ದಾವಣಗೆರೆ: (PSI) ಕರ್ತವ್ಯದಲ್ಲಿದ್ದ ಮಹಿಳಾ ಪೊಲೀಸ್ ಅಧಿಕಾರಿಯ ಮೇಲೆ ಪಾನಮತ್ತ ಮಹಿಳೆಯೊಬ್ಬಳು ಹಲ್ಲೆ ನಡೆಸಿ, ಅಸಭ್ಯವಾಗಿ ವರ್ತಿಸಿ ಕರ್ತವ್ಯಕ್ಕೆ ಅಡ್ಡಿಪಡಿಸಿರುವ ಆಘಾತಕಾರಿ ಘಟನೆ ದಾವಣಗೆರೆಯ ಶಾಮನೂರು ರಸ್ತೆಯ ಬಿಂದಾಸ್ ಬಾರ್ ಮುಂಭಾಗದಲ್ಲಿ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಆರೋಪಿ ಮಹಿಳೆಯ ವಿರುದ್ಧ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಘಟನೆಯ ವಿವರ:
ದಾವಣಗೆರೆ ದಕ್ಷಿಣ ಸಂಚಾರ ಪೊಲೀಸ್ ಠಾಣೆಯ ಪಿಎಸ್ಐ-2 ಆಗಿರುವ ಶ್ರೀಮತಿ ಶಕುಂತಲಾ (48) ಅವರು ಜೂನ್ 21ರಂದು ರಾತ್ರಿ ಎನ್ಆರ್ಒ (NRO) ಗಸ್ತು ಕರ್ತವ್ಯದಲ್ಲಿದ್ದರು. ರಾತ್ರಿ ಸುಮಾರು 11:45ರ ವೇಳೆಗೆ ಶಾಮನೂರು ಚೆಕ್ ಪೋಸ್ಟ್ಗೆ ಭೇಟಿ ನೀಡಿದಾಗ, ಅಲ್ಲಿನ ಸಿಬ್ಬಂದಿ ಬಿಂದಾಸ್ ಬಾರ್ ಮುಂಭಾಗದಲ್ಲಿ ಕಪ್ಪು ಬಣ್ಣದ ಥಾರ್ ಕಾರಿನಲ್ಲಿ ಮಹಿಳೆಯೊಬ್ಬಳು ಗಲಾಟೆ ಮಾಡುತ್ತಿರುವ ಬಗ್ಗೆ ಮಾಹಿತಿ ನೀಡಿದ್ದಾರೆ.
ಮಾಹಿತಿ ಪಡೆದು ಪಿಎಸ್ಐ ಶಕುಂತಲಾ ಅವರು ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಧಾವಿಸಿದಾಗ, ಕಾರಿನಲ್ಲಿದ್ದ ಮಹಿಳೆ ಮದ್ಯಸೇವಿಸಿರುವುದು ಕಂಡುಬಂದಿದೆ. ಆಕೆಯ ಪತಿ ಕೂಡ ಜೊತೆಯಲ್ಲಿದ್ದು, ಆಕೆಯನ್ನು ಸಮಾಧಾನಪಡಿಸಲು ಯತ್ನಿಸುತ್ತಿದ್ದರು. ಪಿಎಸ್ಐ ಅವರು ಮಹಿಳೆಯ ಹೆಸರನ್ನು ಕೇಳಿದಾಗ, ಆಕೆ ತನ್ನ ಹೆಸರು ‘ಪ್ರೀತಿ’ ಎಂದು ಹೇಳಿ, ಪೊಲೀಸರ ವಿರುದ್ಧವೇ ಏಕವಚನದಲ್ಲಿ ಅಸಭ್ಯ ಪದಗಳಿಂದ ನಿಂದಿಸಲು ಆರಂಭಿಸಿದ್ದಾಳೆ.
