ನಮ್ಮ ದುರದೃಷ್ಟ ಐದು ವರ್ಷಗಳ ಕಾಲ ದಾವಣಗೆರೆ ಜಿಲ್ಲೆಯವರು ಧ್ವಜಾರೋಹಣ ಮಾಡಿರಲಿಲ್ಲ – ಎಸ್ ಎಸ್ ಮಲ್ಲಿಕಾರ್ಜುನ

ದಾವಣಗೆರೆ : ನಮ್ಮ ದುರದೃಷ್ಟ ಐದು ವರ್ಷಗಳ ಕಾಲ ನಮ್ಮ ಜಿಲ್ಲೆಯವರು ಧ್ವಜಾರೋಹಣ ಮಾಡಿರಲಿಲ್ಲ ಎಂದು ಸಚಿವ ಎಸ್‌ಎಸ್ ಮಲ್ಲಿಕಾರ್ಜುನ್ ಹೇಳಿದರು.

ಜಿಲ್ಲಾ ಕ್ರೀಡಾಂಗಣದಲ್ಲಿ 77 ನೇ ಸ್ವಾತಂತ್ರೋತ್ಸವದ ಧ್ವಜಾರೋಹಣದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್, ಈ ಹಿಂದೆ ದಾವಣಗೆರೆ ಜಿಲ್ಲೆಯಲ್ಲಿ ಬಿಜೆಪಿ ಆಡಳಿತದ ಚುಕ್ಕಾಣಿ ಹಿಡಿದಿತ್ತು. ರಾಜ್ಯದಲ್ಲಿಯೂ ಅವರೇ ಅಧಿಕಾರದಲ್ಲಿದ್ದರು. ಆದರೆ ಜಿಲ್ಲೆಯಲ್ಲಿ ಒಬ್ಬರು ಕೂಡ ಮಂತ್ರಿ ಆಗಲಿಲ್ಲ. ಬೇರೆ ಜಿಲ್ಲೆಯ ಜಿಲ್ಲಾ ಉಸ್ತುವಾರಿ ಸಚಿವರಿಂದಲೇ ಧ್ವಜಾರೋಹಣ ಮಾಡಬೇಕಾಗಿತ್ತು. ಬೇರೆ ಜಿಲ್ಲೆಯವರು ನಮ್ಮ ಜಿಲ್ಲೆಗೆ ಉಸ್ತುವಾರಿ ಸಚಿವರಾಗಿದ್ದರು, ಆದರೆ ಜಿಲ್ಲೆ ಮಾತ್ರ ಅಭಿವೃದ್ಧಿ ಕಾಣಲಿಲ್ಲ. ನಮ್ಮ ದುರದೃಷ್ಟ ಐದು ವರ್ಷಗಳ ಕಾಲ ನಮ್ಮ ಜಿಲ್ಲೆಯವರು ಧ್ವಜಾರೋಹಣ ಮಾಡಿರಲಿಲ್ಲ.. ಆದರೆ ಇಂದು ನಾನೇ ಧ್ವಜಾರೋಹಣ ಮಾಡಿದ್ದೇನೆ. ಈ ಮೂಲಕ ಇನ್ನಷ್ಟು ಅಭಿವೃದ್ಧಿ ಕೆಲಸ ಮಾಡುತ್ತೇವೆ. ನಮ್ಮ ಜಿಲ್ಲೆಯಲ್ಲಿ ನಾನು ಧ್ವಜಾರೋಹಣ ಮಾಡಿರುವುದು ಸಂತಸ ತಂದಿದೆ.

ಮುಂದಿನ ದಿನಗಳಲ್ಲಿ ನೀರಾವರಿ ಸೇರಿದಂತೆ ಇನ್ನಿತರ ಅಭಿವೃದ್ಧಿ ಕೆಲಸಗಳನ್ನು ನಾನು ಮಾಡಲು ಬದ್ಧ ಎಂದು ಹೇಳಿದರು.
2013 ರಿಂದ 2018 ರವರೆಗೆ ದಾವಣಗೆರೆ ಜಿಲ್ಲೆಯವರೇ ಆದ ಡಾ. ಶಾಮನೂರು ಶಿವಶಂಕರಪ್ಪ ಹಾಗೂ ಎಸ್.ಎಸ್ ಮಲ್ಲಿಕಾರ್ಜುನ್ ಜಿಲ್ಲಾ ಉಸ್ತುವಾರಿ ಸಚಿವರಾಗಿ ಕಾರ್ಯನಿರ್ವಹಿಸಿ ಧ್ವಜಾರೋಹಣ ನೆರವೇರಿಸಿದ್ದರು. 2018 ರಲ್ಲಿ ಜಿಲ್ಲೆಯ ಏಳು ಕ್ಷೇತ್ರಗಳ ಪೈಕಿ ಐದು ಕ್ಷೇತ್ರಗಳಲ್ಲಿ ಬಿಜೆಪಿ ಗೆದ್ದಿದ್ದರೂ ಸಹ, ಜಿಲ್ಲೆಯ ಯಾರನ್ನು ಸಚಿವರನ್ನಾಗಿ ಮಾಡದೇ ಇದ್ದಿದ್ದರಿಂದ ಬೇರೆ ಜಿಲ್ಲೆಯ ಸಚಿವರೇ ಜಿಲ್ಲೆಯ ಉಸ್ತುವಾರಿ ಸಚಿವರಾಗಿ ಕಾರ್ಯನಿರ್ವಹಿಸಿ ಧ್ವಜಾರೋಹಣ ನೆರವೇರಿಸುತ್ತಿದ್ದರು.

ಈ ಹಿಂದೆ ದಾವಣಗೆರೆಗೆ ಜಿಲ್ಲಾ ಉಸ್ತುವಾರಿ ಸಚಿವರಾಗಿ ಗುಬ್ಬಿ ಶ್ರೀನಿವಾಸ್, ಭೈರತಿ ಬಸವರಾಜ್ ಧ್ವಜಾರೋಹಣ ನೆರವೇರಿಸಿದ್ದರು. 2018ರ ಬೆಣ್ಣೆನಗರಿಯಲ್ಲಿ ಇಬ್ಬರು ಶಾಸಕರು ಮಾತ್ರ ಕಾಂಗ್ರೆಸ್ನಿಂದ ಗೆದ್ದಿದ್ದು ಅವರ ಕ್ಷೇತ್ರದಲ್ಲಿ ಮಾತ್ರ ಧ್ವಜಾರೋಹಣ ಮಾಡುತ್ತಿದ್ದರು. ಆದರೀಗ ಬಹುದಿನಗಳ ಬಳಿಕ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಧ್ವಜಾರೋಹಣ ಮಾಡುತ್ತಿದ್ದು, ಬೆಂಬಲಿಗರಿಗೆ ಸಂತಸ ತಂದಿದೆ.

Leave a Reply

Your email address will not be published. Required fields are marked *

error: Content is protected !!