ಹೆಂಡತಿಯನ್ನು ಅಟ್ಟಾಡಿಸಿಕೊಂಡು ಹಲ್ಲೆ ಮಾಡಿದ ಗಂಡ

ಹೊಳೆನರಸೀಪುರ: ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನು ಅಟ್ಟಾಡಿಸಿಕೊಂಡು ಹೋಗಿ ಮಚ್ಚಿನಿಂದ ಹಲ್ಲೆ ನಡೆಸಿರುವ ಘಟನೆ ತಾಲ್ಲೂಕಿನ ತಿರುಮಲಾಪುರದಲ್ಲಿ ನಡೆದಿದೆ.
ಪತಿ ಶ್ರೀನಿವಾಸ್, ಪತ್ನಿ ಸವಿತಾ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿದ್ದು, ಸವಿತಾ ಅವರ ಸಹೋದರಿ ಅನಿತಾ ಅವರ ಕಾರಿನ ಮೇಲೂ ದಾಳಿ ನಡೆಸಿದ್ದಾನೆ.
ಕೌಟುಂಬಿಕ ಕಲಹದಿಂದ 2 ವರ್ಷಗಳಿಂದ ಪತಿ, ಪತ್ನಿ ದೂರವಿದ್ದು, ಆಗಾಗ ಜಗಳ ನಡೆಯುತ್ತಿದ್ದವು. ಆಸ್ತಿ ವಿಚಾರವಾಗಿ ಪತಿ ವಿರುದ್ಧ ಪತ್ನಿ ಸವಿತಾ ಪ್ರಕರಣ ದಾಖಲಿಸಿದ್ದು, ಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದೆ.
ಇದೇ ವಿಚಾರದಲ್ಲಿ ಶನಿವಾರ ಜಗಳ ತೆಗೆದ ಶ್ರೀನಿವಾಸ್, ಪತ್ನಿ ಮೇಲೆ ಹಲ್ಲೆ ನಡೆಸಿದ್ದಾನೆ. ಜೈಲಿಗೆ ಹೋಗಲೂ ಬೇಕಾದರೆ ಸಿದ್ಧ ಎಂದು ಸಿಟ್ಟಿನಿಂದ ಶ್ರೀನಿವಾಸ್ ತನ್ನ ಪತ್ನಿಯ ಮೇಲೆ ಮಚ್ಚಿನಿಂದ ಹಲ್ಲೆ ಮಾಡುತ್ತಿರುವ ದೃಶ್ಯವನ್ನು ಸುತ್ತಲೂ ನೆರೆದಿದ್ದ ಜನರು ವಿಡಿಯೊ ಚಿತ್ರೀಕರಣ ಮಾಡಿದ್ದಾರೆ. ಇದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ವ್ಯಾಪಕ ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಗಿದೆ.
ಹೊಳೆನರಸೀಪುರ ಠಾಣೆಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ಆರೋಪಿ ಶ್ರೀನಿವಾಸ್ ಬಂಧನಕ್ಕೆ ಹುಡುಕಾಟ ನಡೆಸಿದ್ದಾರೆ. ಸದ್ಯ ಸವಿತಾ ಚಿಕಿತ್ಸೆಗಾಗಿ ಹಾಸನದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.