ವೃತ್ತಿ ರಂಗಭೂಮಿ ಕಲಾವಿದರ ಸಂಕಷ್ಟಗಳು – ಡಾ. ಸಯ್ಯದ್ ಕೋಗಲೂರು

ದಾವಣಗೆರೆ: ಕನ್ನಡ ವೃತ್ತಿ ರಂಗಭೂಮಿಗೆ ನೂರೈವತ್ತು ವರ್ಷಗಳಿಗೂ ಹೆಚ್ಚು ಇತಿಹಾಸವಿದೆ. ಕ್ರಿ.ಶ. 1872ರ ಹಿಂದೆಯೇ ಕನ್ನಡದ ದಾಸಯ್ಯನೆಂದೇ ಖ್ಯಾತನಾಮರಾದ ಶಾಂತಕವಿ ಕಾವ್ಯನಾಮದ ಸಕ್ಕರಿ ಬಾಳಾಚಾರ್ಯರು ‘ಕರ್ನಾಟಕ ಕೃತಪುರ ನಾಟಕ ಮಂಡಳಿ’ ಹೆಸರಿನ ಮೊದಲ ವೃತ್ತಿ ನಾಟಕ ಕಂಪನಿ ಸ್ಥಾಪಿಸಿದ್ದರು.

ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ರಾಷ್ಟ್ರೀಯತೆ ಮೆರೆಯುವಲ್ಲಿ, ದೇಶಭಕ್ತಿ- ದೈವಭಕ್ತಿ ಉಕ್ಕಿಸುವಲ್ಲಿ, ಅವಿಭಕ್ತ ಕುಟುಂಬ ಪ್ರೀತಿಯ ಕಿಚ್ಚು ಹಚ್ಚಿಸಿದ, ಗಾಂಧೀ ಪ್ರಣೀತ ಖಾದಿ ಪ್ರೇಮ ಹುಟ್ಟಿಸಿದ, ಸದಭಿರುಚಿ ಪ್ರೇಕ್ಷಕ ಪರಂಪರೆಯ ಪ್ರೀತಿ ಹುಟ್ಟಿಸಿದ ಕೀರ್ತಿ ವೃತ್ತಿ ರಂಗಭೂಮಿಗೆ ಸಲ್ಲುತ್ತದೆ.

ನವೋದಯ ಸಾಹಿತಿಗಳ ಪ್ರೀತಿಗೆ ಪಾತ್ರವಾದ ಬಹುದೊಡ್ಡ ರಂಗ ಸಾಹಿತ್ಯ ಮಾಧ್ಯಮ ಇದಾಗಿದ್ದು, ಒಂದೊಂದು ನಾಟಕ ಕಂಪನಿಯೂ ಸಾಂಸ್ಕೃತಿಕ ವಿಶ್ವವಿದ್ಯಾಲಯದಂತೆ ಅಕ್ಷರಶಃ ಸಾಂಸ್ಕೃತಿಕ ಕೈಂಕರ್ಯ ಮೆರೆದಿವೆ. ಪ್ರಯೋಗಶೀಲತೆಯ ದೃಷ್ಟಿಯಿಂದಲೂ ಇವತ್ತಿನ ರೆಪರ್ಟರಿಗಳಷ್ಟೇ ಪಾಂಡಿತ್ಯ ಹೊಂದಿದ್ದವೆಂಬುದನ್ನು ಅಲ್ಲಗಳೆಯಲಾಗದು.
ಮಾಸ್ಟರ್ ಹಿರಣ್ಣಯ್ಯ, ಬಿ. ಓಬಳೇಶ್, ಧೀರೇಂದ್ರ ಗೋಪಾಲ ಮುಂತಾದವರು ವಿರೋಧ ಪಕ್ಷಗಳಂತೆ ಜನಪರ ಕಾಳಜಿಯ ಎಚ್ಚರ ಮೂಡಿಸುವ ಸಾಂಸ್ಕೃತಿಕ ಆಯುಧಗಳಾಗಿ ಸರ್ಕಾರಕ್ಕೆ ಚುರುಕು ಮುಟ್ಟಿಸಿದ್ದಾರೆ.

ಬೃಹತ್ತಾದ ಜಾಗದಲ್ಲಿ ಝಗಮಗಿಸುವ ರಂಗಸಜ್ಜಿಕೆ (ರಂಗು ರಂಗಾದ ಪರದೆ, ಕವಾಟು, ರಂಗ ಪರಿಕರಗಳು ಇತ್ಯಾದಿ) ಗಳನ್ನು ನಿರ್ಮಿಸಿ, ಅಂತಹ ವರ್ಣ ಲಾವಣ್ಯಮಯ ವೇದಿಕೆಯಲ್ಲಿ, ಸಂಭ್ರಮದ ಕಣ್ಮನಗಳ ಲೋಕದೆದುರು ಪ್ರದರ್ಶಿಸಲ್ಪಡುವ ರಂಗ ನಾಟಕಗಳ ಸಂಸ್ಕೃತಿಯನ್ನು ಸಾರ್ವತ್ರಿಕವಾಗಿ ಬೆಳೆಸಿರುವ ಪ್ರಜಾಸತ್ತಾತ್ಮಕ ರಂಗ ಪರಂಪರೆಯೇ ವೃತ್ತಿರಂಗಭೂಮಿ.

