‘ಕಾಂಗ್ರೆಸ್ ಗೆದ್ದು ಗೃಹಜ್ಯೋತಿ, ಗೃಹಲಕ್ಷ್ಮಿ ಜಾರಿಯಾಗದಿದ್ದಲ್ಲಿ ಮುಖ ತೋರಿಸಲ್ಲ’: ಡಿಕೆಶಿ ಶಪಥ

ಡಿಕೆಶಿ ಶಪಥ

ಮೈಸೂರು: ರಾಜ್ಯದಲ್ಲಿರುವ ಪರ್ಸಂಟೇಜ್ ಸರ್ಕಾರ ತೊಲಗಿಸುವುದೇ ನಮ್ಮ ಆದ್ಯತೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸಾರಿದ್ದಾರೆ.
ಹುಣಸೂರಿನ ಪ್ರಜಾಧ್ವನಿ ಯಾತ್ರೆ ಸಮಾವೇಶದಲ್ಲಿ ಜನಸಾಗರವನ್ನುದ್ದೇಶಿಸಿ ಮಾತನಾಡಿದ ಡಿ.ಕೆ. ಶಿವಕುಮಾರ್, ನಮ್ಮ ರಾಜ್ಯ ಹಾಗೂ ದೇಶಕ್ಕೆ ದೊಡ್ಡ ನಾಯಕರನ್ನು ಕೊಟ್ಟ ಭೂಮಿ ಇದು. ದೇವರಾಜ ಅರಸು ಅವರ ತತ್ವ, ಸಿದ್ಧಾಂತ ನಮ್ಮ ಬದುಕನ್ನು ಬದಲಿಸಿದೆ. ಇಲ್ಲಿನ ಶಾಸಕ ಮಂಜುನಾಥ್ ಅವರು ಉತ್ತಮ ರೀತಿಯಲ್ಲಿ ನಿಮ್ಮ ಸೇವೆ ಮಾಡುತ್ತಿದ್ದಾರೆ. ನಾನು ಇಲ್ಲಿ ಉಪಚುನಾವಣೆ ಸಮಯದಲ್ಲಿ ಬಂದಿದ್ದೆ. ನೀವು ವಿಶ್ವನಾಥ್ ಅವರನ್ನು ಸೋಲಿಸಿ, ಕಾಂಗ್ರೆಸ್ ಗೆ ಶಕ್ತಿ ತುಂಬಿದ್ದಿರಿ. ನಿಮಗೆ ಕೋಟಿ ಧನ್ಯವಾದಗಳು ಎಂದರು.
ವಿಶ್ವನಾಥ್ ಅವರು ಈ ಭಾಗದ ಶಾಸಕರಾಗಿದ್ದವರು. ಈ ಜಿಲ್ಲೆಯ ಸಂಸದರೂ ಆಗಿದ್ದರು. ಪ್ರಜ್ಞಾವಂತ ಹಾಗೂ ಅನುಭವಿ ನಾಯಕರು. ಅವರು ಆಪರೇಷನ್ ಕಮಲದ ಮೂಲಕ ಬಿಜೆಪಿಗೆ ಹೋದರು. ಅಲ್ಲಿ ಎಂಎಲ್ ಸಿ ಆದರು. ನಂತರ ನನ್ನನ್ನು ಭೇಟಿ ಮಾಡಿ ತಾನು ಸಾಯುವ ಮುನ್ನ ಕಾಂಗ್ರೆಸ್ಸಿಗನಾಗಬೇಕು ಎಂದು ಕೇಳಿದ್ದಾರೆ. ಅವರು ಪಕ್ಷದ ತತ್ವ ಸಿದ್ಧಾಂತದ ಮೇಲೆ ನಂಬಿಕೆ ಇಟ್ಟುಕೊಂಡಿದ್ದಾರೆ ಎಂದ ಡಿಕೆಶಿ, ಕಾಂಗ್ರೆಸ್ ಶಕ್ತಿ ದೇಶದ ಶಕ್ತಿ, ಕಾಂಗ್ರೆಸ್ ಇತಿಹಾಸ ದೇಶದ ಇತಿಹಾಸ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಎಲ್ಲ ವರ್ಗದವರು ಅಧಿಕಾರಕ್ಕೆ ಬಂದಂತೆ. ಮನುಷ್ಯನ ಹುಟ್ಟು ಆಕಸ್ಮಿಕ, ಸಾವು ಅನಿವಾರ್ಯ. ಜನನ ಉಚಿತ, ಮರಣ ಖಚಿತ. ಈ ಹುಟ್ಟು ಸಾವಿನ ನಡುವೆ ನಾವು ಏನು ಮಾಡುತ್ತೇವೆ ಎಂಬುದು ಮುಖ್ಯ. ನಾವು ಮಾಡಿದ ಸಾಧನೆ ನಮ್ಮನ್ನು ಸದಾ ಜೀವಂತವಾಗಿಡುತ್ತದೆ ಎಂದರು.
