Murder: ಯುವಕನ ಬರ್ಬರ ಹತ್ಯೆ.! ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿರುವ ಶಂಕೆ.!
ದಾವಣಗೆರೆ: ರಕ್ತದ ಮಡುವಿನಲ್ಲಿ ಯುವಕನೊಬ್ಬನ ಮೃತದೇಹ ಪತ್ತೆಯಾಗಿದ್ದು, ತಲೆ ಮೇಲೆ ಕಲ್ಲು ಎತ್ತಿ ಹಾಕಿ ಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಜಿಲ್ಲೆಯ ಹರಿಹರ ನಗರದ ಮಹಾತ್ಮಾಗಾಂಧಿ ಕಾಂಪ್ಲೆಕ್ಸ್ನ ಮಳಿಗೆ ಎದುರಿನ ಓಸಿಯನ್ ಕಮ್ಯೂನಿಕೇಷನ್ ಅಂಗಡಿ ಬಾಗಿಲ ಬಳಿ ಮೃತದೇಹ ಪತ್ತೆಯಾಗಿದೆ.
ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಗಂಗನರಸಿ ಗ್ರಾಮದ ಹೆಚ್. ಗಿರೀಶ್ (25) ಕೊಲೆಯಾದ ಯುವಕ ಎಂದು ಗುರುತಿಸಲಾಗಿದೆ. ವ್ಯವಸಾಯ ಮಾಡಿಕೊಂಡಿದ್ದ ಗಿರೀಶ್‌ನ ಶವದ ಬಳಿ ಕಲ್ಲು ಬಿದ್ದಿದ್ದು, ತಲೆ ಮೇಲೆ ಕಲ್ಲು ಎತ್ತಿ ಹಾಕಿರುವ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ. ನಿನ್ನೆ ರಾತ್ರಿ ಈ ಘಟನೆ ನಡೆದಿದ್ದು, ಇಂದು ಬೆಳಗ್ಗೆ ಜನ ಸಾಮಾನ್ಯರು ಹಾಗೂ ಅಂಗಡಿ ಮಾಲೀಕರು ಅಂಗಡಿ ಬಳಿ ತೆರಳಿದಾಗ ಈ ಘಟನೆ ಬೆಳಕಿಗೆ ಬಂದಿದೆ.
ಘಟನೆ ನಡೆದಿರುವ ಸ್ಥಳಕ್ಕೆ ಎಸ್ ಪಿ ರಿಷ್ಯಂತ್, ಗ್ರಾಮಾಂತರ ಡಿವೈಎಸ್ಪಿ ಬಸವರಾಜ, ಸಿಪಿಐ ಸತೀಶ್, ಪಿಎಸ್‌ಐ ಸುನಿಲ್ ತೇಲಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶ್ವಾನದಳ, ಬೆರಳಚ್ಚು ತಜ್ಞರ ತಂಡದಿಂದ ಪರಿಶೀಲನೆ ಕಾರ್ಯ ನಡೆಯುತ್ತಿದ್ದು, ಸಂಪೂರ್ಣ ತನಿಖೆ ಬಳಿಕವೇ ಸತ್ಯ ಹೊರ ಬರಲಿದೆ. ಹರಿಹರ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ದುಷ್ಕರ್ಮಿಗಳ ಪತ್ತೆಗಾಗಿ ಶೋಧ ಕಾರ್ಯ ಮುಂದುವರಿಸಿದ್ದಾರೆ.