ದೇಶದಲ್ಲಿ ಹೊಸ ರಾಜಕೀಯ ಪಕ್ಷಕ್ಕೆ ಪ್ರಗತಿಪರರ ಚಿಂತನೆ!!
ದಾವಣಗೆರೆ: ದೇಶದಲ್ಲಿ ಹೊಸ ರಾಜಕೀಯ ಪಕ್ಷದ ಅಭ್ಯುದಯಕ್ಕೆ ಇಂದು ನಡೆದ ಪ್ರಗತಿಪರ ಚಿಂತಕರ ಸಭೆಯಲ್ಲಿ ಚಿಂತನೆ ನಡೆಸಲಾಯಿತು.
ದಾವಣಗೆರೆಯ ಪ್ರವಾಸಿ ಮಂದಿರದಲ್ಲಿ ಪ್ರಗತಿಪರ ಚಿಂತಕರ ಸಭೆ ಆಯೋಜಿಸಲಾಗಿತ್ತು. ಕೃಷಿ ಬೆಲೆ ಆಯೋಗದ ಮಾಜಿ ಅಧ್ಯಕ್ಷ, ಕೃಷಿ ತಜ್ಞ ಡಾ. ಪ್ರಕಾಶ್ ಕಮ್ಮರಡಿ ಅಧ್ಯಕ್ಷತೆ ವಹಿಸಿ ಮಾತನಾಡಿ, ದೇಶದಲ್ಲಿ ಯಾವುದೇ ಸರ್ಕಾರ ಅಧಿಕಾರಕ್ಕೆ ಬಂದರೂ ಭ್ರಷ್ಟಾಚಾರ, ಬಡತನ, ನಿರುದ್ಯೋಗ ಸಮಸ್ಯೆಗಳಿಗೆ ಪರಿಹಾರ ಸಿಗುತ್ತಿಲ್ಲವಾದ ಕಾರಣ ಹೊಸ ರಾಜಕೀಯ ಪಕ್ಷದ ಅಗತ್ಯವಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ದೇಶದಲ್ಲಿ ನಿರುದ್ಯೋಗ ಸಮಸ್ಯೆ ಹಾಗೆ ಉಳಿದಿದೆ. ಯಾವುದೇ ಉದ್ಯೋಗ ಪಡೆಯಲು ವಿಧಾನಸಭೆಗೆ ಸೂಟ್‌ಕೇಸ್ ಹಿಡಿದುಕೊಂಡು ಹೋಗುವ ಸ್ಥಿತಿಯಿದೆ. ದಿನಕ್ಕೆ 27 ಜನ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಭ್ರಷ್ಟಾಚಾರ ಅವ್ಯಾಹತವಾಗಿ ನಡೆಯುತ್ತಿದೆ. ಜನರ ಆರ್ಥಿಕ ಸ್ಥಿತಿಗತಿಗಳು ಪಾತಾಳಕ್ಕಿಳಿದಿವೆ. ಇದೆಲ್ಲಕ್ಕೂ ಒಂದು ಶಾಶ್ವತ ಪರಿಹಾರವೆಂದರೆ ಹೊಸ ಪಕ್ಷದ ಉದಯವಾಗಬೇಕು ಎಂದು ಅಭಿಪ್ರಾಯಿಸಿದರು.
ಕೇಂದ್ರದ ಕೃಷಿ ಕಾಯ್ದೆ ತಿದ್ದುಪಡಿ ವಿರೋಧಿಸಿ ಈಗಾಗಲೇ ಕಳೆದ ಒಂದು ವರ್ಷದಿಂದ ದೆಹಲಿಯಲ್ಲಿ ರೈತರು ಹಬ್ಬದಂತೆ ಚಳುವಳಿ ಮಾಡುತ್ತಿದ್ದಾರೆ. ಆದರೆ, ಇದುವರೆಗೂ ಪ್ರಧಾನಿಗಳು ಅವರನ್ನು ಭೇಟಿ ಮಾಡಿ ಸಮಸ್ಯೆಗಳ ಪರಿಹಾರಕ್ಕೆ ಮುಂದಾಗುತ್ತಿಲ್ಲ. ಸಾವಿರಾರು ಜನರು ಬೀದಿಗಿಳಿದು ಹೋರಾಟ ನಡೆಸಿದರೂ ಸಹ ಯಾಕೆ ಪರಿಣಾಮ ಬೀರುತ್ತಿಲ್ಲ ಎನ್ನುವ ಬಹುದೊಡ್ಡ ಪ್ರಶ್ನೆ ಎದುರಾಗಿದೆ ಎಂದರು.