ಬಿಜೆಪಿ ಚುನಾವಣೆಗೂ ಮುನ್ನ ಕೊಟ್ಟ ಯಾವುದೇ ಭರವಸೆ ಈಡೇರಿಸಿಲ್ಲ. ಮೋದಿ ಅವರು ಅಚ್ಛೇದಿನ ಬರುತ್ತದೆ ಎಂದರು, ನಿಮ್ಮ ಆದಾಯ ಡಡಬಲ್ ಮಾಡುತ್ತೇವೆ ಎಂದರು, ಯುವಕರಿಗೆ ವರ್ಷಕ್ಕೆ 2 ಕೋಟಿ ಉದ್ಯೋಗ ನೀಡುತ್ತೇವೆ ಎಂದರು, ನಿಮ್ಮ ಖಾತೆಗೆ 15 ಲಕ್ಷ ಹಾಕುತ್ತೇವೆ ಎಂದರು. ಈ ಯಾವುದಾದರೂ ಭರವಸೆ ಈಡೇರಿಸಿದ್ದಾರಾ? ಅವರಿಂದ ನಿಮ್ಮ ಬದುಕಿನಲ್ಲಿ ಬದಲಾವಣೆ ತರಲು ಆಗಲಿಲ್ಲ ಎಂದ ಅವರು, ನಮಗೆ ಬಹುಮತ ಬಾರದಿದ್ದರೂ ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು ಕುಮಾರಸ್ವಾಮಿ ಅವರಿಗೆ ಬೇಷರತ್ ಬೆಂಬಲ ನೀಡಿದೆವು. ಆ ಸರ್ಕಾರ ಉಳಿಸಲು ನಾನು ಎಲ್ಲಾ ರೀತಿಯ ಸಹಕಾರ ನೀಡಿದೆ. ಆದರೆ ಅವರು ಅಧಿಕಾರ ಉಳಿಸಿಕೊಳ್ಳಲಿಲ್ಲ. ನಾನು ಕುಮಾರಸ್ವಾಮಿ ಅವರ ವಿರುದ್ಧ ವೈಯಕ್ತಿಕವಾಗಿ ಏನೂ ಮಾತನಾಡುವುದಿಲ್ಲ. ಜೆಡಿಎಸ್ ನಿಂದ ಅನೇಕ ಪ್ರಮುಖ ನಾಯಕರು ಕಾಂಗ್ರೆಸ್ ಪಕ್ಷಕ್ಕೆ ಬಂದಿದ್ದಾರೆ. ಇಲ್ಲಿಯೂ ಕೂಡ ಮಂಜುನಾಥ್ ಅವರ ನೇತೃತ್ವದಲ್ಲಿ ಅನೇಕ ದಳದ ನಾಯಕರು ಕಾಂಗ್ರೆಸ್ ಸೇರಿದ್ದು, ಅವರಿಗೆ ಸ್ವಾಗತ ಕೋರುತ್ತೇನೆ. ಕುಮಾರಸ್ವಾಮಿ ಅವರಿಗೆ ಎರಡು ಬಾರಿ ಮುಖ್ಯಮಂತ್ರಿ ಅವಕಾಶ ಸಿಕ್ಕಿದೆ. ಕಾಂಗ್ರೆಸ್ ಅವರ ತಂದೆ ದೇವೇಗೌಡರನ್ನು ಪ್ರಧಾನಿಯನ್ನಾಗಿ ಮಾಡಿದೆ ಎಂದರು.


