ಮನಕ್ಕೆ ಮದ್ದು ಸಂಗೀತವಾಗಿದ್ದು, ಅದು ವಿಶ್ವವ್ಯಾಪಿಯಾಗಿದೆ – ಅಕ್ಕಿಆಲೂರಿನ ವಿರಕ್ತಮಠದ ಶಿವಬಸವ ಸ್ವಾಮೀಜಿ

ಹಾವೇರಿ : ಸಂಗೀತದಿಂದ ದೈವ ಸಾಕ್ಷಾತ್ಕಾರ ಸಾಧ್ಯ ಎಂದು ತೋರಿಸಿದ ಪಂ. ಪಂಚಾಕ್ಷರಿ ಮತ್ತು ಪಂ. ಪುಟ್ಟರಾಜ ಗವಾಯಿಗಳ ಪ್ರತಿಭೆಯನ್ನು ಪೋಷಿಸಿದ ಹುಕ್ಕೇರಿಮಠದ ಲಿಂ.ಶಿವಬಸವ ಸ್ವಾಮಿಗಳ ಹಾಗೂ ಲಿಂ. ಶಿವಲಿಂಗ ಶ್ರೀಗಳ ಪುಣ್ಯ ಸ್ಮರಣೋತ್ಸವವು ಸಂಗೀತ ಆರಾಧನೆ ಮೂಲಕವೇ ನಡೆದಿದ್ದು ಗುರು ಶಿಷ್ಯ ಪರಂಪರೆಯ ಅವಿನಾಭವ ಸಂಬಂಧ ತೋರಿಸುತ್ತದೆ ಎಂದು ಹುಕ್ಕೇರಿಮಠ ಮಠಾಧ್ಯಕ್ಷರಾದ ಸದಾಶಿವ ಸ್ವಾಮೀಜಿ ಹೇಳಿದರು.

ನಗರದ ಹುಕ್ಕೇರಿಮಠದಲ್ಲಿ ಹಮ್ಮಿಕೊಂಡಿರುವ ಲಿಂ.ಶಿವಬಸವ ಸ್ವಾಮೀಜಿಗಳ ೭೬ ನೇ ಮತ್ತು ಲಿಂ. ಶಿವಲಿಂಗ ಸ್ವಾಮೀಜಿಗಳ ೧೩ ನೇ ಪುಣ್ಯ ಸ್ಮರಣೋತ್ಸವ ಅಂಗವಾಗಿ ಹಮ್ಮಿಕೊಂಡಿದ್ದ ಘರನಾ ಸಮ್ಮೇಳನ ಮತ್ತು ಗುರುಕುಮಾರ ಪಂಚಾಕ್ಷರಿ ಪ್ರಶಸ್ತಿ ಪ್ರದಾನ ಸಮಾರಂಭದ ಸಾನಿಧ್ಯ ವಹಿಸಿ ಅವರು ಮಾತನಾಡಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಅಕ್ಕಿಆಲೂರಿನ ವಿರಕ್ತಮಠದ ಶಿವಬಸವ ಸ್ವಾಮೀಜಿ ಮಾತನಾಡಿ, ಮನಕ್ಕೆ ಮದ್ದು ಸಂಗೀತವಾಗಿದ್ದು, ಅದು ವಿಶ್ವವ್ಯಾಪಿಯಾಗಿದೆ. ಸುಮಧುರ ಸಂಗೀತದ ಶ್ರವಣವು ನಮ್ಮಲ್ಲಿ ಅದಮ್ಯ ಚೇತನವನ್ನು ಉಂಟು ಮಾಡುತ್ತದೆ. ಗದುಗಿನ ಪಂಚಾಕ್ಷರಿ ಸೇವಾ ಸಮಿತಿಯು ಅಂಧ ಅನಾಥರ ಬಾಳಿಗೆ ಸಂಗೀತದ ಮೂಲಕ ಬೆಳಕನ್ನು ನೀಡಿ, ಕಲಾವಿದರು ನಾಡಿನ ಆಸ್ತಿಯಾಗುವಂತೆ ಮಾಡುತ್ತಿರುವ ಕಾರ್ಯ ಶ್ಲಾಘನೀಯವಾಗಿದೆ ಎಂದು ಹೇಳಿದರು.

