ಲೋಕಸಭಾ ಚುನಾವಣೆ ಹಿಂದಿನ ಚುನಾವಣೆ ಸರಾಸರಿಗಿಂತಲೂ ದಾವಣಗೆರೆ ಉತ್ತರ, ದಕ್ಷಿಣದಲ್ಲಿ ಕಡಿಮೆ ಮತದಾನ, 2024 ರಲ್ಲಿ ಶೇ 85 ಕ್ಕಿಂತ ಹೆಚ್ಚು ಮತದಾನವಾಗುವಂತೆ ಟಾರ್ಗೇಟ್ ನೀಡಿದ ಸಿಇಓ

ದಾವಣಗೆರೆ: ಪ್ರಸ್ತುತ ಲೋಕಸಭೆಗೆ ಸಾರ್ವತ್ರಿಕ ಚುನಾವಣೆ ನಡೆಯುತ್ತಿದ್ದು ದಾವಣಗೆರೆ ಉತ್ತರ ಮತ್ತು ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ 2019 ರ ಲೋಕಸಭಾ ಚುನಾವಣೆಯಲ್ಲಿ ಕ್ಷೇತ್ರದ ಸರಾಸರಿಗಿಂತ ಕಡಿಮೆ ಮತದಾನವಾಗಿದ್ದು ಈ ಭಾರಿಯ ಲೋಕಸಭಾ ಚುನಾವಣೆಯಲ್ಲಿ ಶೇ 85 ಕ್ಕಿಂತ ಹೆಚ್ಚು ಮತದಾನವಾಗುವಂತೆ ನೋಡಿಕೊಳ್ಳಬೇಕೆಂದು ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಸ್ವೀಪ್ ಸಮಿತಿ ಅಧ್ಯಕ್ಷರಾದ ಸುರೇಶ್ ಬಿ.ಇಟ್ನಾಳ್ ತಿಳಿಸಿದರು.

ಅವರು ಬುಧವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ದಾವಣಗೆರೆ ಉತ್ತರ, ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮತಗಟ್ಟೆ ಅಧಿಕಾರಿಗಳೊಂದಿಗೆ ನಡೆಸಿದ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಳೆದ 2019 ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ದಾವಣಗೆರೆ ಕ್ಷೇತ್ರದಲ್ಲಿ ಶೇ 72.96 ರಷ್ಟು ಮತದಾನವಾಗಿತ್ತು. ಆದರೆ ಅತ್ಯಂತ ಕಡಿಮೆ ಮತದಾನವಾಗಿದ್ದು ದಾವಣಗೆರೆ ಉತ್ತರ ಶೇ 65.71, ದಕ್ಷಿಣ ಶೇ 65.93 ರಷ್ಟು ಮತದಾನವಾಗಿದೆ. ಇದು ಈ ಚುನಾವಣೆಯಲ್ಲಿ ಶೇ 85 ಕ್ಕಿಂತಲೂ ಹೆಚ್ಚು ಮತದಾನವಾಗಬೇಕೆಂಬುದು ಕ್ಷೇತ್ರದ ಗುರಿಯಾಗಿದೆ ಎಂದರು.

