು ಬಹಳ ಅವಶ್ಯಕವಿದೆ. ಸಂಘಟನೆ, ಸಾಮಾಜಿಕ ಕಾರ್ಯಗಳಲ್ಲಿ ನಿಮ್ಮನ್ನು ನೀವು ತೊಡಗಿಸಿಕೊಂಡರೆ ಸಮಾಜದಲ್ಲಿ ಗುರುತಿಸಿಕೊಳ್ಳಲು ಸಾಧ್ಯವಿದೆ. ಇದಕ್ಕೆ ನಾನೆ ಉದಾಹರಣೆಯಾಗಿ ನಿಮ್ಮ ಕಣ್ಣಮುಂದಿದ್ದೇನೆ. ವಿದ್ಯಾರ್ಥಿ ಸಂಘಟನೆಯಲ್ಲಿ ಹೆಚ್ಚು ಕಾಲ ಸಕ್ರಿಯವಾಗಿದ್ದ ಕಾರಣ ಇಂದು ಪ್ರಥಮ ಪ್ರಜೆಯಾಗಿ ನಿಮ್ಮ ಮುಂದಿದ್ದೇನೆ ಎಂದು ತಮ್ಮನ್ನೇ ಉದಾಹರಿಸಿದರು.

ಸಂಘದ ರಾಜ್ಯಾಧ್ಯಕ್ಷ ಕೆ.ಜಿ. ಯಲ್ಲಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಎಲ್ಲರಿಗೂ ಬಟ್ಟೆ ಹೊಲಿದುಕೊಟ್ಟು ಮರ್ಯಾದೆ ಮುಚ್ಚುವ ಕೆಲಸ ಮಾಡುವ ಟೈಲರ್‌ಗಳ ಬದುಕೇ ಮೂರಾಬಟ್ಟೆಯಾಗಿದೆ. ಆದ್ದರಿಂದ, ಟೈಲರ್ ಕಲ್ಯಾಣ ಮಂಡಳಿಯನ್ನು ಜಾರಿ ಮಾಡಿ, ಸರ್ಕಾರದ ವಿವಿಧ ಸವಲತ್ತುಗಳನ್ನು ನೀಡುವ ಮೂಲಕ ಟೈಲರ್‌ಗಳಿಗೆ ಅನುಕೂಲ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.

ಕಾರ್ಯಕ್ರಮದಲ್ಲಿ ಕಾರ್ಮಿಕ ಇಲಾಖೆ ಸಹಾಯಕ ನಿರ್ದೇಶಕ ಇಬ್ರಾಹಿಂಸಾಬ್, ಸಂಘದ ಜಿಲ್ಲಾಧ್ಯಕ್ಷ ನಾರಾಯಣರಾವ್ ಸುತ್ರಾವೆ, ಚಂದ್ರಶೇಖರ್ ಕೆ. ಗಣಪ, ಶ್ರೀನಿವಾಸ್ ಇಂಡಿ ಉಪಸ್ಥಿತರಿದ್ದರು.

 

Leave a Reply

Your email address will not be published. Required fields are marked *

error: Content is protected !!