ತಪಾಸಣೆಗೆ ಹೋದಾಗ ಹಲ್ಲೆ:
ಮಹಜರು ಸ್ಥಳಕ್ಕೆ ಹೆಚ್ಚುವರಿ ಸಂಚಾರ ಪೊಲೀಸ್ ಸಿಬ್ಬಂದಿ ಆಗಮಿಸಿ ಮಹಿಳೆಯನ್ನು ಸಮಾಧಾನಪಡಿಸಲು ಯತ್ನಿಸಿದರೂ ಆಕೆ ಸಾರ್ವಜನಿಕರ ಹಾಗೂ ಪೊಲೀಸರ ವಿರುದ್ಧ ಕೂಗಾಡುವುದನ್ನು ಮುಂದುವರಿಸಿದ್ದಾಳೆ. ಈ ವೇಳೆ ಪಿಎಸ್ಐ ಶಕುಂತಲಾ ಅವರು ತಮ್ಮ ಬಳಿ ಇದ್ದ ‘ಡ್ರಂಕ್ ಅಂಡ್ ಡ್ರೈವ್’ ತಪಾಸಣಾ ಯಂತ್ರದಿಂದ ಮಹಿಳೆಯನ್ನು ಪರೀಕ್ಷಿಸಲು ಮುಂದಾಗಿದ್ದಾರೆ. ಇದರಿಂದ ಆಕ್ರೋಶಗೊಂಡ ಪ್ರೀತಿ, “ನನ್ನನ್ನು ಚೆಕ್ ಮಾಡಲು ನೀನು ಯಾರು?” ಎಂದು ಕೂಗಾಡಿ, ಪಿಎಸ್ಐ ಕೈಯಲ್ಲಿದ್ದ ತಪಾಸಣಾ ಯಂತ್ರವನ್ನು ಕೆಳಗೆ ತಳ್ಳಿ, ಪಿಎಸ್ಐ ಅವರ ಹೊಟ್ಟೆಗೆ ಬಲಗಾಲಿನಿಂದ ಜೋರಾಗಿ ಒದ್ದಿದ್ದಾಳೆ.
ಹಲ್ಲೆಯಿಂದಾಗಿ ಜೀಪಿನ ಪಕ್ಕಕ್ಕೆ ಸರಿದು ಸುಧಾರಿಸಿಕೊಂಡ ಪಿಎಸ್ಐ ಅವರನ್ನು ಸಾರ್ವಜನಿಕರು ಮತ್ತು ಸಿಬ್ಬಂದಿ ಜೀಪಿನಲ್ಲಿ ಕೂರಿಸಿದ್ದಾರೆ. ಈ ಗೊಂದಲದ ನಡುವೆ ಆರೋಪಿ ಮಹಿಳೆ ಮದ್ಯಪಾನ ತಪಾಸಣೆಗೆ ಒಳಪಡದೆ, ಸ್ಥಳದಿಂದ ಬೇರೊಂದು ಕಾರಿನಲ್ಲಿ ಪರಾರಿಯಾಗಿದ್ದಾಳೆ.
ಪೊಲೀಸರ ಕ್ರಮ:
ಘಟನೆಯ ನಂತರ ಆರೋಪಿಗಳು ಬಿಟ್ಟು ಹೋಗಿದ್ದ KA 02 MU 2444 ನೋಂದಣಿ ಸಂಖ್ಯೆಯ ಕಪ್ಪು ಬಣ್ಣದ ಥಾರ್ ಕಾರನ್ನು ಪೊಲೀಸರು ವಶಕ್ಕೆ ಪಡೆದು ಠಾಣೆಗೆ ತಂದಿರಿಸಿದ್ದಾರೆ. ನಂತರ ಅರೋಪಿ ಮಹಿಳೆ ಅದೇ ದಿನ ರಾತ್ರಿ ಜಾಮೀನು ಪಡೆದುಕೊಂಡಿದ್ದಾರೆ ಎಂದು ಬಲ್ಲ ಮೂಲಗಳಿಂದ ಮಾಹಿತಿ ತಿಳಿದುಬಂದಿದೆ.
ಹಲ್ಲೆಗೊಳಗಾದ ಪಿಎಸ್ಐ ಶಕುಂತಲಾ ಅವರು ದಾವಣಗೆರೆಯ ಸಿಜಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಕರ್ತವ್ಯ ಮುಗಿಸಿ ವಿಶ್ರಾಂತಿ ಪಡೆದ ನಂತರ ಪಿಎಸ್ಐ ಅವರು ಜೂನ್ 22ರ ಮಧ್ಯಾಹ್ನ ವಿದ್ಯಾನಗರ ಪೊಲೀಸ್ ಠಾಣೆಗೆ ಹಾಜರಾಗಿ ಲಿಖಿತ ದೂರು ನೀಡಿದ್ದಾರೆ. ಪೊಲೀಸರು ಆರೋಪಿ ಪ್ರೀತಿ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS) 2023 ರ ಕಲಂ 121(1), 132, ಮತ್ತು 352 ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ತನಿಖೆ ಕೈಗೊಂಡಿದ್ದಾರೆ.
ಪ್ರಕರಣದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಲು ದಾವಣಗೆರೆ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳಿಗೆ ಕರೆ ಮಾಡಿದಾಗ ಕರೆಯನ್ನು ಸ್ವೀಕರಿಸಿರುವುದಿಲ್ಲ.
Leave a comment