ದಾವಣಗೆರೆ ಉತ್ತರದಲ್ಲಿ 245 ಹಾಗೂ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ 217 ಮತಗಟ್ಟೆಗಳಿವೆ. 2019 ರ ಚುನಾವಣೆಯ ಸರಾಸರಿ ಮತದಾನಕ್ಕಿಂತಲೂ ಶೇ 20 ರಷ್ಟು ಕಡಿಮೆ 9 ಮತಗಟ್ಟೆ, ಶೇ 15 ರಷ್ಟು ಕಡಿಮೆ 40 ಮತಗಟ್ಟೆ, ಶೇ 10 ರಷ್ಟು ಕಡಿಮೆ 135 ಮತಗಟ್ಟೆಗಳಲ್ಲಿ ಮತದಾನವಾಗಿದೆ. ಇವು ಜಿಲ್ಲೆಯ ಎಲ್ಲಾ ಮತಗಟ್ಟೆಗಳಿಗಿಂತ ಕಡಿಮೆ ಮತದಾನವಾದ ಕ್ಷೇತ್ರಗಳಾಗಿವೆ.
ಈ ಕ್ಷೇತ್ರಗಳಲ್ಲಿ 2024 ರ ಚುನಾವಣೆಯಲ್ಲಿ ಹೆಚ್ಚು ಮತದಾನ ಮಾಡಿದಲ್ಲಿ ಶೇ 85 ಕ್ಕಿಂತ ಹೆಚ್ಚು ಮತದಾನವಾಗಲು ಸಾಧ್ಯವಿದೆ. ಎಲ್ಲಾ ಮತಗಟ್ಟೆ ಅಧಿಕಾರಿಗಳು ಮನೆ ಮನೆಗೆ ಭೇಟಿ ನೀಡಿ ಮತದಾರರ ಮಾಹಿತಿಯನ್ನು ಸಂಗ್ರಹಿಸಿ ಚುನಾವಣೆ ನಡೆಯುವ ಮೇ 7 ರಂದು ತಪ್ಪದೇ ಮತಗಟ್ಟೆಗೆ ಬಂದು ಮತದಾನ ಮಾಡಲು ತಿಳಿಸುವ ಕೆಲಸವನ್ನು ಮತಗಟ್ಟೆ ಅಧಿಕಾರಿಗಳು ಮಾಡಬೇಕಾಗಿದೆ ಎಂದರು.

ಶೇ 10 ರಿಂದ 30 ರಷ್ಟು ಮತದಾರರ ಸಂಪರ್ಕವಿಲ್ಲ; ದಾವಣಗೆರೆ ಉತ್ತರ ಕ್ಷೇತ್ರದಲ್ಲಿ ಕಡಿಮೆ ಮತದಾನ ಮಾಡಲಾದ 22 ಮತಗಟ್ಟೆಗಳು ಹಾಗೂ ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಕಡಿಮೆ ಮತದಾನವಾದ 21 ಮತಗಟ್ಟೆಗಳ ಅಧಿಕಾರಿಗಳೊಂದಿಗೆ ಪರಿಶೀಲನೆ ನಡೆಸಿದಾಗ ಶೇ 10 ರಿಂದ 30 ರಷ್ಟು ಮತದಾರರ ಸಂಪರ್ಕ ಸಿಕ್ಕಿಲ್ಲ ಎಂಬ ಮಾಹಿತಿಯನ್ನು ಮತಗಟ್ಟೆ ಅಧಿಕಾರಿಗಳು ಅಂಕಿ ಅಂಶದೊಂದಿಗೆ ತಿಳಿಸಿದರು. ಕೆಲವು ಮತಗಟ್ಟೆ ಅಧಿಕಾರಿಗಳು ಮನೆ ಮನೆಗೆ ಭೇಟಿ ನೀಡಿ ಕರಾರುವಕ್ಕಾಗಿ ಸಮೀಕ್ಷೆ ನಡೆಸಿ ಬೇರೆ ಕಡೆ ವರ್ಗಾವಣೆ, ಮರಣ ಹೊಂದಿದವರ ವಿವರ ಸಂಗ್ರಹಿಸಿರುವರು ಎಂಬ ಮಾಹಿತಿ ನೀಡಿದರು.

ಮತಗಟ್ಟೆ ಅಧಿಕಾರಿಗಳು ಮತದಾರರ ಪಟ್ಟಿಯಲ್ಲಿ ಹೆಸರಿದ್ದು ಅವರ ವಿವರ ಸಿಕ್ಕಿರುವುದಿಲ್ಲ, ಕೆಲವರು ಬಾಡಿಗೆದಾರರಾಗಿದ್ದು ಬೇರೆ ಕಡೆ ವಾಸವಾಗಿದ್ದಾರೆ. ಇನ್ನೂ ಕೆಲವು ಕಡೆ ಒಂದೇ ವಾರ್ಡ್ ವಾಸಿಯಾಗಿದ್ದರೂ ಅಕ್ಕಪಕ್ಕದ ಮತಗಟ್ಟೆಯಲ್ಲಿ ಹಂಚಿಕೆಯಾಗಿದೆ. ಪಿಎನ್‍ಟಿ ಕ್ವಾರ್ಟಸ್, ಕೆಎಸ್‍ಆರ್‍ಟಿಸಿ ವಸತಿಗೃಹ ಸೇರಿದಂತೆ ಅನೇಕ ವಸತಿಗೃಹದಲ್ಲಿ ವಾಸವಿದ್ದವರ ಹೆಸರಿದೆ, ಆದರೆ ಅವರು ಇಲ್ಲಿರುವುದಿಲ್ಲ ಎಂಬ ಮಾಹಿತಿಯನ್ನು ಮತಗಟ್ಟೆ ಅಧಿಕಾರಿಗಳು ನೀಡಿದರು.

