ಮುಖ್ಯಮಂತ್ರಿ ಬೊಮ್ಮಾಯಿ ಒಬ್ಬ ಕೋಮುವಾದಿ ಸಿಎಂ: ಚೇತನ್ ವಾಗ್ದಾಳಿ
ದಾವಣಗೆರೆ: ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಜಾತ್ಯಾತೀತ ಮುಖ್ಯಮಂತ್ರಿ ಎಂದುಕೊಂಡಿದ್ದೆವು. ಆದರೆ ಅವರೊಬ್ಬ ಕೋಮುವಾದಿ ಮುಖ್ಯಮಂತ್ರಿ ಎಂದು ನಟ ಚೇತನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ಮತಾಂತರ ನಿಷೇಧ ಕಾಯ್ದೆ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒತ್ತಾಯದ ಮತಾಂತರ ಮಾಡಿದರೆ ಅದಕ್ಕೆ ಕ್ರಮ ಕೈಗೊಳ್ಳಲಿ, ಆದರೆ ಜನರಿಗೆ ಹೆದರಿಸಿ ಕಾಯ್ದೆ ತರುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಬೊಮ್ಮಾಯಿ ಒಬ್ಬ ಕೋಮುವಾದಿ ಮುಖ್ಯಮಂತ್ರಿಯಾಗಿದ್ದಾರೆ. ಅವರಂತೆ ಯಾವ ಸಿಎಂ ಕೂಡ ಇಷ್ಟು ಕೋಮುವಾದಿಯಾಗಿರಲಿಲ್ಲ, ಅವರ ತಂದೆ ಒಳ್ಳೆಯ ಪ್ರಗತಿಪರ ಚಿಂತಕ ಸಿಎಂ ಆಗಿದ್ದರು ಎಂದರು.
ಮತಾಂತರ ಆಗುವ ಹಕ್ಕು ಎಲ್ಲರಿಗೂ ಇದೆ. ಆದರೆ, ರಾಜ್ಯ ಸರಕಾರ ಅದನ್ನು ಕಸಿದುಕೊಳ್ಳಲು ಯತ್ನಿಸುವುದಷ್ಟೇ ಅಲ್ಲದೇ ಈ ಕಾಯ್ದೆಯನ್ನು ಉದ್ದೇಶ ಪೂರ್ವಕವಾಗಿಯೆ ಧಾರ್ಮಿಕ ಅಲ್ಪ ಸಂಖ್ಯಾತರನ್ನು ಗುರಿಯಾಗಿಸಿ ಜಾರಿಗೊಳಿಸುವ ಹುನ್ನಾರ ನಡೆಸಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಅಂಬೇಡ್ಕರ್, ಬಸವಣ್ಣನವರು ಕೂಡ ಅವರಿಗೆ ಬೇಕಾದ ಧರ್ಮ ಸ್ಥಾಪನೆ ಮಾಡಿದ್ದಾರೆ. ಮತಾಂತರ ನಿಷೇಧ ಕಾಯ್ದೆ ಸಂವಿಧಾನದ ವಿರೋಧಿ ನೀತಿಯಾಗಿದ್ದು.ಜನರನ್ನು ಹೆದರಿಸಲು ಮತಾಂತರ ನಿಷೇಧ ವಿಧೇಯಕ ಅಂಗೀಕಾರ ಮಾಡಲಾಗಿದೆ ಎಂದು ಆರೋಪಿಸಿದರು.
ಚೇತನಾ ಅಹಿಂಸಾ ಫೌಂಡೇಶನ್‌ನಿಂದ ರಾಜ್ಯಾದ್ಯಂತ ಪ್ರವಾಸ ಕೈಗೊಂಡು ದೇವದಾಸಿ ಮಹಿಳೆಯರ ಸ್ಥಿತಿಗತಿ ಅಧ್ಯಯನ ಮಾಡಲಾಗುತ್ತಿದ್ದು, ದೇವದಾಸಿ ಮಹಿಳೆಯರ ಸ್ಥಿತಿ ಅತ್ಯಂತ ಶೋಚನೀಯವಾಗಿದೆ. ಆದ್ದರಿಂದ ಅವರ ಪುನರ್ವಸತಿಗೆ ಸರಕಾರ ಪರಿಣಾಮಕಾರಿ
ಕ್ರಮ ಕೈಗೊಳ್ಳಬೇಕು ಎಂದು ಚಿತ್ರನಟ ಚೇತನ್ ಒತ್ತಾಯಿಸಿದರು.
ಸ್ವಾಮೀಜಿಗಳ ವಿರುದ್ಧ ಕಿಡಿ: ಕೆಲ ಸ್ವಾಮೀಜಿಗಳು ಶಾಲೆಗಳಲ್ಲಿ ಮೊಟ್ಟೆ ವಿತರಿಸುವ ಸಂಬಂಧ ಸಸ್ಯಾಹಾರಿಗಳಿಗೆ ಪ್ರತ್ಯೇಕ ಶಾಲೆಗಳನ್ನ ಕೇಳುತ್ತೀರುವುದು ಖಂಡನೀಯ. ಮೊಟ್ಟೆ ತಿನ್ನುವವರ ಶಾಲೆ, ಮಾಂಸ ತಿನ್ನುವವರ ಶಾಲೆ ಹೀಗೆ ಪ್ರತ್ಯೇಕ ಶಾಲೆಗಳಾಗಿ ಮಕ್ಕಳ ಮನಸ್ಸಲ್ಲಿ ಹುಳಿ ಹಿಂಡುವುದೇ ಸ್ವಾಮೀಜಿಗಳ ಉದ್ದೇಶವಾಗಿದೆ ಎಂದು ಕಿಡಿಕಾರಿದರು.