ದೇಶದ ಅಭಿವೃದ್ಧಿಗೆ ಒಗ್ಗೂಡಿ ಶ್ರಮಿಸೋಣ: ಪ್ರೊ.ಕುಂಬಾರ

ದಾವಣಗೆರೆ: ಲಕ್ಷಾಂತರ ಜನರ ತ್ಯಾಗ, ಬಲಿದಾನದಿಂದ ಸಿಕ್ಕಿರುವ ದೇಶದ ಸ್ವಾತಂತ್ರ್ಯವನ್ನು ಪ್ರತಿಯೊಬ್ಬ ಪ್ರಜೆಯ ಆತ್ಮವಿಶ್ವಾಸ, ದೇಶಾಭಿಮಾನ, ಸ್ವಾಭಿಮಾನ,, ಸಹಭಾಗಿತ್ವದಿಂದ ಸಮರ್ಪಕವಾಗಿ ಮುನ್ನಡೆಯಲು ಆದ್ಯತೆ ನೀಡಬೇಕಾಗಿದೆ ಎಂದು ದಾವಣಗೆರೆ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಬಿ.ಡಿ.ಕುಂಬಾರ ಹೇಳಿದರು.ದಾವಣಗೆರೆ ವಿಶ್ವವಿದ್ಯಾನಿಲಯದಲ್ಲಿ ಮಂಗಳವಾರ 77 ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
ಭಾರತ ದೇಶಕ್ಕೆ ಸ್ವಾತಂತ್ರ್ಯ ಸಿಗಲು ಕಾರಣರಾದ ಎಲ್ಲಾ ಮಹಾನ್ ನಾಯಕರನ್ನು ಸ್ಮರಿಸಿಕೊಳ್ಳಬೇಕು. ಅವರ ಶೌರ್ಯ, ತ್ಯಾಗ, ಬಲಿದಾನ, ದೇಶಾಭಿಮಾನ ಮತ್ತು ಪ್ರಾಮಾಣಿಕ ಸೇವೆಗೆ ಹೃದಯಪೂರ್ವಕ ನಮನಗಳನ್ನು ಸಲ್ಲಿಸುವ ಸಂದರ್ಭ ಇದಾಗಿದೆ. ಅವರ ಸೇವೆಯು ಎಲ್ಲರಿಗೂ ಸ್ಫೂರ್ತಿಯ ಚೇತನವಾಗಬೇಕು ಎಂದು ತಿಳಿಸಿದರು.ವಿಶ್ವದಲ್ಲಿ ಹಲವು ಕ್ಷೇತ್ರಗಳಲ್ಲಿ ಭಾರತವು ಪ್ರಗತಿಯನ್ನು ಸಾಧಿಸುತ್ತಿದೆ, ಇದು ದೇಶದ ಜನರ ಸಾಮರ್ಥ್ಯದ ಫಲವಾಗಿದೆ. ಇಷ್ಟಕ್ಕೆ ತೃಪ್ತರಾಗದೆ ಜಾಗತಿಕ ಮಟ್ಟದಲ್ಲಿ ಮುಂಚೂಣಿಗೆ ಬರಲು ಒಟ್ಟಾಗಿ ಪ್ರಯತ್ನಿಸಬೇಕು ಎಂದರು.
ಸಂವಿಧಾನ ಬದ್ಧ ಹಕ್ಕುಗಳ ಬಗ್ಗೆ ಎಲ್ಲರೂ ಪ್ರತಿಪಾದನೆ ಮಾಡುತ್ತೇವೆ. ಆದರೆ ಕರ್ತವ್ಯಗಳ ಬಗ್ಗೆ ಮಾತನಾಡುವುದಿಲ್ಲ. ಪ್ರತಿಯೊಬ್ಬರೂ ತಮ್ಮ ಜವಾಬ್ದಾರಿ ಅರಿತು, ಪರಸ್ಪರ ಸಹಕಾರ ಸಹಭಾವದಿಂದ ಕೆಲಸ ಮಾಡಿದಾಗ ಯಶಸ್ಸಿನ ಗುರಿ ತಲುಪಲು ಸಾಧ್ಯ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.ಕುಲಸಚಿವೆ ಸರೋಜ ಬಿ.ಬಿ, ಹಣಕಾಸು ಅಧಿಕಾರಿ ಪ್ರೊ.ಶಶಿಧರ್, ವಿವಿಧ ನಿಕಾಯಗಳ ಡೀನರಾದ ಪ್ರೊ. ಲಕ್ಷ್ಮಣ, ಪ್ರೊ. ವೆಂಕಟರಾವ್ ಪಲಾಟಿ, ಪ್ರೊ. ರಾಮಲಿಂಗಪ್ಪ ಉಪಸ್ಥಿತರಿದ್ದರು. ಡಾ.ವೀರಪ್ಪ ಬಿ.ಎಚ್. ಕಾರ್ಯಕ್ರಮ ನಿರೂಪಿಸಿದರು.