ಚಿತ್ರದುರ್ಗ: (Medical College) ಇಲ್ಲಿನ ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ (ಸಿಎಂಸಿಆರ್‌ಐ) ನಿರ್ದೇಶಕರಾದ ಡಾ. ಯುವರಾಜ್ ಬಿ. ವೈ. ಹಾಗೂ ಸಂಸ್ಥೆಯ ಸಿಬ್ಬಂದಿಯವರು ಕೋಟ್ಯಾಂತರ ರೂಪಾಯಿ ಸಾರ್ವಜನಿಕ ಹಣವನ್ನು ಅಕ್ರಮವಾಗಿ ಲೂಟಿ ಮಾಡಿದ್ದಾರೆಂದು ಆರೋಪಿಸಿ ‘ಕರ್ನಾಟಕ ರಾಜ್ಯ ಭ್ರಷ್ಟಾಚಾರ ಮುಕ್ತ ಹೋರಾಟ ಸಮಿತಿ’ಯ ರಾಜ್ಯಾಧ್ಯಕ್ಷ ಜೆ. ಓಬಳೇಶ್ ಕುಮಾರ್ ಅವರು ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ.

ದೂರಿನಲ್ಲಿ ನಿರ್ದೇಶಕರು ಹಾಗೂ ಸಿಬ್ಬಂದಿ ನಡೆಸಿರುವ ಸಾಲು ಸಾಲು ಅಕ್ರಮಗಳು ಮತ್ತು ನಿಯಮ ಉಲ್ಲಂಘನೆಗಳನ್ನು ಉಲ್ಲೇಖಿಸಲಾಗಿದ್ದು, ಮುಖ್ಯ ಆರೋಪಗಳ ವಿವರ ಇಲ್ಲಿದೆ:
೧. ಕೆಟಿಪಿಪಿ ನಿಯಮ ಹಾಗೂ ಟೆಂಡರ್ ಉಲ್ಲಂಘನೆ
KTPP (2003) ನಿಯಮಗಳ ಪ್ರಕಾರ 5 ಲಕ್ಷ ರೂ. ಮೇಲ್ಪಟ್ಟ ಕೆಲಸಗಳಿಗೆ ಇ-ಟೆಂಡರ್ ಮತ್ತು ಪತ್ರಿಕಾ ಪ್ರಕಟಣೆ ಕಡ್ಡಾಯವಾಗಿದ್ದರೂ, ಸುಮಾರು ₹10 ರಿಂದ 12 ಕೋಟಿ ರೂ. ಮೌಲ್ಯದ ಕೆಲಸಗಳನ್ನು ಯಾವುದೇ ಪ್ರಕಟಣೆ ಇಲ್ಲದೆ, ಕೇವಲ ಕೊಟೇಷನ್ ಹಾಗೂ GeM ಪೋರ್ಟಲ್ ಮೂಲಕ ಏಕಪಕ್ಷೀಯವಾಗಿ ನೀಡಲಾಗಿದೆ.
೨. ನಿಯಮಬಾಹಿರ ಖರೀದಿ ಮತ್ತು ದಾಖಲೆಗಳ ಅಭಾವ
ದಾಖಲೆಗಳ ನಿರ್ವಹಣೆ ಇಲ್ಲ: ಪೂರೈಕೆ ಆದೇಶ (Supply Order), E-way Bill, ಇನ್‌ವರ್ಡ್-ಔಟ್‌ವರ್ಡ್ ಮತ್ತು ಸ್ಟಾಕ್ ರಿಜಿಸ್ಟರ್ ದಾಖಲೆಗಳೇ ಇಲ್ಲದೆ ಬೇಕಾಬಿಟ್ಟಿ ಬಿಲ್ ಪಾವತಿಸಲಾಗಿದೆ.
