ರಾಜ್ಯ ಸುದ್ದಿ

ಪಂಚಮಸಾಲಿ ಮೀಸಲಾತಿ ಹೋರಾಟ.. ಪಕ್ಷಭೇದ ಮರೆತ ಮುಖಂಡರು.. ಇಂದು ಹೆಚ್ಡಿಕೆ ಭಾಗಿ..

ಬೆಂಗಳೂರು: ಪಂಚಮಸಾಲಿ ಲಿಂಗಾಯತ ಸಮುದಾಯಕ್ಕೆ 2ಎ ಮೀಸಲಾತಿ ಕಲ್ಪಿಸುವಂತೆ ಒತ್ತಾಯಿಸಿ ಜಗದ್ಗುರು ಶ್ರೀ ಬಸವಜಯ ಮೃತ್ಯುಂಜಯ ಮಹಾಸ್ವಾಮೀಜಿ ನೇತ್ರತ್ವದಲ್ಲಿ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಅನಿರ್ದಿಷ್ಟಾವಧಿ ಸತ್ಯಾಗ್ರಹ ನಡೆಯುತ್ತಿದೆ. ಇದೀಗ ಈ ಸತ್ಯಾಗ್ರಹ 33ನೇ ದಿನವೂ ಮುಂದುವರಿದಿದ್ದು ದಿನಕ್ಕೊಂದು ಜಿಲ್ಲೆಗಳ ಪ್ರಮುಖರು ತಂಡೋಪತಂಡವಾಗಿ ಭಾಗವಹಿಸಿ ಹೋರಾಟಕ್ಕೆ ಪ್ರಬಲ ರೂಪ ನೀಡುತ್ತಿದ್ದಾರೆ. ಅದರಲ್ಲೂ ಉತ್ತರ ಕರ್ನಾಟಕದ ಕೆಲವು ಘಟಕಗಳ ಪ್ರಮುಖರು, ನುಡಿದಂತೆ ನಡೆಯದವರಿಗೆ ಮುಂಬರುವ ಚುನಾವಣೆ ಬ್ಯಾಲೆಟ್ ಪೇಪರ್ನಲ್ಲಿ ಉತ್ತರ ಕೊಡುತ್ತೇವೆ ಎಂದು ಘರ್ಜಿಸಿದ್ದಾರೆ. ಈ ಮೂಲಕ ಮುಂಬರುವ ಚುನಾವಣೆಯಲ್ಲಿ ಬಿಜೆಪಿಗೆ ಹಾದಿ ಕಠಿಣವಾಗಲಿದೆ ಎಂಬ ಸಂದೇಶವನ್ನು ರವಾನಿಸಿದ್ದಾರೆ.


ಪಂಚಮಸಾಲಿ ಮೀಸಲಾತಿ ಹೋರಾಟ ತೀವ್ರಗೊಂಡಿದ್ದು, ನುಡಿದಂತೆ ನಡೆಯದ ರಾಜ್ಯ ಬಿಜೆಪಿ ಸರ್ಕಾರದ ವಿರುದ್ದ ತರಂಗ ಎಬ್ಬಿಸಲು ಸಮುದಾಯದ ಮುಖಂಡರು ತೀರ್ಮಾನಿಸಿದ್ದಾರೆ. ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ನಡೆಯುತ್ತಿರುವ ಅನಿರ್ದಿಷ್ಟಾವಧಿ ಸತ್ಯಾಗ್ರಹದಲ್ಲಿ ವಿವಿಧ ಜಿಲ್ಲೆಗಳ ಪ್ರಮುಖರು ಭಾಗಿಯಾಗುತ್ತಿದ್ದು ಸರ್ಕಾರದ ವಿರುದ್ದದ ಹೋರಾಟವನ್ನು ತೀವ್ರಗೊಳಿಸಬೇಕೆಂಬ ಅಭಿಪ್ರಾಯ ಮುಂದಿಟ್ಟಿದ್ದಾರೆ. ಅದರಲ್ಲೂ ಮುಂಬರುವ ಚುನಾವಣೆಯ ಬ್ಯಾಲೆಟ್ ಪೇಪರ್ನಲ್ಲಿ ಉತ್ತರ ನೀಡುವುದಾಗಿ ಪ್ರಮುಖರು ನೀಡಿಡಿರುವ ಎಚ್ಚರಿಕೆ ರಾಜ್ಯ ರಾಜಕಾರಣದಲ್ಲಿ ಕುತೂಹಲ ಕೆರಳುವಂತೆ ಮಾಡಿದೆ.