ಈ ಭಾಗದಲ್ಲಿ ಭಾರತ ಜೋಡೋ ಯಾತ್ರೆ ನಡೆಯುವಾಗ ಸೋನಿಯಾ ಗಾಂಧಿ ಅವರು ಈ ಭಾಗದಲ್ಲಿ ಹೆಜ್ಜೆ ಹಾಕಿದರು. ನೀವು ಕೂಡ ಹೆಜ್ಜೆ ಹಾಕಿ ಬೆಂಬಲ ನೀಡಿದ್ದೀರಿ. ರಾಹುಲ್ ಗಾಂಧಿ ಅವರು ದೇಶದ ಐಕ್ಯತೆ, ಸಮಗ್ರತೆ, ಶಾಂತಿ ಮರುಸ್ಥಾಪನೆಗೆ, ನಿರುದ್ಯೋಗ, ಬೆಲೆ ಏರಿಕೆ ವಿರುದ್ಧ ಹೋರಾಡಲು ಭಾರತ ಜೋಡೋ ಯಾತ್ರೆ ಮಾಡಿದರು. ಈ ಸಂದರ್ಭದಲ್ಲಿ ಮಹಾತ್ಮ ಗಾಂಧಿ ಅವರ ಜನ್ಮದಿನದಂದು ಇಲ್ಲಿನ ಬದನವಾಳು ಗ್ರಾಮಕ್ಕೆ ಭೇಟಿ ನೀಡಿದರು. ಕೆಲ ದಶಕಗಳ ಹಿಂದೆ ಪರಿಶಿಷ್ಟರು ಹಾಗೂ ಸವರ್ಣೀಯರ ನಡುವಣ ಗಲಭೆ ನಂತರ ಈ ಎರಡು ಜನರ ಕೇರಿಯ ನಡುವೆ ಇದ್ದ ಸಂಪರ್ಕ ಸೇತುವೆ ಮುಚ್ಚಲ್ಪಟ್ಟಿತ್ತು. ರಾಹುಲ್ ಗಾಂಧಿ ಅವರು ಎರಡೂ ಸಮುದಾಯದವರನ್ನು ಒಟ್ಟಿಗೆ ಕೂರಿಸಿ, ಅವರ ನಡುವೆ ಇದ್ದ ಮನಸ್ತಾಪ ಬಗೆಹರಿಸಿ ಎಲ್ಲರನ್ನು ಒಟ್ಟಿಗೆ ಕೂರಿಸಿ ಊಟ ಮಾಡಿದ್ದರು. ಈ ಕೇರಿಗಳ ನಡುವೆ ಇದ್ದ ರಸ್ತೆಯನ್ನು ಪುನರ್ ನಿರ್ಮಾಣ ಮಾಡಿ ಭಾರತ ಜೋಡೋ ರಸ್ತೆ ಎಂದು ನಾಮಕರಣ ಮಾಡಲಾಯಿತು. ದೇಶದಲ್ಲಿ ಒಡೆದ ಮನಸ್ಸುಗಳನ್ನು ಒಂದಾಗಿಸುವ ಕಾಂಗ್ರೆಸ್ ಬದ್ಧತೆಗೆ ಇದು ಸಾಕ್ಷಿ. ಎಲ್ಲರನ್ನೂ ಒಟ್ಟಾಗಿ ತೆಗೆದುಕೊಂಡು ಹೋಗುವ ಏಕೈಕ ಪಕ್ಷ ಕಾಂಗ್ರೆಸ್ ಎಂದವರು ಹೇಳಿದರು.
ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಅವರು ಈ ಸರ್ಕಾರದಲ್ಲಿ 40% ಕಮಿಷನ್ ನೀಡಬೇಕು ಎಂದು ಪ್ರಧಾನಿಗೆ ದೂರಿದರು. ಇನ್ನು ಸ್ವಾಮೀಜಿಗಳು ಈ ಸರ್ಕಾರಕ್ಕೆ 30% ಕಮಿಷನ್ ನೀಡಬೇಕು ಎಂದರು. ಗೂಳಿಹಟ್ಟಿ ಶೇಖರ್ ಅವರು 22 ಸಾವಿರ ನೀರಾವರಿ ಟೆಂಡರ್ ಅಕ್ರಮದ ಬಗ್ಗೆ ಆರೋಪ ಮಾಡಿದ್ದಾರೆ. ಇಂದು ಬೆಳಗ್ಗೆ ಇದೇ ವಿಚಾರವಾಗಿ ನಾನು ಸಿದ್ದರಾಮಯ್ಯ, ರಣದೀಪ್ ಸಿಂಗ್ ಸುರ್ಜೆವಾಲ ಅವರು ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿ ಮಾಡಿ ತಿಳಿಸಿದೆವು ಎಂದ ಅವರು ರಾಜ್ಯ ಸರ್ಕಾರದ ಕಾರ್ಯವೈಖರಿ ವಿರುದ್ದ ವಾಗ್ದಾಳಿ ನಡೆಸಿದರು.
