ಬಾಡಿಗೆ ಮನೆ ಮಾಲೀಕರಿಗೆ ಗೊತ್ತಿಲ್ಲದೆ ಮನೆಯಲ್ಲಿ ವೇಶ್ಯಾವಾಟಿಕೆ ನಡೆಯುತ್ತಿದ್ದರೆ ಮಾಲೀಕರ ವಿರುದ್ಧ ಕೇಸ್ ಇಲ್ಲ
ಬೆಂಗಳೂರು: ಮನೆಗಳನ್ನು ಬಾಡಿಗೆ ನೀಡುವ ಮಾಲೀಕರಿಗೊಂದು ಶುಭ ಸುದ್ದಿಯೊಂದಿದೆ. ಅದೇನು ಅಂತೀರಾ!. ನಿಮ್ಮ ಬಾಡಿಗೆ ಮನೆಯಲ್ಲಿ ನಿಮಗೆ ಅರಿವಿರದೆ ಒಂದು ವೇಳೆ ವೇಶ್ಯಾವಾಟಿಕೆ ನಡೆಯುತ್ತಿದ್ದರೆ ನಿಮ್ಮ ವಿರುದ್ಧ ಮಾನವ ಕಳ್ಳಸಾಗಣೆ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗುವುದಿಲ್ಲ ಎಂದು ಹೈಕೋರ್ಟ್ ನಗರದ ಪ್ರಕರಣವೊಂದರಲ್ಲಿ ಗಮನಾರ್ಹ ಆದೇಶ ನೀಡಿದೆ. ಇದರಿಂದಾಗಿ ಆಕಸ್ಮಾತ್ ತಮ್ಮ ಬಾಡಿಗೆ ಮನೆಯಲ್ಲಿ ವೇಶಾವ್ಯಾಟಿಕೆ ನಡೆಯುತ್ತಿದ್ದರೂ ಸಹ ತಮ್ಮ ಗಮನಕ್ಕೆ ಬಂದಿಲ್ಲವಾದರೆ ಮಾಲೀಕರು ಹೆದರಬೇಕಾಗಿಲ್ಲ. ಜೊತೆಗೆ ಇದರಿಂದ ಪೊಲೀಸರು ಇನ್ನು ಮನೆ ಮಾಲೀಕರಿಗೆ ನೀಡುತ್ತಿದ್ದ ಕಿರುಕುಳವೂ ತಪ್ಪಲಿದೆ.
ವೇಶ್ಯಾವಾಟಿಕೆ ನಡೆಸುತ್ತಿದ್ದ ಆರೋಪ ಸಂಬಧ ಇಲ್ಲಿನ ಚಂದ್ರಾ ಲೇಔಟ್ ಠಾಣಾ ಪೊಲೀಸರು ತಮ್ಮ ವಿರುದ್ಧ ದಾಖಲಿಸಿದ್ದ ಎಫ್‌ಐಆರ್ ರದ್ದುಪಡಿಸುವಂತೆ ಕೋರಿ ನಾಗರಭಾವಿಯ ಪ್ರಭುರಾಜ್ ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿ ಪುರಸ್ಕರಿಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯಪೀಠ ಈ ಆದೇಶ ನೀಡಿದೆ. ಅಷ್ಟೇ ಅಲ್ಲದೆ ಅರ್ಜಿದಾರರ ವಿರುದ್ಧ ಪೊಲೀಸರು ಹೂಡಿದ್ದ ಎಫ್‌ಐಆರ್ ಅನ್ನೂ ಸಹ ರದ್ದುಪಡಿಸಿ ಆದೇಶಿಸಿದೆ.
