ಜೀಪ್- ಬಸ್ ನಡುವೆ ಭೀಕರ ಅಪಘಾತ : ಎಲೆಕ್ಷನ್ ಭದ್ರತೆಗೆ ತೆರಳುತ್ತಿದ್ದ ಕರ್ನಾಟಕ ಪೊಲೀಸ್ ಸೇರಿ ಮೂವರು ಸಾವು
ದೇಶಾದ್ಯಂತ ಲೋಕಸಭೆ ಚುನಾವಣೆ ಕಾವು ಜೋರಾಗಿದೆ. ಏ.26ಕ್ಕೆ ಮೊದಲ ಹಂತದ ಚುನಾವಣೆ ನಡೆಯಲಿದೆ. ಈ ಹಿನ್ನೆಲೆ ಚುನಾವಣಾ ಆಯೋಗ ಭರದ ಸಿದ್ಧತೆ ಮಾಡುತ್ತಿದ್ದು, ಚುನಾವಣೆ ನಿಮಿತ್ತ ಭದ್ರತೆ ತೆರಳಿದ್ದ ಕರ್ನಾಟಕದ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿ ದುರಂತಕ್ಕೀಡಾಗಿದ್ದಾರೆ.
ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಭದ್ರತೆಗೆ ನಿಯೋಜನೆಗೊಂಡಿದ್ದ ಐವರು ಪೊಲೀಸ್ ಅಧಿಕಾರಿಗಳು ಹೋಗುತ್ತಿದ್ದ ಜೀಪ್ ಮತ್ತು ಬಸ್ ನಡುವೆ ಭೀಕರ ಅಪಘಾತ ಸಂಭವಿಸಿದೆ. ತಮಿಳುನಾಡಿನ ತಿರುವಣ್ಣಾಮಲೈ ಹಾಗೂ ದಿಂಡಿವನಂ ಹೆದ್ದಾರಿಯಲ್ಲಿ ಈ ದುರ್ಘಟನೆ ಸಂಭವಿಸಿದೆ. ಪರಿಣಾಮ ಕರ್ನಾಟಕದ ಓರ್ವ ಅಧಿಕಾರಿ ಹಾಗೂ ಕಾನ್ಸ್‌ಟೇಬಲ್ ಸೇರಿ ಮೂವರು ಮೃತಪಟ್ಟಿದ್ದಾರೆ. ಉಳಿದ ಇಬ್ಬರ ಸ್ಥಿತಿ ಗಂಭೀರವಾಗಿದೆ. ಕರ್ನಾಟಕದಿಂದ ಎಲೆಕ್ಷನ್ ಡ್ಯೂಟಿಗೆ ಹೋಗಿದ್ದ ಪೊಲೀಸ್ ಅಧಿಕಾರಿ, KSRP ಅಸಿಸ್ಟೆಂಟ್ ಕಮಾಂಡೆಂಟ್ ಪ್ರಭಾಕರ್, ಕಾನ್ಸ್‌ಟೇಬಲ್ ವಿಠಲ್ ಹಾಗೂ ತಮಿಳುನಾಡು ಕಾನ್ಸ್‌ಟೇಬಲ್ ದಿನೇಶ್ ಮೃತಪಟ್ಟಿದ್ದಾರೆ.
ನಿನ್ನೆ ಸಂಜೆ 4 ಗಂಟೆ ಸುಮಾರಿಗೆ ತಿರುವಣ್ಣಾಮಲೈ- ದಿಂಡಿವನಂ ಹೈವೇಯಲ್ಲಿ ಅಪಘಾತ ಸಂಭವಿಸಿದ್ದು, ತೀವ್ರವಾಗಿ ಗಾಯಗೊಂಡಿದ್ದ ಇಬ್ಬರು ಆಸ್ಪತ್ರೆಗೆ ತೆರಳುವಷ್ಟರಲ್ಲಿ ಕೊನೆಯುಸಿರೆಳೆದಿದ್ದಾರೆ. ಸದ್ಯ ಮೂವರ ಮೃತದೇಹಗಳನ್ನು ತಮಿಳುನಾಡಿನ ಆಸ್ಪತ್ರೆಗೆ ರವಾನೆ ಮಾಡಲಾಗಿದ್ದು ಮರಣೋತ್ತರ ಪರೀಕ್ಷೆ ಬಳಿಕ ಕರ್ನಾಟಕ ಪೊಲೀಸರಿಗೆ ಹಸ್ತಾಂತರ ಮಾಡಲಾಗುತ್ತದೆ.
ಇನ್ನು ಅಪಘಾತದ ರಭಸಕ್ಕೆ ಜೀಪ್ ಛಿದ್ರವಾಗಿದ್ದು, ಬಸ್‌ನ ಮುಂಭಾಗ ಸಹ ಜಖಂ ಆಗಿದೆ. ಸದ್ಯ ಗಂಭೀರವಾಗಿ ಗಾಯಗೊಂಡಿರುವ ಸಿಬ್ಬಂದಿ ಹೇಮಂತ್ ಕುಮಾರ್, ಜಯಕುಮಾರ್ ಅವರನ್ನು ತಿರುವಣ್ಣಾಮಲೈ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.