ಸಂಕಷ್ಟದಲ್ಲಿರುವ ಜನರಿಗೆ ನೆರವಾಗುವ ಉದ್ದೇಶದಿಂದ ಕಾಂಗ್ರೆಸ್ ಪಕ್ಷ ಎರಡು ಗ್ಯಾರಂಟಿ ಯೋಜನೆ ಘೋಷಿಸಿದೆ. ಗೃಹಜ್ಯೋತಿ ಯೋಜನೆ ಮೂಲಕ 200 ಯುನಿಟ್ ವಿದ್ಯುತ್ ಉಚಿತ, ಆಮೂಲಕ ಇನ್ನು ಮುಂದೆ ನೀವು 200 ಯುನಿಟ್ ಒಳಗೆ ವಿದ್ಯುತ್ ಬಳಸಿದರೆ ಯಾರೂ ವಿದ್ಯುತ್ ಬಿಲ್ ಕಟ್ಟುವ ಅಗತ್ಯವಿಲ್ಲ. ಗೃಹಲಕ್ಷ್ಮಿ ಯೋಜನೆ ಮೂಲಕ ಪ್ರತಿ ಮನೆ ಯಜಮಾನಿಗೆ 2000 ರೂ. ಪ್ರತಿ ತಿಂಗಳು ಕೊಡ್ತೇವೆ. ವರ್ಷಕ್ಕೆ ಒಟ್ಟು 42 ಸಾವಿರದಂತೆ 5 ವರ್ಷಕ್ಕೆ 2 ಲಕ್ಷ ಕೊಡ್ತೆವೆ, ಜತೆಗೆ 10 ಕೆಜಿ ಅಕ್ಕಿ. ನಾನು ಸಿದ್ದರಾಮಯ್ಯ ಸಹಿ ಹಾಕಿರೋ ಗ್ಯಾರಂಟಿ ಕಾರ್ಡ್ ನಿಮ್ಮ ಮನೆಗೆ ಬರ್ತದೆ. ಇನ್ನು ಪ್ರತಿ ಮನೆಗೆ ನೀಡಲಾಗುವ 5 ಕೆ.ಜಿ ಅಕ್ಕಿಯನ್ನು 10 ಕೆ.ಜಿಗೆ ಏರಿಕೆ ಮಾಡುತ್ತೇವೆ. ಮೇ ತಿಂಗಳಲ್ಲಿ ನಿಮ್ಮ ಸರ್ಕಾರ ಅಧಿಕಾರಕ್ಕೆ ಬರಲಿದೆ. ಜೂನ್ ತಿಂಗಳಿಂದ ಈ ಯೋಜನೆ ನಿಮ್ಮ ಮನೆ ಬಾಗಿಲಿಗೆ ಬರಲಿದೆ. ನಾವು ಯೋಜನೆ ಜಾರಿ ಮಾಡದಿದ್ದರೆ ನಾನು ಹಾಗೂ ಸಿದ್ದರಾಮಯ್ಯ ಅವರು ಮತ್ತೆ ಮತ ಕೇಳಲು ನಿಮ್ಮ ಮುಂದೆ ಬರುವುದಿಲ್ಲ ಎಂದವರು ಪ್ರತಿಜ್ಞೆ ಮಾಡಿದರು.
ನಾವು ಬಿಜೆಪಿ ದುರಾಡಳಿತದ ಪಾಪದ ಪುರಾಣ ಎಂಬ ಕಿರುಹೊತ್ತಿಗೆ ಬಿಡುಗಡೆ ಮಾಡಿದ್ದೇವೆ. ಇದನ್ನು ನೀವು ಪ್ರತಿ ಮನೆ ಮನೆಗೆ ಕಳುಹಿಸಬೇಕು. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ 140 ಕ್ಷೇತ್ರಗಳಲ್ಲಿ ಗೆದ್ದರೆ, ಬಿಜೆಪಿ 60, ಜೆಡಿಎಸ್ 25 ಕ್ಷೇತ್ರ ಗೆಲ್ಲಲಿದೆ. ಕಮಲ ಕೆರೆಯಲ್ಲಿದ್ದರೆ ಚೆಂದ, ತೆನೆ ಹೊಲದಲ್ಲಿದ್ದರೆ ಚೆಂದ, ದಾನ ಧರ್ಮ ಮಾಡುವ ಕೈ ಅಧಿಕಾರದಲ್ಲಿದ್ದರೆ ಚೆಂದ. ಹೀಗಾಗಿ ಕಾಂಗ್ರೆಸ್ ಪಕ್ಷದ ಹಸ್ತದ ಗುರುತಿಗೆ ಮತ ಹಾಕಿ ಶಕ್ತಿ ತುಂಬಬೇಕು ಎಂದು ಮನವಿ ಮಾಡಿದ ಡಿಕೆಶಿ, ಇಲ್ಲಿ ಮಂಜುನಾಥ್ ಅವರು ಸ್ಪರ್ಧೆ ಮಾಡಿದರೂ ಅವರ ಜತೆಗೆ ಡಿ.ಕೆ. ಶಿವಕುಮಾರ್, ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ ಅವರು ಅಭ್ಯರ್ಥಿಗಳಾಗಿರುತ್ತೇವೆ. ನೀವೆಲ್ಲರೂ ನಮಗೆ ಶಕ್ತಿ ನೀಡಿ ಎಂದರು ಕೋರಿದರು.

Leave a Reply

Your email address will not be published. Required fields are marked *

error: Content is protected !!