‘ಬೆಂಗಳೂರು-ಮೈಸೂರು ಹೆದ್ದಾರಿ ಆಸ್ಕರ್ ಕೇಂದ್ರ ಸಚಿವರಾಗಿದ್ದಾಗ ಮಂಜೂರು ಆಗಿದ್ದು..?’

ಬೆಂಗಳೂರು-ಮೈಸೂರು ಹೆದ್ದಾರಿ ಆಸ್ಕರ್ ಕೇಂದ್ರ ಸಚಿವ

ಮೈಸೂರು: ಬೆಂಗಳೂರು ಮೈಸೂರು ಹೆದ್ದಾರಿಯನ್ನು ಆಸ್ಕರ್ ಫರ್ನಾಂಡಿಸ್ ಅವರು ಯುಪಿಎ ಸರಕಾರದ ಅವಧಿಯಲ್ಲಿ ಕೇಂದ್ರ ಸಚಿವರಾಗಿದ್ದಾಗ ಮಂಜೂರು ಮಾಡಿದ್ದಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಮೈಸೂರು ಜಿಲ್ಲೆ ವರುಣಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಪ್ರಜಾಧ್ವನಿ ಸಮಾವೇಶದಲ್ಲಿ ಜನಸ್ತೋಮವನ್ನುದ್ದೇಶಿಸಿ ಡಿ.ಕೆ. ಶಿವಕುಮಾರ್ ಮಾತನಾಡಿದರು. ಬಹಳ ಸಮಯಗಳ ಕಾಲ ಎಚ್.ಸಿ. ಮಹದೇವಪ್ಪ ಅವರು ಈ ಭಾಗದ ಜನಪ್ರತಿನಿಧಿಯಾಗಿ ಸಾಕಷ್ಟು ಅಭಿವೃದ್ಧಿ ಕಾರ್ಯ ಮಾಡಿದ್ದಾರೆ. ಅವರು ಪಿಡಬ್ಲ್ಯೂಡಿ ಸಚಿವರಾಗಿದ್ದಾಗ ಅತ್ಯುತ್ತಮವಾಗಿ ಕೆಲಸ ಮಾಡಿದ್ದರು ಎಂದರು.
ಈ ಭಾಗದ ಜನ ಕಾಂಗ್ರೆಸ್ ಪಕ್ಷ ಹಾಗೂ ರಾಜ್ಯಕ್ಕೆ ಅತ್ಯುತ್ತಮ ನಾಯಕರಾದ ಸಿದ್ದರಾಮಯ್ಯ ಅವರನ್ನು ಕೊಟ್ಟಿದೆ. ನಾನು ಆಗಾಗ್ಗೆ ಒಂದು ಮಾತು ಹೇಳುತ್ತೇನೆ. ದೇವರು ವರವನ್ನು ನೀಡುವುದಿಲ್ಲ, ಶಾಪವನ್ನೂ ನೀಡುವುದಿಲ್ಲ. ಕೇವಲ ಅವಕಾಶವನ್ನು ಮಾತ್ರ ನೀಡುತ್ತಾನೆ. ಆದರೆ ನಿಮಗೆ ಕೊಟ್ಟಿರುವ ಅವಕಾಶವನ್ನು ಸರಿಯಾದ ರೀತಿಯಲ್ಲಿ ಉಪಯೋಗಿಸಿಕೊಳ್ಳಬೇಕು. ನಿಮ್ಮ ಆಶೀರ್ವಾದದಿಂದ ಮುಖ್ಯಮಂತ್ರಿಯಾದ ಸಿದ್ದರಾಮಯ್ಯ ಅವರು ಅನೇಕ ಸಾಧನೆ ಮಾಡಿದ್ದಾರೆ. ಅದಕ್ಕೆ ನೀವೆಲ್ಲರೂ ಕಾರಣ.

ಬೆಂಗಳೂರು-ಮೈಸೂರು ಹೆದ್ದಾರಿಯನ್ನು ಆಸ್ಕರ್ ಫರ್ನಾಂಡಿಸ್ ಅವರು ಯುಪಿಎ ಸರಕಾರದ ಅವಧಿಯಲ್ಲಿ ಕೇಂದ್ರ ಸಚಿವರಾಗಿದ್ದಾಗ ಮಂಜೂರು ಮಾಡಿದ್ದರು. ಸಿದ್ದರಾಮಯ್ಯ ಹಾಗೂ ಮಹದೇವಪ್ಪ ಅವರು ಈ ರಸ್ತೆ ಮಂಜೂರು ಮಾಡಿಸಿದ್ದರು. ಈ ರಸ್ತೆ ಆದ ನಂತರ ಮಂಡ್ಯ, ಮೈಸೂರು, ಕೊಡಗು ಭಾಗದ ಚಿತ್ರಣ ಬದಲಾಗಲಿದೆ. ಈ ರಸ್ತೆಯಿಂದ ಈ ಭಾಗದ ಜಮೀನಿಗೆ ಮೂರ್ನಾಲ್ಕು ಪಟ್ಟು ಬೆಲೆ ಹೆಚ್ಚಾಗಿದೆ ಎಂದು ಡಿಕೆಶಿ ಹೇಳಿದರು.


