ಮೈಸೂರು ಅತ್ಯಾಚಾರ ಆರೋಪಿಗಳಿಗೆ ಸೂಕ್ತ ಶಿಕ್ಷೆಗೆ ಒತ್ತಾಯ – ಜಿಎಂ ಸಿದ್ದೇಶ್ವರ
ದಾವಣಗೆರೆ: ‘ನಾನು ಹೇಳಿದ್ದೇ ಬೇರೆ, ನೀವು ಹಾಕಿದ್ದೇ ಬೇರೆ, ನಾನು ಎಲ್ಲೋ ಇದ್ದಾಗ, ಏನೋ ಕೇಳಿದ್ರೆ ಏನು ಹೇಳೋಕಾಗುತ್ತೆ, ನಿಮಗಂತೂ ಬೇರೆ ಬದುಕಿಲ್ಲ ನೀವು ಇರ್ತೀರಿ, ನನಗೆ ಜಿಲ್ಲೆಯ ಜವಾಬ್ದಾರಿ ಇದೆ ಅಣ್ಣಾ…!’ ಅತ್ಯಾಚಾರ ಆರೋಪಿಗಳಿಗೆ ಸೂಕ್ತ ಶಿಕ್ಷೆಗೆ ನಾನು ಒತ್ತಾಯ ಮಾಡುತ್ತೇನೆ.
ಮೈಸೂರಿನ ವಿದ್ಯಾರ್ಥಿನಿ ಮೇಲೆ ನಡೆದಿದ್ದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಉಡಾಫೆಯ ಉತ್ತರ ಹೇಳಿ ಟ್ರೋಲ್ ಆಗಿದ್ದ ಸಂಸದ ಜಿ.ಎಂ. ಸಿದ್ದೇಶ್ವರ್ ಅವರು ಸೋಮವಾರ ತಾವು ನೀಡಿದ್ದ ತಪ್ಪು ಹೇಳಿಕೆಯನ್ನು ಮರೆ ಮಾಚಲು ಮತ್ತೊಮ್ಮೆ ಪ್ರತಿಕ್ರಿಯೆ ನೀಡಿ ಬಚಾವ್ ಆಗುವ ಯತ್ನ ನಡೆಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನೇನು ನೋಡಿರುತ್ತೇನೆಯೋ ಅದನ್ನಾದರೆ ಹೇಳಬಹುದು. ಅದನ್ನು ಬಿಟ್ಟು ಪತ್ರಿಕೆ ನೋಡಲು ಸಹ ನನಗೆ ಸಮಯವಿಲ್ಲದಿದ್ದಾಗ ಗೊತ್ತಿರದ ವಿಚಾರಕ್ಕೆ ಮತ್ತೇನು ಪ್ರತಿಕ್ರಿಯೆ ನೀಡಲು ಸಾಧ್ಯವಿದೆ ಎಂದು ಮಾಧ್ಯಮದವರಿಗೆ ಮರು ಪ್ರಶ್ನೆ ಹಾಕಿದರು.
ಮೈಸೂರು ರೇಪ್ ಪ್ರಕರಣದ ಬಗ್ಗೆ ಮಾಧ್ಯಮಗಳಲ್ಲಿ ಈಗ ನೋಡಿದ್ದೇನೆ, ಪೊಲೀಸರು ಅತ್ಯಂತ ಜಾಗ್ರತೆಯಿಂದ ಪ್ರಕರಣ ಭೇದಿಸಿರುವುದು ಸ್ವಾಗತಾರ್ಹವಾಗಿದ್ದು, ಪೊಲೀಸರಿಗೆ ಹಾಗೂ ಗೃಹ ಸಚಿವರಿಗೆ ಅಭಿನಂದಿಸುತ್ತೇನೆ ಎಂದು ಹೇಳಿದರು.
ಈಗ ಮೈಸೂರಿನ ಪ್ರಕರಣದ ಬಗ್ಗೆ ಪತ್ರಿಕೆಗಳಲ್ಲಿ ಓದಿ ಮತ್ತು ಟಿವಿ ಮಾಧ್ಯಮಗಳಲ್ಲಿ ನೋಡಿ ತಿಳಿದುಕೊಂಡಿದ್ದೇನೆ. ಆರೋಪಿಗಳಿಗೆ ಕಠಿಣ ಶಿಕ್ಷೆಗೆ ನಾನು ಆಗ್ರಹಿಸುತ್ತೇನೆ ಎಂದು ಹೇಳಿದ ಅವರು, ಈ ಹೇಳಿಕೆಯನ್ನು ಟಿವಿ ಮತ್ತು ಪತ್ರಿಕೆಗಳಲ್ಲಿ ಹಾಕಿ ಎಂದರು.