ಕರೆಂಟ್ ಬಿಲ್ ದುಪ್ಪಟ್ಟು ಬಂದಿದೆ ಯಾರೂ ಕಟ್ಟಬೇಡಿ: ರೇಣುಕಾಚಾರ್ಯ
ದಾವಣಗೆರೆ: ಕಳೆದ ತಿಂಗಳಿಗಿಂತ ಈ ಬಾರಿ ವಿದ್ಯುತ್ ಬಿಲ್ಲ ದುಪ್ಪಟ್ಟು ಬಂದು ಜನ ಸಾಮಾನ್ಯರು ಕಂಗಾಲಾಗಿದ್ದು, ಯಾರೂ ಕರೆಂಟ್ ಬಿಲ್ಲ ಕಟ್ಟಬಾರದು ಎಂದು ಹೊನ್ನಾಳಿ ಶಾಸಕರಾದ ಎಂ.ಪಿ. ರೇಣುಕಾಚಾರ್ಯ ಕರೆ ನೀಡಿದರು.
ಸೋಮವಾರ ಸಂಜೆ ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಅವರು, ಬಿಜೆಪಿ ಅವಧಿಯಲ್ಲಿನ 20 ಸಾವಿರ ಕೋಟಿ ರೂಪಾಯಿ ಕಾಮಗಾರಿ ಟೆಂಡರ್ ರದ್ದುಗೊಳಿಸಲಾಗಿದೆ. ಆದರೆ ವಿದ್ಯುತ್ ದರ ಏರಿಸಿದ್ದು ಮಾತ್ರ ಬಿಜೆಪಿ ಎಂದು ಹೇಳಿಕೆ ನೀಡಲಾಗುತ್ತಿದೆ. ದರ ಏರಿಕೆಯನ್ನೂ ಮುಖ್ಯಮಂತ್ರಿಗಳು ಹಿಂಪಡೆಯಬೇಕು ಎಂದು ಹೇಳಿದರು.
ಕರೆಂಟ್ ಬಿಲ್ ಏರಿಕೆಯಿಂದ ಹಳ್ಳಿಗಳಲ್ಲಿ ಜಗಳಗಳಾಗುತ್ತಿವೆ. ಯಾರಾದರೂ ಬಿಲ್ ಕೇಳಿದರೆ ನಮಗೆ ಕರೆ ಮಾಡಿ. ಪೊಲೀಸ್ ಇಲಾಖೆಯವರನ್ನು ಇಟ್ಟುಕೊಂಡು ಹೆದರಿಸಿ ಬಿಲ್ ಕಟ್ಟಿಸಿಕೊಳ್ಳುತ್ತಿರುವ ಪ್ರಸಂಗಗಳು ನಡೆದಿದ್ದು, ಪೊಲೀಸರು ಇರುವುದು ಜನರ ರಕ್ಷಣೆಗೇ ಹೊರತು, ದಬ್ಬಾಳಿಕೆಗಲ್ಲ ಎಂದರು.
ಅನ್ನ ಭಾಗ್ಯ ಯೋಜನೆಯಡಿ 10 ಕೆ.ಜಿ. ಅಕ್ಕಿ ನೀಡುವುದಾಗಿ ಹೇಳಿ ಇದೀಗ, ಕೇಂದ್ರ ಸ ರ್ಕಾರ ಕೊಡುವ 5 ಕೆ.ಜಿ. ಅಕ್ಕಿಯ ಜೊತೆ ರಾಜ್ಯ ಸರ್ಕಾರ 5 ಕೆ.ಜಿ. ಸೇರಿಸಿ 10 ಕೆಜಿ ಕೊಡುತ್ತಿರುವದು ಸರಿಯಲ್ಲ. ರಾಜ್ಯ ಸರ್ಕಾರವೇ 10 ಕೆಜಿ ಅಕ್ಕಿ ನೀಡಬೇಕು. ಮಹಿಳೆಯರಿಗೆ ಉಚಿತ ಬಸ್ ಸಂಚಾರದ ಜೊತೆಗೆ ಗ್ರಾಮೀಣ ಪ್ರದೇಶದಲ್ಲಿ ಬಸ್ ಗಳ ವ್ಯವಸ್ಥೆ ಮಾಡಬೇಕು ಎಂದರು.
ಗೃಹ ಲಕ್ಷ್ಮಿ ಯೋಜನೆ ಜಾರಿಗೆ ತಂದು ಅತ್ತೆ-ಸೊಸೆಯರ ಮಧ್ಯೆ ಜಗಳ ಹಚ್ಚಲಾಗಿದೆ. ಸ್ತ್ರೀ ಸಬಲೀಕರಣವಾಗಬೇಕಾದರೆ ಅತ್ತೆ, ಸೊಸೆ ಸೇರಿದಂತೆ ಕುಟುಂಬದಲ್ಲಿನ ಎಲ್ಲಾ ಮಹಿಳೆಯರಿಗೂ 2 ಸಾವಿರ ರೂಪಾಯಿ ನೀಡಬೇಕು. ಯುವನಿಧಿ ಯೋಜನೆಯಡಿ ಕಳೆದ 10-15 ವರ್ಷದಿಂದ ಉದ್ಯೋಗ ಸಿಗದೇ ಇರುವವರಿಗೂ ಯುವ ನಿಧಿ ಕೊಡಬೇಕು ಎಂದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ವೀರೇಶ್ ಹನಗವಾಡಿ, ಮಾಜಿ ಅಧ್ಯಕ್ಷ ಯಶವಂತರಾವ್ ಜಾಧವ್, ಮಾಜಿ ದೂಡಾ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್, ಮುಖಂಡ ಲೋಕಿಕೆರೆ ನಾಗರಾಜ್, ಪಾಲಿಕೆ ಮಾಜಿ ಸದಸ್ಯರುಗಳಾದ ಶಿವನಗೌಡ ಪಾಟೀಲ್, ಪಿ.ಎಸ್. ಬಸವರಾಜ್ ಸೇರಿದಂತೆ ಎನ್. ರಾಜಶೇಖರ್, ಪಿ.ಸಿ. ಶ್ರೀನಿವಾಸ್, ರಾಜು ವೀರಣ್ಣ, ದಯಾನಂದ, ಶಿವು ಇತರರು ಉಪಸ್ಥಿತರಿದ್ದರು.