ಖಾಸಗಿ ಕಂಪನಿಗಳೊಂದಿಗೆ ಶಾಮೀಲು: ಒಂದೇ ವ್ಯಕ್ತಿಯ ಒಡೆತನದ 4 ವಿಭಿನ್ನ ಏಜೆನ್ಸಿಗಳಿಂದ (ಈಶ್ವರ್ ಎಂಟರ್‌ಪ್ರೈಸಸ್, ರಾಜು ಎಲೆಕ್ಟ್ರಾನಿಕ್ಸ್, ಈಶ್ವರ್ ಟಿವಿ, ವಿಶ್ವನಾಥ್ ಸೈಂಟಿಫಿಕ್) ಎಂಆರ್‌ಪಿಗಿಂತ ಶೇ. 20ರಷ್ಟು ಹೆಚ್ಚಿನ ದರಕ್ಕೆ ಸಾಮಗ್ರಿಗಳನ್ನು ಖರೀದಿಸಲಾಗಿದೆ.
ಔಷಧ ಹಾಗೂ ಇಂಜೆಕ್ಷನ್ ಅಕ್ರಮ: ಟೆಂಡರ್ ನಿಯಮ ಉಲ್ಲಂಘಿಸಿ ಆಪ್ತ ಕಂಪನಿಗಳಿಂದ ಮಾರುಕಟ್ಟೆ ದರಕ್ಕಿಂತ 2 ರಿಂದ 3 ಪಟ್ಟು ಹೆಚ್ಚಿನ ಬೆಲೆಗೆ ಕಳಪೆ ಗುಣಮಟ್ಟದ ಔಷಧ ಹಾಗೂ ಇಂಜೆಕ್ಷನ್‌ಗಳನ್ನು ಖರೀದಿಸಿ ರೋಗಿಗಳ ಜೀವಕ್ಕೆ ಅಪಾಯ ತರಲಾಗಿದೆ.
೩. ವಾಹನ ಹಾಗೂ ಅನುದಾನ ದುರುಪಯೋಗ
ನಿರ್ದೇಶಕರಿಗೆ ತಿಂಗಳಿಗೆ 400 ಲೀಟರ್ ಇಂಧನದ ಮಿತಿ ಇದ್ದರೂ, ನಿಯಮ ಮೀರಿ 1600 ಲೀಟರ್‌ವರೆಗೂ ಬಳಸಿದ್ದು, ಮ್ಯಾನುಯಲ್ ಬಿಲ್‌ಗಳ ಮೂಲಕ ಲಕ್ಷಾಂತರ ರೂಪಾಯಿ ಪಾವತಿಸಲಾಗಿದೆ.
ಬೆಂಗಳೂರಿನಲ್ಲಿ ವಾಹನ ಅಪಘಾತವಾದಾಗ ಎಫ್‌ಐಆರ್ ಮಾಡಿಸದೆ, ಟೊಯೋಟಾ ಶೋರೂಮ್‌ಗೆ 1 ಲಕ್ಷಕ್ಕೂ ಹೆಚ್ಚು ಹಣ ಸರ್ಕಾರಿ ಖಾತೆಯಿಂದ ನೀಡಲಾಗಿದೆ.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ (SC/ST) ವಿದ್ಯಾರ್ಥಿಗಳಿಗೆ ಮೀಸಲಿದ್ದ ₹75 ಲಕ್ಷ ಅನುದಾನದಲ್ಲೂ ಅಕ್ರಮ ಎಸಗಲಾಗಿದೆ.
೪. ನೇಮಕಾತಿ ಹಗರಣ ಹಾಗೂ ನಿಯಮಾವಳಿಗಳ ಗಾಳಿಗೆ ತೂರುವಿಕೆ
ಬೋಧಕ ಹುದ್ದೆಗಳ ನೇರ ನೇಮಕಾತಿಯಲ್ಲಿ ರೋಸ್ಟರ್ ಹಾಗೂ ಒಳ ಮೀಸಲಾತಿ ನಿಯಮಗಳನ್ನು ಸಂಪೂರ್ಣವಾಗಿ ಉಲ್ಲಂಘಿಸಲಾಗಿದೆ.