ಹೋಮ್ ವರ್ಕ್ ಮಾಡಲು ಸೂಚನೆ; ಕಡಿಮೆ ಮತದಾನ ಮಾಡಿದ ಮತಗಟ್ಟೆಗಳಲ್ಲಿ ಮತದಾನ ಮಾಡದೇ ಉಳಿಯಲು ಕಾರಣವೇನು. ಅವರನ್ನು ಸಂಪರ್ಕಿಸಲಾಗಿದಿಯೇ, ಎಲ್ಲಿ ವಾಸಿಸುವರು, ಎಷ್ಟು ವರ್ಷದಿಂದ ಇಲ್ಲಿ ವಾಸಿಸುತ್ತಿಲ್ಲ ಎಂಬ ಮಾಹಿತಿಯನ್ನು ಕೆಲವು ಮತಗಟ್ಟೆ ಅಧಿಕಾರಿಗಳು ಸರಿಯಾಗಿ ನೀಡದಿದ್ದಾಗ ನೀವು ಸರಿಯಾಗಿ ಹೋಂ ವರ್ಕ್ ಮಾಡಿರುವುದಿಲ್ಲ ಎಂದು ಸಿಇಓ ಸೂಚನೆ ನೀಡಿ ನಿಮ್ಮ ವ್ಯಾಪ್ತಿಯಲ್ಲಿ ಮನೆ ಮನೆ ಭೇಟಿ ನೀಡಿ, ಅಲ್ಲಿನ ಸ್ಥಳೀಯ ನಿವಾಸಿಗಳು, ಬಾಡಿಗೆದಾರರಾಗಿದ್ದಲ್ಲಿ ಮಾಲಿಕರ ಬಳಿ ಅವರ ಕರಾರು ಪತ್ರಗಳ ಪ್ರತಿಗಳಿರುತ್ತದೆ. ಈ ಎಲ್ಲಾ ಮಾಹಿತಿ ಸಂಗ್ರಹಿಸಿದಲ್ಲಿ ಅನ್ಯ ಸ್ಥಳದ ಮತದಾರರ ವಿವರ ಲಭ್ಯವಾಗುತ್ತದೆ. ಆದರೆ ಕೆಲಸದಲ್ಲಿ ನಿರ್ಲಕ್ಷ್ಯತೆ ಇದ್ದಲ್ಲಿ ಮಾಹಿತಿ ಸಂಗ್ರಹಿಸಲು ಸಾಧ್ಯವಾಗುವುದಿಲ್ಲ. ಇನ್ನೊಂದು ಭಾರಿ ಸಭೆ ಕರೆದು ಪರಿಶೀಲನೆ ನಡೆಸಲಾಗುತ್ತದೆ, ಆ ನಂತರವೂ ಕ್ಷೇತ್ರದಲ್ಲಿ ಸರಿಯಾಗಿ ಕೆಲಸ ಮಾಡಿದಿದ್ದಲ್ಲಿ ಕರ್ತವ್ಯ ನಿರ್ಲಕ್ಷ್ಯತೆ ತೋರುವ ಬಿ.ಎಲ್.ಓ.ಗಳ ಮೇಲೆ ಕ್ರಮ ಅನಿವಾರ್ಯವಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಮತಗಟ್ಟೆ ಅಧಿಕಾರಿಗಳಿಗೆ ನೋಟಿಸ್; ಮತಗಟ್ಟೆ ಅಧಿಕಾರಿಗಳು ಕೆಲವು ಕಡೆ ಅತ್ಯುತ್ತಮವಾಗಿ ಕೆಲಸ ಮಾಡಿರುವರು. ಮತ್ತು ಇನ್ನು ಕೆಲವರು ಕರ್ತವ್ಯ ನಿರ್ಲಕ್ಷ್ಯತೆಯನ್ನು ತೋರುತ್ತಿದ್ದಾರೆ. ಸಭೆ ಕರೆದಿದ್ದರೂ ಸರಿಯಾದ ಮಾಹಿತಿ ನೀಡಲು ಸಾಧ್ಯವಾಗುವುದಿಲ್ಲ ಎಂದು ಗೈರು ಹಾಜರಾಗಿದ್ದಾರೆ, ಅಂತಹ ಬಿ.ಎಲ್.ಓ.ಗಳಿಗೆ ನೋಟಿಸ್ ನೀಡಲು ತಿಳಿಸಿ ಮತಗಟ್ಟೆ ಅಧಿಕಾರಿಗಳಾಗಿ ಬಹುತೇಕ ಶಿಕ್ಷಕರಿದ್ದು ಮುಂದಿನ ಸಭೆಗೆ ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ಉಪನಿರ್ದೇಶಕರನ್ನು ಸಭೆಗೆ ಆಹ್ವಾನಿಸಲಾಗುತ್ತದೆ. ಬಿ.ಎಲ್.ಓ ಕೆಲಸ ಮಾಡುತ್ತಿರುವುದರಿಂದ ನಮಗೆ ಸಕಾಲದಲ್ಲಿ ಗಳಿಕೆ ರಜೆ ನೀಡಬೇಕಾಗಿದ್ದು ನೀಡಿಲ್ಲ ಎಂದಾಗ ಇದನ್ನು ಶಿಕ್ಷಣ ಇಲಾಖೆ ಆಯುಕ್ತರು ಮತ್ತು ಚುನಾವಣಾಧಿಕಾರಿಗಳ ಗಮನಕ್ಕೆ ತರಲಾಗುತ್ತದೆ ಎಂದು ತಿಳಿಸಿದರು.