ಈಗಿನ ರಾಜಕೀಯ ಪಕ್ಷಗಳು ರೈತರೊಳಗಿನ ಜಾತಿ ಎತ್ತಿಹಿಡಿದು ರೈತರನ್ನು ಮರಳು ಮಾಡುತ್ತಿವೆ. ಬಿಜೆಪಿ ಪಕ್ಷ ಇದಕ್ಕೂ ಒಂದು ಕೈ ಮುಂದೆ ಹೋಗಿ ಧರ್ಮದಿಂದ ಅವರನ್ನು ಮರಳು ಮಾಡುತ್ತಿದೆ ಎಂದು ದೂರಿದ ಅವರು, ಪಂಜಾಬಿನ ರೈತರು ಜಾತಿ ಹೇಳುವುದಿಲ್ಲ ಅವರು ಮೊದಲು ತಾವು ರೈತರೆಂದು ಹೇಳುತ್ತಾರೆ. ಆದರೆ, ಇಲ್ಲಿನವರು ತಮ್ಮ ಜಾತಿ ಆಧಾರದಲ್ಲಿ ಗುರುತಿಸಿಕೊಳ್ಳುತ್ತಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ರೈತ ಮುಖಂಡ ತೇಜಸ್ವಿ ಪಟೇಲ್ ಮಾತನಾಡಿ, ಚುನಾವಣೆ ಸಂದರ್ಭದಲ್ಲಿ ಯಾವುದೇ ಪ್ರಗತಿಪರ ಹೋರಾಟಗಳು ಪರಿಣಾಮ ಬೀರುವುದಿಲ್ಲ, ನಮಗೆ ಯಾಕೆ ಜನರಿಂದ ಅಂತರ ಸೃಷ್ಟಿಯಾಗುತ್ತದೆ ಅನ್ನುವುದನ್ನು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಹೇಳಿದರು.
ಚುನಾವಣೆಗಳಲ್ಲಿ ಚಿಂತನೆಗಳಿಗಿಂತ ಜಾತಿ ಪ್ರಭಾವ ಹೆಚ್ಚಾಗಿರುತ್ತದೆ. ಜನರಿಗೆ ಆಗ ಸಂಘಟಕರಿಂದ ಮಠಾಧೀಶರು ನೆನಪಾಗುತ್ತಾರೆ. ಹಾಗಾಗಿ, ಯಾವುದೇ ಶಾಸಕರ ಸಂಪರ್ಕ ಇಲ್ಲದ ಹೊರತು ಕೆಲಸಗಳು ನಡೆಯುವುದಿಲ್ಲ ಎಂಬಂತಾಗಿದೆ ಎಂದು ಮಾರ್ಮಿಕವಾಗಿ ನುಡಿದರು.
ಪ್ರಗತಿಪರ ಚಿಂತಕ, ಉಪನ್ಯಾಸಕ, ಪ್ರೊ. ಎ.ಬಿ. ರಾಮಚಂದ್ರಪ್ಪ ಮಾತನಾಡಿ, ನಾಲ್ವರು ಪ್ರಗತಿಪರ ಚಿಂತಕರನ್ನು ಹತ್ಯೆ ನಡೆಸಿದ ನಂತರವಂತೂ ಪ್ರಭುತ್ವದ ವಿರುದ್ಧ ಮಾತನಾಡಲು ಭಯಪಡುವ ಪರಿಸ್ಥಿತಿ ನಿರ್ಮಾಣವಾಗಿದೆ. ದೇಶದಲ್ಲಿ ಒಂದು ರೀತಿಯ ಅಘೋಷಿತ ತುರ್ತು ಪರಿಸ್ಥಿತಿ ಎದುರಾಗಿದೆ ಎಂದು ಹೇಳಿದರು.
ಸಭೆಯಲ್ಲಿ ಮಲ್ಲಿಕಾರ್ಜುನ ಕಡಕೋಳ, ರೈತ ಮುಖಂಡರಾದ ಬಲ್ಲೂರು ರವಿಕುಮಾರ್, ಹುಚ್ಚವ್ವನಹಳ್ಳಿ ಮಂಜುನಾಥ್, ಶ್ರೀನಿವಾಸ್, ರಾಘು ದೊಡ್ಡಮನಿ, ಇಮ್ತಿಯಾಜ್ ಹುಸೇನ್, ಕೊಟ್ರಪ್ಪ, ಮಹಬೂಬ್ ಪಾಷಾ, ರೂಪಾ ನಾಯ್ಕ್ ಮತ್ತಿತರರು ಉಪಸ್ಥಿತರಿದ್ದರು.