ಮೆಕ್ಕೆಜೋಳ ಖರೀದಿ ಕೇಂದ್ರ ತೆರೆಯುವಂತೆ ಆಗ್ರಹಿಸಿ ಪ್ರತಿಭಟನೆ – ಹುಚ್ಚವ್ವನಹಳ್ಳಿ ಮಂಜುನಾಥ್ ಬಣದ ರೈತರಿಂದ ಸರ್ಕಾರದ ವಿರುದ್ದ ಆಕ್ರೋಶ


ದಾವಣಗೆರೆ: ಕೇಂದ್ರ ಸರ್ಕಾರಕ್ಕೆ ಕನಿಷ್ಠ ಬೆಂಬಲ ಬೆಲೆ ಕಾಯ್ದೆ ಮಾಡುವಂತೆ, ಮೆಕ್ಕೆಜೋಳಕ್ಕೆ ಖರೀದಿ ಕೇಂದ್ರ ತೆರೆಯುವಂತೆ ಒತ್ತಾಯಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಹುಚ್ಚವ್ವನಹಳ್ಳಿ ಮಂಜುನಾಥ್ ಬಣದ ರೈತರು ಸೋಮವಾರ ಬೈಕ್ ರ್ಯಾಲಿ ನಡೆಸಿ ಪ್ರತಿಭಟನೆ ನಡೆಸಿದರು.

ನಗರದ ಜಯದೇವ ವೃತ್ತದಿಂದ ಬೈಕ್ ರ್ಯಾಲಿ ಆರಂಭಿಸಿ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು. ಇದೇ ವೇಳೆ ಸಂಘಟನೆಯ ರಾಜ್ಯಾಧ್ಯಕ್ಷ ಹುಚ್ಚವ್ವನಹಳ್ಳಿ ಮಂಜುನಾಥ್ ಮಾತನಾಡಿ, ಕನಿಷ್ಠ ಬೆಂಬಲ ಬೆಲೆ ಕಾಯ್ದೆಗೆ ಒತ್ತಾಯಿಸಿ ಕಳೆದ ಹತ್ತು ತಿಂಗಳಿಂದ ದೇಶಾದ್ಯಂತ ರೈತರು ಹೋರಾಟ ನಡೆಸುತ್ತಿದ್ದು, ಈಗಾಗಲೇ ೬೦೦ ಕ್ಕೂ ಹೆಚ್ಚು ರೈತರು ಹೋರಾಟದಲ್ಲಿ ಹುತಾತ್ಮರಾದರೂ ಕೇಂದ್ರ ಸರ್ಕಾರ ಗಮನ ಹರಿಸುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಈಗಾಗಲೇ ಕೇಂದ್ರ ಸರ್ಕಾರ ಮೆಕ್ಕೆಜೋಳಕ್ಕೆ ೧೮೬೦ ರೂ., ಕನಿಷ್ಟ ಬೆಂಬಲ ಬೆಲೆ ನಿಗದಿ ಮಾಡಿದೆಯಾದರೂ ಸಹ ಇತ್ತೀಚೆಗೆ ಬೀಜ, ಗೊಬ್ಬರ, ಔಷಧಿ, ಡೀಸೆಲ್, ಕೂಲಿ ಬೆಲೆ ಹೆಚ್ಚಾಗಿರುವ ಕಾರಣ ವ್ಯವಸಾಯದ ಖರ್ಚು ಜಾಸ್ತಿಯಾಗಿದ್ದು, ರೈತರಿಗೆ ನಷ್ಟವಾಗುತ್ತಿದೆ. ಆದ್ದರಿಂದ, ಕೇಂದ್ರ ಮತ್ತು ರಾಜ್ಯ ಸರ್ಕಾರ ಮೆಕ್ಕೆಜೋಳಕ್ಕೆ ಕನಿಷ್ಟ ೩,೫೦೦ ರೂ., ಬೆಂಬಲ ಬೆಲೆ ನಿಗದಿ ಮಾಡಬೇಕೆಂದು ಒತ್ತಾಯಿಸಿದರು.

