ಬೀರಲಿಂಗೇಶ್ವರ ದೇವಸ್ಥಾನದ ಪೂಜಾ ಕೈಂಕರ್ಯ ನಡೆಸಲು ನೀಡಿದ ಆದೇಶ ಪಾಲಿಸದ ಡಿಸಿ – ಪೂಜಾರ್ ವಂಶಸ್ಥರ ದೂರು

ಬೀರಲಿಂಗೇಶ್ವರ ದೇವಸ್ಥಾನ
ದಾವಣಗೆರೆ: ಬೀರಲಿಂಗೇಶ್ವರ ದೇವಸ್ಥಾನದ ಪೂಜಾ ಕೈಂಕರ್ಯ ನಡೆಸುವ ಕುರಿತಂತೆ ಧಾರ್ಮಿಕ ದತ್ತಿ ಇಲಾಖೆ ನ್ಯಾಯಾಲಯದಲ್ಲಿ ವಿಚಾರಣೆ ನಡೆದು ನಮ್ಮ ಮೇಲಿನ ಆರೋಪಗಳು ಸುಳ್ಳೆಂದು ಸಾಬೀತಾಗಿ ಪುನಃ ಅರ್ಚಕ ಹುದ್ದೆಗೆ ನೇಮಿಸಿಕೊಳ್ಳಲು ಆಯುಕ್ತರು ಆದೇಶಿಸಿದ್ದರೂ, ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ಅವರು ಆದೇಶ ಪಾಲಿಸುತ್ತಿಲ್ಲ ಎಂದು ಪೂಜಾರ್ ವಂಶಸ್ಥರು ಆರೋಪಿಸಿದ್ದಾರೆ.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪೂಜಾರ್ ವಂಶಸ್ಥರ ಬಿ.ಜಿ ಶಿವಯೋಗಿ, ದೇವಸ್ಥಾನದ ಕಮಿಟಿಯವರು ನಮ್ಮ ಮೇಲೆ ಸುಳ್ಳು ಆರೋಪ ಮಾಡಿ ಅರ್ಚಕರ ಕೆಲಸದಿಂದ ವಜಾ ಗೊಳಿಸಿದ್ದರು. ನಾವು ಹೈಕೋರ್ಟ್ ಮೊರೆ ಹೋಗಿದ್ದೆವು. ಅಲ್ಲಿ ಈ ವಿಚಾರಣೆಯನ್ನು ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಇಲಾಖೆಯಲ್ಲಿ ಬಗೆಹರಿಸಿಕೊಳ್ಳಲು ಸೂಚಿಸಲಾಗಿತ್ತು.
ಧಾರ್ಮಿಕ ದತ್ತಿ ಇಲಾಖೆ ನ್ಯಾಯಾಲಯದಲ್ಲಿ ವಿಚಾರಣೆ ನಡೆದು ನಮ್ಮ ಮೇಲಿನ ಆರೋಪಗಳು ಸುಳ್ಳೆಂದು ಸಾಬೀತಾಗಿ ಪುನಃ ಅರ್ಚಕ ಹುದ್ದೆಗೆ ನೇಮಿಸಿಕೊಳ್ಳಲು ಆಯುಕ್ತರು ಜಿಲ್ಲಾಧಿಕಾರಿಗಳಿಗೆ ಆದೇಶಿಸಿದ್ದಾರೆ. ಆದರೆ ಜಿಲ್ಲಾಧಿಕಾರಿಗಳು ಇಲಾಖೆಯ ಆದೇಶ ಪಾಲಿಸದೆ ಅಗೌರ ತೋರಿದ್ದಾರೆ ಎಂದು ದೂರಿದರು.
ಜಿಲ್ಲಾಧಿಕಾರಿಗಳು ನಮ್ಮ ಮನವಿಗೆ ಸ್ಪಂದಿಸದೇ ಇದ್ದರೆ ಪೂಜಾರ್ ವಂಶಸ್ಥರೆಲ್ಲರೂ ಸೇರಿ ಜಿಲ್ಲಾಡಳಿತ ಭವನದ ಮುಂದೆ ಅನಿರ್ದಿಷ್ಟ ಧರಣಿ ನಡೆಸಲಾಗುವುದು ಎಂದು ಎಚ್ಚರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ದೇವಸ್ಥಾನದ ಅರ್ಚಕ ಬಿ.ಜಿ. ಲಿಂಗೇಶ್, ಪೂಜಾರ್ ವಂಶಸ್ಥರಾದಹೈ ಶಂಕರಪ್ಪ, ಸವಿತಮ್ಮ ಟಿ.ಇ., ಸುನಿತ, ಹನುಮಂತಪ್ಪ, ಕರಿಯಪ್ಪ ಇತರರು ಉಪಸ್ಥಿತರಿದ್ದರು.