ಅಂಗವಿಕಲ ಕೋಟಾ ಅಕ್ರಮ:ಡಾ. ಪ್ರಜ್ವಲ್ ಕೆ. (ಅಸ್ಥಿಪಂಜರ/ಕಿವಿ ಮೂಳೆ ತಜ್ಞರು) ಎಂಬುವರು ನಕಲಿ ಪ್ರಮಾಣಪತ್ರ ಸಲ್ಲಿಸಿದ್ದರೂ ಅಂಗವಿಕಲ ಕೋಟಾದಡಿ ನೇಮಕ ಮಾಡಿಕೊಳ್ಳಲಾಗಿದೆ.
ಸಿಬ್ಬಂದಿ ವರ್ಗಾವಣೆ ಅಕ್ರಮ: ಸರ್ಕಾರದಿಂದ 30 ಹೊಸ ಸ್ಟಾಫ್ ನರ್ಸ್ ನೇಮಕಕ್ಕೆ ಆದೇಶವಿದ್ದರೂ, ಅಧಿಕಾರ ದುರುಪಯೋಗಪಡಿಸಿಕೊಂಡು ಇತರೆ ಜಿಲ್ಲೆಗಳಲ್ಲಿದ್ದವರನ್ನು ವರ್ಗಾವಣೆ ಮಾಡಿಸಿಕೊಂಡು ಸ್ಥಳೀಯ ಆಕಾಂಕ್ಷಿಗಳಿಗೆ ಅನ್ಯಾಯ ಎಸಗಲಾಗಿದೆ.
೫. ವಿದ್ಯಾರ್ಥಿಗಳ ಶೋಷಣೆ ಮತ್ತು ಮೂಲಸೌಕರ್ಯದ ಕೊರತೆ
ಕಾಲೇಜು ಪ್ರಾರಂಭವಾಗಿ 3 ವರ್ಷ ಕಳೆದರೂ ವಿದ್ಯಾರ್ಥಿಗಳಿಗೆ ಸೂಕ್ತ ತರಗತಿ, ಲ್ಯಾಬ್ ಹಾಗೂ ಮೂಲಭೂತ ಸೌಕರ್ಯ ಕಲ್ಪಿಸಿಲ್ಲ. ಟೆಂಡರ್ ಇಲ್ಲದೆ ಖಾಸಗಿಯವರಿಂದ ಊಟ ಪೂರೈಸಿ, ಪ್ರತಿ ವಿದ್ಯಾರ್ಥಿಯಿಂದ ತಿಂಗಳಿಗೆ ₹4,000 ರಂತೆ ಒಟ್ಟು ₹18 ಲಕ್ಷ ಅಕ್ರಮವಾಗಿ ವಸೂಲಿ ಮಾಡಲಾಗುತ್ತಿದೆ.
ಪ್ರಮುಖ ಬೇಡಿಕೆ:
ಭ್ರಷ್ಟಾಚಾರ ನಿಗ್ರಹ ಕಾಯ್ದೆ 1988ರ ಕಲಂ 7 ಮತ್ತು 13 ರ ಅಡಿಯಲ್ಲಿ ಎಫ್‌ಐಆರ್ (FIR) ದಾಖಲಿಸಿ, ತಕ್ಷಣವೇ ಸ್ವತಂತ್ರ ತನಿಖಾ ತಂಡ ರಚಿಸಬೇಕು. ಎಲ್ಲಾ ದಾಖಲೆಗಳನ್ನು ವಶಕ್ಕೆ ಪಡೆದು ಸರ್ಕಾರಕ್ಕಾದ ನಷ್ಟವನ್ನು ತಪ್ಪಿತಸ್ಥರಿಂದ ವಸೂಲಿ ಮಾಡಬೇಕೆಂದು ‘ಕರ್ನಾಟಕ ರಾಜ್ಯ ಭ್ರಷ್ಟಾಚಾರ ಮುಕ್ತ ಹೋರಾಟ ಸಮಿತಿ’ ಒತ್ತಾಯಿಸಿದೆ.
Leave a comment