ಇದೇ ವೇಳೆ, ಹೋರಾಟ ಆರಂಭವಾಗಿ ತಿಂಗಳು ಕಳೆದರೂ ಸರ್ಕಾರ ಸ್ಪಂಧಿಸದಿರುವುದರಿಂದ ಸಿಟ್ಟಾಗಿರುವ ಗಂಗಾವತಿಯ ಪ್ರತಿನಿಧಿಗಳು ಹೆದ್ದಾರಿ ಬಂದ್ಗೆ ಕರೆ ನೀಡುವಂತೆ ಶ್ರೀಗಳಿಗೆ ಮನವಿ ಮಾಡಿದ್ದಾರೆ.
ಇದೆಲ್ಲದರ ನಡುವೆ, ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಕಾಂಗ್ರೆಸ್ ಶಾಸಕರಾದ ವಿನಯ ಕುಲಕರ್ಣಿ, ಲಕ್ಷ್ಮೀ ಹೆಬ್ಬಾಳ್ಕರ್, ಎಂ.ಬಿ.ಪಾಟೀಲ್ ಸಹಿತ ವಿವಿಧ ಪಕ್ಷಗಳ ನಾಯಕರು ಪಕ್ಷ ಭೇದ ಮರೆತು ಈ ಸತ್ಯಾಗ್ರಹದಲ್ಲಿ ಭಾಗಿಯಾಗುತ್ತಿದ್ದಾರೆ. ನಮ್ಮ ಸಮಾಜಕ್ಕಾಗಿ, ನಮ್ಮ ಜಗದ್ಗುರು ಶ್ರೀ ಬಸವಜಯ ಮೃತ್ಯುಂಜಯ ಮಹಾಸ್ವಾಮಿಗಳು ಕೈಗೊಂಡಿರುವ ಸತ್ಯಾಗ್ರಹದಲ್ಲಿ ಭಾಗವಹಿ ನಮ್ಮ ಕರ್ತವ್ಯವನ್ನು ಸಮರ್ಪಿಸೋಣ ಎಂಬ ಸಂದೇಶವನ್ನು ಈ ನಾಯಕರು ರವಾನಿಸಿದ್ದಾರೆ.
ಪಂಚಮಸಾಲಿ ಕೂಡಲಸಂಗಮ ಪೀಠದ ಗುರುಗಳಾದ ಶ್ರೀ ಬಸವಜಯ ಮೃತ್ಯುಂಜಯ ಮಹಾಸ್ವಾಮಿ ನಡೆಸುತ್ತಿರುವ ಧರಣಿ ಸ್ಥಳಕ್ಕೆ ಬುಧವಾರ ಆರ್ಯ ಈಡಿಗ ಸಮಾಜದ ಗುರುಗಳಾದ ಶ್ರೀ ಪ್ರಣಮಾನಂದ ಮಹಾಸ್ವಾಮಿ ಭೇಟಿ ನೀಡಿದರು. ಪಂಚಮಸಾಲಿ ಮೀಸಲಾತಿ ಹೋರಾಟದಲ್ಲಿ ಅವರೂ ಭಾಗಿಯಾಗಿ ರಣೋತ್ಸಾಹ ತುಂಬಿದರು.


ಈ ನಡುವೆ, ಗುರುವಾರ ಮಧ್ಯಾಹ್ನ 3 ಗಂಟೆಗೆ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಬೆಂಗಳೂರು ಸ್ವಾತಂತ್ರ್ಯ ಉದ್ಯಾನವನದಲ್ಲಿ 2ಎ ಮೀಸಲಾತಿಗಾಗಿ ಕೈಗೊಂಡಿರುವ ಸತ್ಯಾಗ್ರಹದಲ್ಲಿ ಭಾಗಿಯಾಗಲಿದ್ದಾರೆ ಎಂದು ಮೀಸಲಾತಿ ಹೋರಾಟ ಸ್ವಾಗತ ಸಮಿತಿ ಮಹಾ ಪ್ರಧಾನ ಕಾರ್ಯದರ್ಶಿ ಎಚ್.ಎಸ್.ಶಿವಶಂಕರ್ ಮನವಿ ಮಾಡಿದ್ದಾರೆ.

Click to comment

Leave a Reply

Your email address will not be published. Required fields are marked *

Most Popular

To Top
error: Content is protected !!