ಕುಕ್ಕುವಾಡ ಶುಗರ್ ಫ್ಯಾಕ್ಟರಿಯಿಂದ ತ್ಯಾಜ್ಯ ನೀರು, ಹೊಗೆ.! ಜನವರಿ 19 ರಂದು ಪ್ರತಿಭಟನೆ – ಬಿಎಂ ಸತೀಶ್
ದಾವಣಗೆರೆ: ದಾವಣಗೆರೆ ತಾಲ್ಲೂಕಿನ ಕುಕ್ಕುವಾಡ ಗ್ರಾಮದಲ್ಲಿರುವ ಶಾಸಕ ಶಾಮನೂರು ಶಿವಶಂಕರಪ್ಪನವರ ಮಗ ಎಸ್ ಎಸ್ ಗಣೇಶರವರ ಒಡೆತನದ ದಾವಣಗೆರೆ ಸಕ್ಕರೆ ಕಂಪನಿ ಪ್ರತಿ ದಿನ ಹೊರ ಸೂಸುವ ಹೊಗೆಯಿಂದ ಸುತ್ತ ಮುತ್ತಲಿನ ಹಳ್ಳಿಗಳಲ್ಲಿ ಜನರು ಬದುಕುವುದು ಕಷ್ಟಕರವಾಗಿದೆ.
ಪ್ರತಿ ನಿತ್ಯ ಈ ಶುಗರ್ ಫ್ಯಾಕ್ಟರಿಯ ಚಿಮನಿಯಿಂದ ಬೂದಿ ಹೊರಸೂಸುತ್ತಿದೆ. ಇದರಿಂದ ಹಂಚಿನ ಮನೆಗಳ ಮೇಲೆ ಈ ಬೂದಿ ಬಿದ್ದು ಶೇಖರವಾಗಿ ಗಾಳಿಯಲ್ಲಿ ಎಲ್ಲಾ ಕಡೆ ಪ್ರಸರಿಸುತ್ತದೆ. ಊಟ ಮಾಡುವಾಗ ತಟ್ಟೆಯಲ್ಲಿ ಬೀಳುವುದರಿಂದ ಇದನ್ನೇ ಊಟ ಮಾಡಿದ ಜನರು ರೋಗ ರುಜೀನಗಳಿಂದ ಬಳಲುತ್ತಿದ್ದಾರೆ. ಮನೆ ಅಂಗಳದಲ್ಲಿ ಒಣ ಹಾಕಿದ ಬಟ್ಟೆಗಳ ಮೇಲೆ ಈ ಬೂದಿ ಬೀಳುವುದರಿಂದ ಬಟ್ಟೆ ಬಿಳಿ ಬಣ್ಣದಿಂದ ಬೂದು ಬಣ್ಣಕ್ಕೆ ತಿರುಗಿವೆ.
ಬಯಲಿನಲ್ಲಿ ಬೆಳೆದಿರುವ ಹುಲ್ಲು, ಗಿಡ ಗಂಟೆಗಳ ಮೇಲೆ ಈ ಬೂದಿ ಬೀಳುತ್ತದೆ. ಈ ಹುಲ್ಲನ್ನೇ ಧನ ಕರುಗಳು, ಕುರಿ ಮೇಕೆಗಳು ಮೇಯುವುದರಿಂದ ಇವುಗಳು ಸಹ ಸರಿಯಾದ ಬೆಳವಣಿಗೆ ಇಲ್ಲದೆ ರೋಗಗ್ರಸ್ತವಾಗಿವೆ. ಇದರಿಂದ ಹೈನುಗಾರಿಕೆ ಮತ್ತು ಕುರಿ-ಮೇಕೆ ಸಾಕಾಣಿಕೆ ಮಾಡುತ್ತಿರುವ ರೈತರು ನಷ್ಟದ ಸಂಕಷ್ಟಕ್ಕೀಡಾಗಿದ್ದಾರೆ.
ನಿತ್ಯ ಜನರು ಸೇರಿದಂತೆ ಪಶುಗಳು ಹೊಗೆಯಿಂದ ಬರುವ ಬೂದಿ ತಿಂದು ಬದುಕಬೇಕಾಗಿದೆ. ಒಂದು ದಿನವೂ ಬಿಳಿ ಅಥವಾ ಸ್ವಚ್ಛ ಬಟ್ಟೆ ಧರಿಸುವಂತಿಲ್ಲ. ಈ ಭಾಗದ ರೈತರು ಬೆಳೆದಿರುವ ಭತ್ತ ಪೂರ್ಣ ಕಪ್ಪು ಆಗುತ್ತದೆ. ಇದರಿಂದ ಮಾರುಕಟ್ಟೆಯಲ್ಲಿ ಭತ್ತದ ಬೆಲೆ ಕಡಿಮೆಯಾಗುತ್ತದೆ.