ಗದುಗಿನ ಶ್ರೀಗುರು ಪಂಚಾಕ್ಷರಿ ಸೇವಾ ಸಮಿತಿಯ ಅಧ್ಯಕ್ಷ ಪಂ.ರಾಜಗುರು ಗುರುಸ್ವಾಮಿ ಕಲಿಕೇರಿ ಮಾತನಾಡಿ, ನಡೆ ನುಡಿ ಉತ್ತಮವಾಗಿರುವವನು ಘರಾನಾ ಮನುಷ್ಯನಾಗಿರುತ್ತಾನೆ. ಘರಾನಾ ಸಂಗೀತವು ಸಾಮಾನ್ಯನನ್ನು ಅಸಾಮಾನ್ಯ ವ್ಯಕ್ತಿಯನ್ನಾಗಿ ಮಾಡುತ್ತದೆ ಎಂದು ಹೇಳಿದರು. ಶ್ರೀ ಹುಕ್ಕೇರಿಮಠವು ಕಲೆ, ಸಾಹಿತ್ಯ, ಸಂಗೀತಕ್ಕೆ ಆಶ್ರಯ ತಾಣವಾಗಿದ್ದು, ನಮ್ಮ ಗುರುಗಳಿಗೆ ಮಾತೃ ಸ್ವರೂಪವಾಗಿತ್ತು ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಗುರುಕುಮಾರ ಪಂಚಾಕ್ಷರಿ ಸಮ್ಮಾನ-೨೦೨೨ ಪ್ರಶಸ್ತಿಯನ್ನು ಧಾರವಾಡದ ಪಂ. ಬಿ.ಎಸ್.ಮಠ ದಂಪತಿಗಳಿಗೆ ಹಾಗೂ ಹೊನ್ನಾವರದ ಡಾ|| ಅಶೋಕ ಹುಗ್ಗಣ್ಣನವರ ಇವರಿಗೆ ಮಠಾಧ್ಯಕ್ಷರಾದ ಸದಾಶಿವ ಸ್ವಾಮೀಜಿ ಪ್ರದಾನ ಮಾಡಿದರು. ಪ್ರಶಸ್ತಿಯು ಹತ್ತು ಸಾವಿರ ನಗದು ಹಾಗೂ ಪ್ರಶಸ್ತಿ ಪತ್ರ ಒಳಗೊಂಡಿತ್ತು. ಹಾಗೂ ವೀರಯೋಧ ದಿ. ಹನುಮಂತಪ್ಪ ಚೂರಿ ಅವರ ಧರ್ಮಪತ್ನಿ ಪುಟ್ಟಮ್ಮ ಚೂರಿ ಅವರನ್ನ ಶ್ರೀಮಠದಿಂದ ಸನ್ಮಾನಿಸಲಾಯಿತು.

ಪಂ. ಬಿ.ಎಸ್. ಮಠ ಮತ್ತು ಅಕ್ಕಮಹಾದೇವಿ ಮಠ ಅವರು ವಾಯಲಿನ್ ಜುಲಗಬಂಧಿ ಕಾರ್ಯಕ್ರಮ ನಡೆಸಿಕೊಟ್ಟರು. ಪಂ.ಅಶೋಕ ಹುಗ್ಗಣ್ಣನವರ ಹಿಂದುಸ್ತಾನಿ ಘರಾನಾ ಸಂಗೀತ ನಡೆಸಿಕೊಟ್ಟರು.

ಸಮಾರಂಭದಲ್ಲಿ ಮಾಜಿ ಶಾಸಕ ಶಿವರಾಜ ಸಜ್ಜನರ, ಕೂಡಲದ ಗುರು ಮಹೇಶ್ವರ ಶಿವಾಚಾರ್ಯ ಸ್ವಾಮೀಜಿ, ಉತ್ಸವ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ ಹಂದ್ರಾಳ, ಕಾರ್ಯದರ್ಶಿ ಜಗದೀಶ ಕನವಳ್ಳಿ, ತಮ್ಮಣ್ಣ ಮುದ್ದಿ, ಮಹೇಶ್ವರ ಸ್ವಾಮಿ ಹೊಸಹಳ್ಳಿಮಠ, ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!