ಕೇಂದ್ರ ಮೆಕ್ಕೆಜೋಳಕ್ಕೆ ಕನಿಷ್ಟ ಬೆಂಬಲ ಬೆಲೆ ನಿಗಧಿ ಪಡಿಸಿದರೂ ಖರೀದಿದಾರರು ೧೨೦೦-೧೪೦೦ ರೂ., ನಂತೆ ಪ್ರತಿ ಕ್ವಿಂಟಾಲ್‌ಗೆ ಖರೀದಿ ಮಾಡುತ್ತಿದ್ದು, ಇದರಿಂದ ರೈತರಿಗೆ ಬೆಳೆಗೆ ಸರಿಯಾದ ವೈಜ್ಞಾನಿಕ ಬೆಲೆ ಸಿಗದೇ ನಷ್ಟ ಉಂಟಾಗುತ್ತಿದೆ. ಆದ್ದರಿಂದ ಈ ಸಮಸ್ಯೆ ತಪ್ಪಿಸಲು ಕನಿಷ್ಟ ಬೆಂಬಲ ಬೆಲೆ ಕಾಯ್ದೆಯಲ್ಲಿ ಬೆಂಬಲ ಬೆಲೆಗಿಂತ ಕಡಿಮೆ ಬೆಲೆಗೆ ಖರೀದಿ ಮಾಡುವ ಖರೀದಿದಾರರ ಪರವಾನಿಗೆ ರದ್ಧು, ೧ ವರ್ಷ ಜೈಲು, ದಂಡ ಇಂತಹ ಉಗ್ರ ಕಾನೂನು ಮಾಡಿದರೆ ಕೇಂದ್ರ ಸರ್ಕಾರ ನೀಡುವ ಕನಿಷ್ಠ ಬೆಂಬಲ ಬೆಲೆಗೆ ಶಕ್ತಿ ಬರುತ್ತದೆ ಎಂದು ಅಭಿಪ್ರಾಯಿಸಿದರು.

ಕನಿಷ್ಟ ಬೆಂಬಲ ಬೆಲೆ ಕಾಯ್ದೆ ಜಾರಿ ಮಾಡಿದ್ದೇ ಆದಲ್ಲಿ ದೇಶದೆಲ್ಲೆಡೆ ಒಂದೇ ವಿಧದ ಬೆಲೆ ನಿಗಧಿ ಆಗಿರುತ್ತದೆ. ಆಗ ಖರೀದಿದಾರರು ಕಡಿಮೆ ಇರುವೆಡೆ ಖರೀದಿಸದೆ ಇಲ್ಲಿನ ರೈತರ ಬಳಿಯೇ ಖರೀದಿಸುತ್ತಾರೆ. ಇದರಿಂದ ದೇಶದ ಎಲ್ಲಾ ರೈತರಿಗೂ ಲಾಭವಾಗುತ್ತದೆ ಎಂದು ಹೇಳಿದರು.

ಪ್ರತಿಭಟನೆಯಲ್ಲಿ ಗುಮ್ಮನೂರು ಬಸವರಾಜ್, ನೀರ್ಥಡಿ ತಿಪ್ಪೇಶ್, ಹುಚ್ಚವ್ವನಹಳ್ಳಿ ಪ್ರಕಾಶ್, ನಾಗರಾಜ್ ತುಂಬಿಗೆರೆ, ಚಿಕ್ಕಬೂದಾಳ್ ಭಗತ್‌ಸಿಂಗ್, ಕಿತ್ತೂರು ಹನುಮಂತಪ್ಪ, ಗಂಗನಕಟ್ಟೆ ಷಣ್ಮುಖಪ್ಪ, ಹಾಲೂರು ಪರಶುರಾಮ್, ಕಾಡಜ್ಜಿ ಪ್ರಕಾಶ್, ಕೋಲ್ಕುಂಟೆ ಹುಚ್ಚಂಗೆಪ್ಪ, ಕೆಂಚಮ್ಮನಹಳ್ಳಿ ಹನುಮಂತಪ್ಪ, ಶಿವಪುರ ಕೃಷ್ಣಮೂರ್ತಿ, ನೀರ್ಥಡಿ ಭೀಮಣ್ಣ, ಎಂ.ಹೆಚ್. ಸಿದ್ದಪ್ಪ ನಾಯಕ ಸೇರಿದಂತೆ ಅನೇಕರಿದ್ದರು.

Leave a Reply

Your email address will not be published. Required fields are marked *

error: Content is protected !!