ಈ ಸಕ್ಕರೆ ಕಾರ್ಖಾನೆಯಿಂದ ಹೊರಸೂಸುವ ವಿಷಯುಕ್ತ ತ್ಯಾಜ್ಯ ನೀರನ್ನು ಸಹ ಹಳ್ಳಕ್ಕೆ ಬಿಡಲಾಗುತ್ತಿದೆ. ಈ ನೀರಿನಲ್ಲಿ ಆಸಿಡ್ ಇದ್ದು, ಬಹಳ ಅಪಾಯಕಾರಿ ಆಗಿದೆ. ಹಳ್ಳದಲ್ಲಿರುವ ಮೀನು ಮತ್ತು ಇತರೆ ಜಲಚರ ಜೀವಿಗಳು ಸತ್ತಿವೆ. ಇದೇ ನೀರನ್ನು ಸುತ್ತ ಮುತ್ತಲ ಗ್ರಾಮಗಳ ರೈತರು ಈ ನೀರನ್ನು ಪಂಪ್ ಸೆಟ್ ಗಳ ಮೂಲಕ ಜಮೀನುಗಳಿಗೆ ನೀರು ಪೂರೈಕೆ ಮಾಡುತ್ತಾರೆ. ಇದರಿಂದ ಎಲ್ಲಾ ರೈತರ ಜಮೀನುಗಳು ವಿಷಯುಕ್ತವಾಗಿವೆ.
ರೈತರ ಹೊಲಗಳೆಲ್ಲಾ ಬೂದಿಮಾಯವಾಗಿ ಮತ್ತು ವಿಷಯುಕ್ತವಾಗಿ ಬೆಳೆಗಳೆಲ್ಲಾ ನಾಶವಾಗುತ್ತಿವೆ. ಧನ ಕರುಗಳು ಕುರಿ ಮೇಕೆಗಳು ಇದೆ ನೀರನ್ನೇ ಕುಡಿದು ಬದುಕಬೇಕಾಗಿದೆ.
ಈ ಹಳ್ಳಿಗಳ ಜಮೀನು ಕೆಂಗಲು (ಕೆಂಪು) ಜಮೀನು. ಆದರೆ ಈ ಜಮೀನುಗಳ ಮಣ್ಣು ಕೆಂಪಾಗಿ ಕಾಣುತ್ತಿಲ್ಲ. ಎರೆ (ಕಪ್ಪು) ಮಣ್ಣಿನ ರೀತಿ ಕಪ್ಪಾಗಿ ಕಾಣಿಸುತ್ತದೆ. ಜೀವಾಣುಗಳು ನಾಶವಾಗಿದ್ದು,
ಯಾರ ಜಮೀನಿನಲ್ಲಿಯೂ ಎರೆ ಹುಳು ಕಾಣಿಸುವುದಿಲ್ಲ. ಈ ಜಮೀನಿನಲ್ಲಿ ಬೆಳೆ ಇಳುವರಿ ಬಹಳ ಕಡಿಮೆ ಆಗಿದೆ. ಇದರಿಂದ ರೈತರು ಆರ್ಥಿಕ ಸಂಕಷ್ಟ ಅನುಭವಿಸುತ್ತಿದ್ದಾರೆ.
ಈ ಹಳ್ಳಿಗಳ ಜನರ ಬದುಕು ಬೂದಿಮಯವಾಗಿ ಬರ್ಬಾದಾಗಿದೆ. ವಿಷಯುಕ್ತ ಬೂದಿ ಮಿಶ್ರಿತ ಗಾಳಿ ಮತ್ತು ವಿಷ ಮಿಶ್ರಿತ ನೀರಿನಿಂದ ಜನರ ಪಶುಗಳ ಉಸಿರಾಟ ಕಷ್ಟಕರವಾಗಿದೆ.
ಕೊಡುಗೈ ದಾನಿ ಎಂದೇ ಹೆಸರಾಗಿರುವ ರಾಜ್ಯದ ಹಿರಿಯ ರಾಜಕಾರಣಿ ಶಾಮನೂರು ಶಿವಶಂಕರಪ್ಪನವರ ಒಡೆತನದ ಕಾರ್ಖಾನೆಯ ಕರ್ಮಕಾಂಡ ಖಂಡಿಸಿ, ದಿನಾಂಕ:19.01.2023ನೇ ಗುರುವಾರ ಬೆಳಿಗ್ಗೆ 11 ಗಂಟೆಗೆ ಕುಕ್ಕುವಾಡ ಗ್ರಾಮದಲ್ಲಿ ಚನ್ನಗಿರಿ ರಸ್ತೆ ತಡೆ ಮಾಡಿ ಪ್ರತಿಭಟನೆ ಮಾಡಲಾಗುವುದು.