ಮತಗಟ್ಟೆ ಅಧಿಕಾರಿಗಳಿಗೆ ಮತದಾನ ಹೆಚ್ಚಳಕ್ಕೆ ಗುರಿ; ಮತದಾನ ಜಾಗೃತಿ ಕಾರ್ಯಕ್ರಮದ ಜೊತೆಗೆ ಎಲ್ಲಾ ಮತಗಟ್ಟೆ ವ್ಯಾಪ್ತಿಯಲ್ಲಿ ಮತದಾರರನ್ನು ಸಂಪರ್ಕಿಸುವ ಕೆಲಸವಾಗಬೇಕಾಗಿದೆ. ಈ ಮೂಲಕ ಶೇ 85 ಕ್ಕಿಂತ ಹೆಚ್ಚು ಮತದಾನವಾಗುವಂತೆ ನೋಡಿಕೊಳ್ಳಬೇಕು. ಮತದಾರರಿಗೆ ಮತದಾರ ಚೀಟಿ, ವೋಟರ್‍ಗೈಡ್, ಸಂಕಲ್ಪ ಪತ್ರ ತಲುಪಿಸುವ ಕೆಲಸ ಮಾಡಬೇಕು. ಈ ಭಾರಿಯ ಚುನಾವಣೆಯಲ್ಲಿ 3 ಮತ್ತು ಅದಕ್ಕಿಂತ ಹೆಚ್ಚು ಒಂದೇ ಸ್ಥಳದಲ್ಲಿ ಮತಗಟ್ಟೆ ಇರುವ ಕೇಂದ್ರಗಳಲ್ಲಿ ಮತದಾರರ ಸಹಾಯಮೇಜು ಸ್ಥಾಪಿಸಲಾಗುತ್ತದೆ ಹಾಗೂ ಸ್ವಯಂ ಸೇವಕರನ್ನು ನೇಮಕ ಮಾಡಲಾಗುತ್ತದೆ. ಮತ್ತು ಮತದಾರರ ಚೀಟಿಯಲ್ಲಿ ಕ್ಯೂ.ಆರ್.ಕೋಡ್ ಸಹ ನೀಡಲಾಗುತ್ತಿದ್ದು ಆನ್‍ಮಾಡಿಕೊಂಡಲ್ಲಿ ಮತಗಟ್ಟೆಗೆ ಹೋಗಬಹುದಾಗಿದೆ. ಆದರೂ ಸಹ ಇಂತಹ ಮತಗಟ್ಟೆಗಳಿಗೆ ಗೊಂದಲವಾಗದಂತೆ ಎಚ್ಚರ ವಹಿಸಲಾಗುತ್ತದೆ ಎಂದರು.

