ನಟ ದರ್ಶನ್ ಫಾರ್ಮ್ ಹೌಸ್ ಮೇಲೆ ದಾಳಿ: ಪಕ್ಷಿಗಳ ವಶ
ಮೈಸೂರು: ನಟ ದರ್ಶನ್ ಅವರಿಗೆ ಸೇರಿದ್ದು ಎನ್ನಲಾದ ಫಾರ್ಮ್ ಹೌಸ್‌ಗೆ ಶುಕ್ರವಾರ ತಡರಾತ್ರಿ ದಾಳಿ ನಡೆಸಿದ ಮೈಸೂರು ಅರಣ್ಯ ಸಂಚಾರಿದಳದ ಅಧಿಕಾರಿಗಳು, ಕೆಲವು ಪಕ್ಷಿಗಳನ್ನು ವಶಕ್ಕೆ ಪಡೆದಿದ್ದು, ಸಂರಕ್ಷಿತ ಪಕ್ಷಿಗಳಾದ್ದರಿಂದ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.
ತಿ.ನರಸೀಪುರ ರಸ್ತೆಯ ಕೆಂಪಯ್ಯನಹುಂಡಿ ಬಳಿ ಇರುವ ತೋಟದ ಮನೆಯಲ್ಲಿ ಸಾಕುತ್ತಿರುವ ಕೆಲವು ವಿದೇಶಿ ಪ್ರಾಣಿ, ಪಕ್ಷಿಗಳಿಗೆ ವನ್ಯಜೀವಿ ಕಾಯ್ದೆಯಡಿ ಅರಣ್ಯ ಇಲಾಖೆಯಿಂದ ಅನುಮತಿ ಪಡೆದಿರಲಿಲ್ಲ. ಈ ಕಾರಣಕ್ಕೆ ದಾಳಿ ನಡೆದಿದೆ ಎಂದು ಅರಣ್ಯ ಸಂಚಾರಿ ದಳದ ಮುಖ್ಯಸ್ಥ ಡಿಸಿಎಫ್‌ಒ ಭಾಸ್ಕರ್ ತಿಳಿಸಿದ್ದಾರೆ.
ಅರಣ್ಯ ಸಂಚಾರಿ ದಳ ವಶಕ್ಕೆ ಪಡೆದಿರುವ 4 ಬಾತುಕೋಳಿಗಳು ವಿಶಿಷ್ಟ ಪ್ರಭೇದದ ಜಲಪಕ್ಷಿಗಳಾಗಿದ್ದು (ಬಾರ್ ಹೆಡೆಡ್ ಗೂಸ್) ಅವುಗಳನ್ನು ಸಾಕುವುದು ಅಪರಾಧ. ಇವುಗಳು ಕಾಡಿನಲ್ಲೇ ಬದುಕಬೇಕಿದ್ದು, ಮೃಗಾಲಯ ಅಥವಾ ಮನೆ, ಫಾರ್ಮ್‌ಗಳಲ್ಲಿ ಸಾಕುವುದು ವನ್ಯಜೀವಿ ಸಂರಕ್ಷಣೆಯ ಕಾಯ್ದೆಯಡಿ ಅಪರಾಧ ಎಂದು ಅವರು ಹೇಳಿದರು.