ಕಾನೂನು ದುರ್ಬಳಕೆ: ನ್ಯಾಯಪೀಠ “ಮಾನವ ಕಳ್ಳಸಾಗಣೆ ತಡೆ ಕಾಯ್ದೆಯ ಸೆಕ್ಷನ್ 3(2) (ಬಿ) ಪ್ರಕಾರ ಯಾವುದೇ ಜಾಗದಲ್ಲಿ ಏನು ನಡೆಯುತ್ತಿದೆ ಎಂಬುದು ಅದರ ಮಾಲೀಕನಿಗೆ ಅರಿವಿಗೆ ಇದ್ದಾಗ ಮಾತ್ರ ಆತನ ವಿರುದ್ಧ ಪ್ರಕರಣ ದಾಖಲಿಸಬಹುದು. ಆದರೆ, ಈ ಪ್ರಕರಣದಲ್ಲಿ ಅರ್ಜಿದಾರನ ಒಡೆತನದಲ್ಲಿರುವ ಜಾಗದಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಬಗ್ಗೆ ಆತನಿಗೆ ಅರಿವು ಇರಲಿಲ್ಲ”ಎಂದು ನ್ಯಾಯಾಲಯ ಹೇಳಿದೆ. ”ಅರ್ಜಿದಾರರಿಗೆ ಮಾಹಿತಿ ಇರಲಿಲ್ಲವೆಂಬುದನ್ನು ಪೊಲೀಸರೇ ಆರೋಪ ಪಟ್ಟಿಯಲ್ಲಿ ದಾಖಲಿಸಿ ದ್ದಾರೆ. ಹಾಗಿದ್ದರೂ ಪ್ರಕರಣ ಮುಂದುವರಿಯಲು ಬಿಟ್ಟರೆ ಅರ್ಜಿದಾರರಿಗೆ ಕಿರುಕುಳವಾಗಲು ಮತ್ತು ಕಾನೂನಿನ ಸ್ಪಷ್ಟ ದುರ್ಬಳಕೆಯಾಗಲು ಅವಕಾಶ ಮಾಡಿಕೊಟ್ಟಂತಾಗುತ್ತ ದೆ” ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
ಏನಿದು ಪ್ರಕರಣವೇನು? :
ಅರ್ಜಿದಾರರು 2019ರ ಡಿಸೆಂಬರ್‌ನಲ್ಲಿ ನಾಗರಬಾವಿಯಲ್ಲಿನ ತನ್ನ ಮನೆಯನ್ನು ವ್ಯಕ್ತಿಯೊಬ್ಬರಿಗೆ ಬಾಡಿಗೆಗೆ ನೀಡಿದ್ದರು. 2020ರ ಜನವರಿಯಲ್ಲಿ ಚಂದ್ರಾಲೇಔಟ್ ಠಾಣಾ ಪೊಲೀಸರು ಆ ಮನೆ ಮೇಲೆ ದಾಳಿ ನಡೆಸಿ ತಪಾಸಣೆ ನಡೆಸಿದಾಗ ಆ ಮನೆಯಲ್ಲಿ ವೇಶ್ಯಾವಾಟಿಕೆ ನಡೆಯುತ್ತಿದ್ದುದು ಬಹಿರಂಗವಾಗಿತ್ತು. ಬಾಡಿಗೆದಾರ ಮತ್ತು ಮನೆ ಮಾಲೀಕ ನಾದ ಅರ್ಜಿದಾರರ ಮೇಲೆ ಮಾನವ ಕಳ್ಳ ಸಾಗಣೆ ತಡೆ ಕಾಯ್ದೆ ಎಫ್‌ಐಆರ್ ದಾಖಲಿಸಿದ್ದರು. ತನಿಖೆ ವೇಳೆ ಅರ್ಜಿದಾರರಿಗೆ ಪೊಲೀಸರು ನೋಟಿಸ್ ನೀಡಿದ್ದರು. ಅದಕ್ಕೆ ಉತ್ತರಿಸಿದ್ದ ಅವರು, ಮನೆಯಲ್ಲಿ ಬಾಡಿಗೆದಾರ ವೇಶ್ಯವಾಟಿಕೆ ನಡೆಸುತ್ತಿದ್ದ ಬಗ್ಗೆ ತನಗೆ ಯಾವುದೇ ಮಾಹಿತಿ ಇರಲಿಲ್ಲ ಎಂದು ಸ್ಪಷ್ಟವಾಗಿ ನುಡಿದಿದ್ದರು. ನಂತರ ತನಿಖೆ ಪೂರ್ಣಗೊಳಿಸಿದ್ದ ಪೊಲೀಸರು ಅರ್ಜಿದಾರನ ವಿರುದ್ಧ ಆರೋಪ ಪಟ್ಟಿ ಸಲ್ಲಿಸಿದ್ದರು. ಇದರಿಂದ ಹೈಕೋರ್ಟ್ ಮೆಟ್ಟಿಲೇರಿದ್ದ ಅರ್ಜಿದಾರ, ತನ್ನ ವಿರುದ್ಧದ ಎಫ್‌ಐಆರ್, ಆರೋಪ ಪಟ್ಟಿ ಮತ್ತು ನ್ಯಾಯಾಲಯದ ವಿಚಾರಣೆ ಎಫ್‌ಐಆರ್ ರದ್ದುಪಡಿಸುವಂತೆ ಕೋರಿದ್ದರು.