ಮತಗಟ್ಟೆ ಅಧಿಕಾರಿಗಳು ಸಂಪರ್ಕಕ್ಕೆ ಸಿಗದಿರುವ ಮತದಾರರ ಬಗ್ಗೆ ಅವರ ಸಂಪರ್ಕಸಾಧಿಸುವ ಮೂಲಕ ಮತದಾನ ಮಾಡಲು ತಿಳಿಸಲಾಗುತ್ತದೆ. ವಸತಿಗೃಹಗಳಲ್ಲಿ ವಾಸಿಸುತ್ತಿದ್ದ ಮತದಾರರಾಗಿದ್ದಲ್ಲಿ ಅಂತಹ ಇಲಾಖೆಗಳ ಮುಖ್ಯಸ್ಥರ ಗಮನಕ್ಕೆ ತಂದು ಅವರ ಸಂಪರ್ಕ ಸಾಧಿಸಲಾಗುತ್ತದೆ. ಮತ್ತು ಈ ಭಾರಿಯ ಚುನಾವಣೆಯಲ್ಲಿ ಅಗತ್ಯ ಸೇವಾ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ ಅವರು ಕರ್ತವ್ಯ ನಿರ್ವಹಿಸುತ್ತಿರುವ ಜಿಲ್ಲಾ ಕೇಂದ್ರದಿಂದ ಮತದಾನಕ್ಕೆ ಅವಕಾಶ ಮಾಡಿದ್ದು ಅವರಿಗೆ 12ಡಿ ಕೊಡಿಸಲು ಕ್ರಮ ಕೈಗೊಳ್ಳಲಾಗುತ್ತದೆ ಎಂದರು.

ಪಾಲಿಕೆ ಆಯುಕ್ತರಾದ ರೇಣುಕಾ ಮಾತನಾಡಿ ಪಾಲಿಕೆ ವ್ಯಾಪ್ತಿಯಲ್ಲಿ ಎಲ್ಲಾ ಮತದಾರರಿಗೂ ಮತಚೀಟಿ, ಮಾರ್ಗದರ್ಶಿ, ಸಂಕಲ್ಪ ಪತ್ರವನ್ನು ಎಲ್ಲಾ ಮತದಾರರಿಗೂ ತಲುಪಿಸುವ ಕೆಲಸ ಮಾಡಲಾಗುತ್ತದೆ. ಈ ಕೆಲಸಕ್ಕಾಗಿ ಎಲ್ಲಾ ಬಿಎಲ್‍ಓ ಗಳ ಜೊತೆಗೆ ಪಾಲಿಕೆ ನೀರುಗಂಟಿ, ಆರೋಗ್ಯ ನಿರೀಕ್ಷಕರು, ಕಂದಾಯ ನಿರೀಕ್ಷಕರು ಸೇರಿದಂತೆ ಎಲ್ಲಾ ಬಿಲ್ ಕಲೆಕ್ಟರ್‍ಗಳನ್ನು ಮತಗಟ್ಟೆ ಅಧಿಕಾರಿಗಳೊಂದಿಗೆ ನೇಮಿಸಲಾಗುತ್ತದೆ. ಕೆಲವು ಕಡೆ ಬಿಎಲ್‍ಓಗಳು ಸರಿಯಾಗಿ ಕೆಲಸ ಮಾಡದಿರುವುದು ಕಂಡು ಬಂದಿದ್ದು ಅವರ ಕಾರ್ಯವನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.

ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ಮಲ್ಲಾನಾಯ್ಕ್ ಹಾಗೂ ಬಿಎಲ್‍ಓಗಳು ಮತ್ತು ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!