ಹರಿಹರ ಸಹಾಯಕ ಚುನಾವಣಾಧಿಕಾರಿಗಳ ಕಚೇರಿಗೆ ಭೇಟಿ, ಚುನಾವಣಾ ಸಿದ್ದತೆಗಳ ಪರಿಶೀಲನೆ
ದಾವಣಗೆರೆ: ಲೋಕಸಭಾ ಚುನಾವಣೆ ನಡೆಯುತ್ತಿದ್ದು ಏಪ್ರಿಲ್ 12 ರಿಂದ ನಾಮಪತ್ರ ಸಲ್ಲಿಕೆ ಅರಂಭವಾಗಲಿದೆ. ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ಸಹಾಯಕ ಚುನಾವಣಾಧಿಕಾರಿಗಳು ಕಾರ್ಯನಿರ್ವಹಿಸುತ್ತಿದ್ದು ಚುನಾವಣಾ ಸಿದ್ದತೆಯನ್ನು ಪರಿಶೀಲಿಸಲು ಬುಧವಾರ ಏ.3 ರಂದು ಹರಿಹರ ಸಹಾಯಕ ಚುನಾವಣಾಧಿಕಾರಿಗಳ ಕಚೇರಿಗೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ; ವೆಂಕಟೇಶ್ ಎಂ.ವಿ ಭೇಟಿ ನೀಡಿ ಪರಿಶೀಲಿಸಿದರು.
ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ವಾರ್ ರೂಂ ಸ್ಥಾಪನೆ ಮಾಡುವ ಮೂಲಕ ಮಾದರಿ ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಜಾರಿ ಮಾಡಲು ತಂಡಗಳನ್ನು ರಚಿಸಲಾಗಿದೆ. ಮತ್ತು ಎಲ್ಲಾ ತಂಡಗಳ ಕಾರ್ಯವೈಖರಿಯನ್ನು ವೀಕ್ಷಣೆ ಮಾಡಲು ನಿಯಂತ್ರಣ ಕೊಠಡಿ ಸ್ಥಾಪಿಸಲಾಗಿದ್ದು ಜಿ.ಪಿ.ಎಸ್.ಟ್ಯ್ರಾಕಿಂಗ್ ಮಾಡಲಾಗುತ್ತಿದೆ. ಮತ್ತು ಮತದಾರರು ಹಾಗೂ ಸಾರ್ವಜನಿಕರು ಸಿವಿಜಿಲ್ ಮೂಲಕ ಹಾಗೂ ಸಹಾಯವಾಣಿಗೆ ಕರೆ ಮಾಡಿ ನೀತಿ ಸಂಹಿತೆ ಉಲ್ಲಂಘನೆ ಮತ್ತು ಮಾಹಿತಿ ನೀಡಲು ಕರೆ ಮಾಡಿದಾಗ ನಿರ್ವಹಣೆಗಾಗಿ ಕೈಗೊಂಡಿರುವ ಕ್ರಮಗಳ ಬಗ್ಗೆ ಪರಿಶೀಲನೆ ನಡೆಸಿದ ಚುನಾವಣಾಧಿಕಾರಿಗಳು ಇವಿಎಂ ಸ್ಟ್ರಾಂಗ್ ರೂಂ ಪರಿಶೀಲನೆಯನ್ನು ನಡೆಸಿದರು.
ಈ ವೇಳೆ ಸಹಾಯಕ ಚುನಾವಣಾಧಿಕಾರಿ ಹಾಗೂ ಡಿಡಿಎಲ್‍ಆರ್ ಭಾವನ, ತಹಶೀಲ್ದಾರ್ ಗುರುಬಸವರಾಜ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.