ಮದುವೆಗೆ ಬಂದವರು ಮಸಣ ಸೇರಿದರು!
ತಿರುಪತಿ: ಮದುವೆ ಸಮಾರಂಭಕ್ಕೆ ತೆರಳಿದ್ದ ಜನರನ್ನು ಕರೆದೊಯ್ಯುತ್ತಿದ್ದ ಬಸ್ಸೊಂದು ಕಂದರಕ್ಕೆ ಬಿದ್ದ ಘಟನೆ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಭಾಕರಪೇಟ್‌ನಲ್ಲಿ ಶನಿವಾರ ರಾತ್ರಿ 11.30 ರ ಸುಮಾರಿಗೆ ನಡೆದಿದೆ. ಪರಿಣಾಮವಾಗಿ, ಏಳು ಜನರು ಸಾವನ್ನಪ್ಪಿ, 45 ಜನರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಚಿಕಿತ್ಸೆಗಾಗಿ ಸಮೀಪದ ಆಸ್ಪತ್ರೆಗೆ ರವಾನಿಸಲಾಗಿದೆ. ಭಾಕರಪೇಟ್ ಪ್ರದೇಶವು ತಿರುಪತಿಯಿಂದ ಕೇವಲ 25 ಕಿಲೋಮೀಟರ್ ದೂರದಲ್ಲಿದೆ. ಖಾಸಗಿ ಬಸ್ ಅನಂತಪುರ ಜಿಲ್ಲೆಯ ಧರ್ಮಾವರಂನಿದ ಚಿತ್ತೂರಿನ ನಗರಿ ಬಳಿಯ ಗ್ರಾಮಕ್ಕೆ 52 ಜನರನ್ನು ಹೊತ್ತೊಯ್ಯುತ್ತಿತ್ತು. ಘಾಟ್ ರಸ್ತೆ ಮಾರ್ಗವಾಗಿ ತೆರಳುತ್ತಿದ್ದ ವೇಳೆ ಬಸ್ ಅಡುಪುತಪ್ಪಿ ಕಣಿವೆಗೆ ಬಿದ್ದಿದೆ. ‘ಚಾಲಕರ ನಿರ್ಲಕ್ಷ ದಿಂದ ಬಸ್ ಬಿದ್ದು ಅಪಘಾತ ಸಂಭವಿಸಿದೆ, ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗೆ ರವಾನಿಸಲಾಗಿದೆ’ ಎಂದು ತಿರುಪತಿಯ ಪೊಲೀಸ್ ವರಿಷ್ಠಾಧಿಕಾರಿ ಹೇಳಿದರು.
ಪೊಲೀಸರು, ರಕ್ಷಣಾ ತಂಡಗಳು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದರು. ಆದರೆ, ಕಣಿವೆ 50 ಅಡಿ ಆಳವಿರುವುದರಿಂದ ಕತ್ತಲೆಯಿಂದಾಗಿ ಕಾರ್ಯಾಚರಣೆಗೆ ಅಡ್ಡಿಯಾಗಿದೆ. ಬೆಳಗ್ಗೆಯೂ ಕಾರ್ಯಾಚರಣೆ ಮುಂದುವರೆಯಿತು. ಬದುಕುಳಿದವರನ್ನು ಹಗ್ಗದ ಸಹಾಯದಿಂದ ರಕ್ಷಿಸಿ ಆಸ್ಪತ್ರೆಗೆ ಸಾಗಿಸಲಾಯಿತು.