ರೈತರ ಮಕ್ಕಳಿಗೆ ಹೆಣ್ಣು ಕೊಡಲು ಯುವಕರ ಪಾದಯಾತ್ರೆ
ಮಂಡ್ಯ: ಇತ್ತೀಚಿನ ದಿನಗಳಲ್ಲಿ ರೈತರ ಮಕ್ಕಳಿಗೆ ಹಾಗೂ ಖಾಸಗಿ ಉದ್ಯೋಗಿಗಳಿಗೆ ಯಾರೂ ಹೆಣ್ಣು ಕೊಡುತ್ತಿಲ್ಲ. ಸರ್ಕಾರಿ ಕೆಲಸದಲ್ಲಿ ಇರುವವರೇ ಬೇಕು ಎಂದು ಹೆಣ್ಣು ಹೆತ್ತವರು ಹೇಳುತ್ತಿದ್ದಾರೆ.
ಹೀಗಾಗಿ ಜಿಲ್ಲೆಯಾದ್ಯಂತ ಸಾವಿರಾರು ಜನರು ಅವಿವಾಹಿತರಾಗಿಯೇ ಉಳಿಯುವಂತಾಗಿದೆ. ಜನರು ಇವರನ್ನು ಬ್ರಹ್ಮಚಾರಿಗಳು ಎಂದೇ ಕರೆಯುತ್ತಿದ್ದಾರೆ. ಹೀಗಾಗಿ ಬ್ರಹ್ಮಚಾರಿ ಎಂಬ ಪಟ್ಟ ತೆಗೆದು ವಧು ಭಾಗ್ಯ ಕರುಣಿಸುವಂತೆ ಕೋರಿ ಯುವಕರು ಪಾದಯಾತ್ರೆ ಆರಂಭಿಸಿದ್ದಾರೆ.
ಹೌದು, ಜಿಲ್ಲೆಯ ವಿವಿಧೆಡೆಯಿಂದ ಬಂದಿದ್ದ ಬ್ರಹ್ಮಚಾರಿಗಳು, ಅವಿವಾಹಿತರು ‘ಬ್ರಹ್ಮಚಾರಿಗಳ ನಡಿಗೆ ಮಲೆಮಾದಪ್ಪನೆಡೆಗೆ’ ಘೋಷ ವಾಕ್ಯದೊಂದಿಗೆ ಗುರುವಾರ ಮದ್ದೂರು ತಾಲ್ಲೂಕಿನ ಭಾರತೀನಗರದಿಂದ ಮಲೆಮಹದೇಶ್ವರ ಬೆಟ್ಟದವರೆಗೆ ಪಾದಯಾತ್ರೆ ಆರಂಭಿಸಿದರು.
ರೈತರು, ಖಾಸಗಿ ಸಂಸ್ಥೆಗಳಲ್ಲಿ ಕೆಲಸ ಮಾಡುವ 100ಕ್ಕೂ ಹೆಚ್ಚು ಜನರು ಮದುವೆಯಾಗಲು ಹೆಣ್ಣು ಕೊಡಿಸುವಂತೆ ಮಲೆಮಹದೇಶ್ವರನಲ್ಲಿ ಪ್ರಾರ್ಥಿಸಿ ಪಾದಯಾತ್ರೆ ಆರಂಭಿಸಿದರು.
ಈಚೆಗೆ ಆದಿಚುಂಚನಗಿರಿ ಮಠ ಒಕ್ಕಲಿಗ ವಧು-ವರರ ಸಮಾವೇಶ ಆಯೋಜಿಸಿತ್ತು. 700–800 ಹೆಣ್ಣುಮಕ್ಕಳಿಗೆ 25,000ಕ್ಕೂ ಅಧಿಕ ಗಂಡುಗಳು ಬಂದಿದ್ದರು. ಸಮಾವೇಶದಲ್ಲಿ ಸಾಕಷ್ಟು ಗೊಂದಲ ಉಂಟಾಗಿತ್ತು. ಸಮಾವೇಶದಲ್ಲಿ ಪಾಲ್ಗೊಂಡಿದ್ದ ಬಹುತೇಕ ಗಂಡುಗಳು ನಿರಾಸೆಯಿಂದ ಹಿಂದಿರುಗಬೇಕಾಯಿತು.