2ಡಿ-2ಸಿ ಮೀಸಲಾತಿ: ಯಥಾಸ್ಥಿತಿಗೆ ಹೈ ಕೋರ್ಟ್ ನಿರ್ದೇಶನ

ಬೆಂಗಳೂರು: ಪಂಚಮಸಾಲಿ ಸೇರಿ ಲಿಂಗಾಯತ ಹಾಗೂ ಒಕ್ಕಲಿಗ ಸಮುದಾಯಗಳಿಗೆ 2ಸಿ ಮತ್ತು 2ಡಿ ಮೀಸಲು ನೀಡಿಕೆ ವಿಚಾರವಾಗಿ ಯಥಾಸ್ಥಿತಿ ಕಾಪಾಡಿಕೊಳ್ಳುವಂತೆ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ.
ಈ ಮೂಲಕ ಲಿಂಗಾಯತ ಪಂಚಮಸಾಲಿ ಮೀಸಲಾತಿ ಹೋರಾಟಕ್ಕೆ ಭಾರೀ ಟ್ವಿಸ್ಟ್ ಸಿಕ್ಕಂತಾಗಿದೆ. ಹೊಸದಾಗಿ ರಚಿಸಲಾಗಿದ್ದ 2ಸಿ ಹಾಗೂ 2ಡಿ ಕೆಟಗರಿಯ ಎರಡೂ ಮೀಸಲಾತಿಗಳಿಗೂ ಬ್ರೇಕ್ ಹಾಕಿ ಯಥಾಸ್ಥಿತಿ ಕಾಯ್ದುಕೊಳ್ಳಿ ಎಂದು ಹೈಕೋರ್ಟ್ ಆದೇಶ ನೀಡಿದೆ.
ಇದು ಹೈಕೋರ್ಟ್‌ನ ಅಂತಿಮ ಆದೇಶವಲ್ಲ. ಮಧ್ಯಂತರ ಆದೇಶವನ್ನು ಹೈಕೋರ್ಟ್‌ ನೀಡಿದೆ. ಈ ಮೂಲಕ ಮೀಸಲಾತಿ ಧರ್ಮ ಸಂಕಟಕ್ಕೆ ಸಿಲುಕಿದ್ದ ಕರ್ನಾಟಕ ಸರ್ಕಾರಕ್ಕೆ ಕೂಡಾ ತಾತ್ಕಾಲಿಕ ರಿಲೀಫ್ ಸಿಕ್ಕಿದೆ. ಒಂದು ಹಂತದಲ್ಲಿ ಹೈಕೋರ್ಟ್ ನಿರ್ಧಾರದಿಂದ ಕರ್ನಾಟಕ ರಾಜ್ಯ ಸರ್ಕಾರಕ್ಕೆ ಭಾರೀ ಹಿನ್ನಡೆ ಆಗಿದೆ ಎಂತಲೂ ವಿಶ್ಲೇಷಿಸಲಾಗುತ್ತಿದೆ. ಪಂಚಮಸಾಲಿ ಲಿಂಗಾಯತ ಮಾತ್ರವಲ್ಲ, ಒಕ್ಕಲಿಗರ ಮೀಸಲಾತಿಗೂ ಇದೀಗ ಬ್ರೇಕ್ ಬಿದ್ದಂತಾಗಿದೆ.
ಮೀಸಲಾತಿ ಸಂಬಂಧ ಹಿಂದುಳಿದ ವರ್ಗಗಳ ಆಯೋಗ ಇನ್ನೂ ಅಂತಿಮ ವರದಿ ನೀಡಿಲ್ಲ. ಆಯೋಗದ ಅಧ್ಯಯನ ಹಾಗೂ ಅಂತಿಮ ವರದಿಗೆ ಮುನ್ನವೇ ಒತ್ತಡಕ್ಕೆ ಒಳಗಾಗಿ ಸರ್ಕಾರ ಆದೇಶ ನೀಡಿದೆ ಎಂದು ಸರ್ಕಾರದ ತೀರ್ಮಾನವನ್ನು ತಡೆ ಹಿಡಿಯಲಾಗಿದೆ. ರಾಜ್ಯ ಸರ್ಕಾರ ಹೊಸದಾಗಿ ರಚಿಸಿದ ಕೆಟಗರಿಯನ್ನು ತಡೆ ಹಿಡಿಯಲಾಗಿದೆ. ಈ ವಿಚಾರ ಸಂಬಂಧ ಜನವರಿ 30 ರಂದು ವಿಚಾರಣೆ ಮುಂದೂಡಿಕೆ ಮಾಡಲಾಗಿದೆ. ರಾಜ್ಯ ಸರ್ಕಾರ ಒಕ್ಕಲಿಗರಿಗೆ 2 ಸಿ ಕೆಟಗರಿ ಅಡಿ ಹಾಗೂ ಲಿಂಗಾಯತರಿಗೆ 2ಡಿ ವಿಭಾಗದ ಅಡಿ ಮೀಸಲಾತಿ ಕಲ್ಪಿಸಿ ಆದೇಶ ಹೊರಡಿಸಿತ್ತು

Leave a Reply

Your email address will not be published. Required fields are marked *

error: Content is protected !!