ಕಾಂಗ್ರೆಸ್ ಪಕ್ಷ ಉಳುವವನಿಗೆ ಭೂಮಿ, ಬಗರ್ ಹುಕುಂ ಸಾಗುವಳಿ, ಬ್ಯಾಂಕ್ ರಾಷ್ಟ್ರೀಕರಣ, ಬಿಸಿಯೂಟ, ಅನ್ನಭಾಗ್ಯ, ಶಿಕ್ಷಣ, ವಸತಿ, ಉಚಿತ ವಿದ್ಯುತ್ ಸೇರಿದಂತೆ ಬಡವರ ಬದುಕಲ್ಲಿ ಬದಲಾವಣೆ ತರುವ ಅನೇಕ ಕಾರ್ಯಕ್ರಮ ನೀಡಿದೆ ಎಂದ ಡಿಕೆಶಿ, ಈ ಪ್ರಜಾಧ್ವನಿ ಯಾತ್ರೆ ಮಾಡುತ್ತಿರುವುದು ಜನರ ಸಮಸ್ಯೆ ಆಲಿಸಲು. ಅದಕ್ಕೆ ಪರಿಹಾರ ನೀಡಲು. ಈ ಭಾಗದಲ್ಲಿ ಯತೀಂದ್ರ ಅವರು ಶಾಸಕರಾಗಿ ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ವರುಣಾ ಕ್ಷೇತ್ರ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಪಕ್ಷದ ಅಡಿಪಾಯ. ಇದನ್ನು ನಾವು ಮರೆಯುವುದಿಲ್ಲ ಎಂದರು.
ಸಿದ್ದರಾಮಯ್ಯ ಸರ್ಕಾರದಲ್ಲಿ ನಾವು 165 ಭರವಸೆ ನೀಡಿದ್ದು, 158 ಈಡೇರಿಸಿದ್ದೆವು. ಬಿಜೆಪಿ 600 ಭರವಸೆ ನೀಡಿ, 550 ಭರವಸೆ ಈಡೇರಿಸಲಿಲ್ಲ. 1 ಲಕ್ಷದ ವರೆಗೂ ಸಾಲ ಮನ್ನಾ ಮಾಡುತ್ತೇವೆ ಎಂದರು, ಮಾಡಿದರಾ? ಕೋವಿಡ್ ಸಮಯದಲ್ಲಿ ಸತ್ತವರಿಗೆ ಪರಿಹಾರ, ಬಡವರಿಗೆ ಚಿಕಿತ್ಸೆ ಬಿಲ್ ಪಾವತಿಸುವುದಾಗಿ ಹೇಳಿದರು. ಆದರೆ ಕೊಡಲಿಲ್ಲ ಎಂದು ಬಿಜೆಪಿ ಸರ್ಕಾರದ ವಿರುದ್ದ ಡಿಕೆಶಿ ವಾಗ್ದಾಳಿ ನಡೆಸಿದರು.
ಈ ಸರ್ಕಾರ ಲಂಚ ಬಿಟ್ಟು ಬೇರೇನೂ ಮಾಡಿಲ್ಲ. ಚಾಮರಾಜನಗರದಲ್ಲಿ ಆಕ್ಸಿಜನ್ ಕೊರತೆಯಿಂದ 36 ಮಂದಿ ಸತ್ತರೂ ಆರೋಗ್ಯ ಸಚಿವರು ಕೇವಲ 3 ಜನ ಸತ್ತಿದ್ದಾರೆ ಎಂದು ಸುಳ್ಳು ಹೇಳಿದರು. ನಾವು ನಾಯಕರೆಲ್ಲ ಹೋಗಿ ಪರಿಶೀಲನೆ ಮಾಡಿದೆವು. ಜಿಲ್ಲಾ ಮಂತ್ರಿ ಸುರೇಶ್ ಕುಮಾರ್, ಆರೋಗ್ಯ ಮಂತ್ರಿ ಸುಧಾಕರ್ ಒಂದು ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಲಿಲ್ಲ. ಇವರು ಮನುಷ್ಯರಾ? ಕಾಂಗ್ರೆಸ್ ಪಕ್ಷದಿಂದ ಈ ಎಲ್ಲ ಕುಟುಂಬಗಳಿಗೆ ತಲಾ 1 ಲಕ್ಷ ನೆರವು ನೀಡಿದೆವು ಎಂದವರು ಹೇಳಿದರು.

Leave a Reply

Your email address will not be published. Required fields are marked *

error: Content is protected !!