ಅಂತೆಯೇ ಇವತ್ತಿಗೂ ಹಳ್ಳಿ ಹಳ್ಳಿಗಳಲ್ಲೂ ಜನರೇ ನಾಟಕ ಬರೆದು, ತಾವೇ ಪಾತ್ರವಹಿಸಿ, ನಿರ್ದೇಶಿಸಿ, ಲಕ್ಷಗಟ್ಟಲೇ ಹಣ ಖರ್ಚು ಮಾಡಿ, ತಿಂಗಳುಗಟ್ಟಲೇ ತಾಲೀಮು ನಡೆಸಿ ಒಂದು ಆಪ್ತ ಸಾಂಸ್ಕೃತಿಕ ಪರಿಸರದಲ್ಲಿ ಬಹುಪಾಲು ಅನಕ್ಷರಸ್ಥರೇ ಆಡುವ ಜವಾರಿ ಸಡಗರದ ನಾಟಕಗಳೆಲ್ಲವೂ ವೃತ್ತಿ ರಂಗಭೂಮಿ ನಾಟಕಗಳೇ. ಅಪ್ಪಿತಪ್ಪಿಯೂ ಅವರು ಆಧುನಿಕ ರಂಗಭೂಮಿ ನಾಟಕಗಳನ್ನು ಆಡುವುದಿಲ್ಲ. ಅಂತೆಯೇ ವೃತ್ತಿ ರಂಗಭೂಮಿ ಇವತ್ತಿಗೂ ಜನ ಸಾಮಾನ್ಯರ ರಂಗಭೂಮಿ.

ಪ್ರಧಾನ ಸಾಂಸ್ಕೃತಿಕ ಧಾರೆಯಲ್ಲಿ ಗುರುತಿಸಬೇಕಿದ್ದ ಇದನ್ನು ಅಧೀನ ಸಂಸ್ಕೃತಿಯಂತೆ ಪರಿಗಣಿಸಿ ಈ ರಂಗ ಪ್ರಕಾರವನ್ನು ಚರಿತ್ರೆಕಾರರು ದಾಖಲಿಸಲಿಲ್ಲ. ಹೀಗೆ ಪಂಡಿತೋತ್ತಮ ಕಾವ್ಯ ಮೀಮಾಂಸಕರ ಅವಜ್ಞೆಗೊಳಗಾದರೂ ಲೋಕ ಮೀಮಾಂಸಕರ ಹೃನ್ಮನಗಳಲ್ಲಿ ಇವತ್ತಿಗೂ ವೃತ್ತಿ ರಂಗಭೂಮಿ ಗಟ್ಟಿಮುಟ್ಚಾದ ಸ್ಥಾನ ಗಿಟ್ಟಿಸಿಕೊಂಡಿದೆ. ನಮ್ಮ ಗ್ರಾಮೀಣರಿಗೆ ಇಂದಿಗೂ ವೃತ್ತಿ ನಾಟಕ ಕಂಪನಿಗಳೇ ಆದರ್ಶಪ್ರಾಯ. ಅಭಿನಯ, ಸಂಗೀತ, ನೃತ್ಯ, ರಂಗಸಜ್ಜಿಕೆ, ಸಹೃದಯ ಪ್ರೇಕ್ಷಕ… ಹೀಗೆ ಹಲವು ಅಭಿಜಾತ ಪರಂಪರೆಗಳ ಅನನ್ಯತೆಗಳು ಜನಮಾನಸದಲ್ಲಿ ಹೃದಯಸ್ಪರ್ಶಿಯಾಗಿ ನೆಲೆ ನಿಂತಿವೆ. ಪ್ರಾಯಶಃ ಅದು ವೃತ್ತಿ ರಂಗಭೂಮಿಯ ಮನೋಧರ್ಮ.

ಈ ನಿಟ್ಟಿನಲ್ಲಿ ಬಸವಶ್ರೀ ಪ್ರಶಸ್ತಿ ಪುರಸ್ಕೃತರಾದ ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಶ್ರೀ ಬಸವರಾಜ ಬೆಂಗೇರಿಯವರು 2004ರಲ್ಲಿ “ವಿಶ್ವಭಾರತಿ ರಮ್ಯ ನಾಟಕ ಸಂಘ” ಸ್ಥಾಪಿಸುವ ಮೂಲಕ ತಮ್ಮ ತನು-ಮನ-ಧನಗಳನ್ನು ವೃತ್ತಿ ರಂಗಭೂಮಿಯ ಉಳಿವಿಗಾಗಿ ಸಮರ್ಪಿಸಿದ್ದಾರೆ. ಈ ಮೂಲಕ ಸಂಘದ ಉಳಿವಿಗಾಗಿ ತಮ್ಮ ಅವಿರತ ಪ್ರಯತ್ನ ನಡೆಸುತ್ತಿರುವುದು ಇಂದಿನ ಸಮಾಜಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಈ ನಿಟ್ಟಿನಲ್ಲಿ ಕುರುಡುತನ ಪ್ರದರ್ಶಿಸುತ್ತಿರುವ ಸರ್ಕಾರಗಳು ಇನ್ನು ಮುಂದಾದರೂ ಇಂತಹ ರಂಗಭೂಮಿಯ ನೂರಾರು ಕಲಾವಿದರ ಸಹಾಯಕ್ಕೆ ನಿಲ್ಲದೇ ಹೋದರೆ ಅದು ಮುರ್ಖತನದ ಪರಮಾವಧಿಯೇ ಸರಿ.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!