ನಕ್ಸಲರಿಂದ ನಿರಂತರ ಬೆದರಿಕೆ- ಪದ್ಮಶ್ರೀ ಹಿಂದಿರುಗಿಸಲು ಸಾಂಪ್ರದಾಯಿಕ ವೈದ್ಯ ಹೇಮಚಂದ್ ಮಾಂಝಿ ನಿರ್ಧಾರ

ಗೌರವಾನ್ವಿತ ಸಾಂಪ್ರದಾಯಿಕ ವೈದ್ಯ ವೃತ್ತಿಗಾರರಾದ ಹೇಮಚಂದ್ ಮಾಂಝಿ ಅವರು ತಮ್ಮ ಪದ್ಮಶ್ರೀ ಪ್ರಶಸ್ತಿಯನ್ನು ಹಿಂದಿರುಗಿಸುವ ನಿರ್ಧಾರವನ್ನು ಪ್ರಕಟಿಸಿದ್ದಾರೆ.

ನಕ್ಸಲ್ ಗುಂಪುಗಳಿಂದ ಹೆಚ್ಚುತ್ತಿರುವ ಬೆದರಿಕೆಗಳಿಂದ ಮನನೊಂದು ಮಾಂಝಿ ಈ ತೀರ್ಮಾನ ಮಾಡಿದ್ದಾರೆ. ಇದು ಅವರ ಸುರಕ್ಷತೆಯ ಬಗ್ಗೆ ಭಯಪಡುವಂತೆ ಮಾಡಿದೆ. ಮಾಂಝಿ ಅವರು ಸಾಂಪ್ರದಾಯಿಕ ಔಷಧಕ್ಕೆ ನೀಡಿದ ಮಹತ್ವದ ಕೊಡುಗೆಗಳನ್ನು ಗುರುತಿಸಿ ಪದ್ಮಶ್ರೀ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದರು. ಅವರ ಕೆಲಸವು ಸ್ಥಳೀಯ ಚಿಕಿತ್ಸಾ ಪದ್ಧತಿಗಳನ್ನು ಸಂರಕ್ಷಿಸುವಲ್ಲಿ ಮತ್ತು ದೂರದ ಪ್ರದೇಶಗಳಲ್ಲಿ ಆರೋಗ್ಯ ಸೇವೆಯನ್ನು ಒದಗಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಛತ್ತೀಸ್​ಗಢದ ನಾರಾಯಣಪುರ ಜಿಲ್ಲೆಯ ಸಾಂಪ್ರದಾಯಿಕ ವೈದ್ಯರಾಗಿರುವ ಹೇಮಚಂದ್ ಮಾಂಝಿ ಅವರು ನಕ್ಸಲೀಯರ ಬೆದರಿಕೆಯ ಹಿನ್ನೆಲೆಯಲ್ಲಿ ಪದ್ಮಶ್ರೀ ಪ್ರಶಸ್ತಿಯನ್ನು ಹಿಂದಿರುಗಿಸುವ ನಿರ್ಧಾರವನ್ನು ನಿನ್ನೆ ಪ್ರಕಟಿಸಿದ್ದಾರೆ.

ನಕ್ಸಲೀಯರು ಮೇ 26ರಂದು ಜಿಲ್ಲೆಯ ಛೋಟೆಡೊಂಗಾರ್ ಪೊಲೀಸ್ ಠಾಣಾ ವ್ಯಾಪ್ತಿಯ ಚಮೇಲಿ ಹಾಗೂ ಗೌರ್ದಾಂಡ್‌ ಗ್ರಾಮಗಳಲ್ಲಿ ನಿರ್ಮಾಣ ಹಂತದಲ್ಲಿರುವ ಎರಡು ಮೊಬೈಲ್ ಗೋಪುರಗಳಿಗೆ ಬೆಂಕಿ ಹಚ್ಚಿದ್ದರು. ಅಲ್ಲದೆ, ಮಾಂಝಿ ಅವರಿಗೆ ಬೆದರಿಕೆ ಒಡ್ಡುವ ಬ್ಯಾನರ್ ಹಾಗೂ ಕರಪತ್ರಗಳನ್ನು ಹಾಕಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಮಾಂಝಿ ಅವರು ರಾಷ್ಟ್ರಪತಿ ದೌಪದಿ ಮುರ್ಮು ಅವರಿಂದ ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸುವ ಚಿತ್ರವನ್ನು ಕೂಡ ಈ ಕರಪತ್ರ ಒಳಗೊಂಡಿತ್ತು.
ನಾರಾಯಣಪುರದ ಛೋಟೆಡೊಂಗಾರ್ ಪ್ರದೇಶದಲ್ಲಿ ಅಮಾಯಿ ಘಾಟಿ ಕಬ್ಬಿಣದ ಅದಿರು ಯೋಜನೆ ಆರಂಭಿಸಲು ಮಾಂಝಿ ನೆರವು ನೀಡಿದ್ದಾರೆ ಹಾಗೂ ಅದಕ್ಕಾಗಿ ದೊಡ್ಡ ಮೊತ್ತ ಲಂಚ ಸ್ವೀಕರಿಸಿದ್ದಾರೆ ಎಂದು ನಕ್ಸಲೀಯರು ಆರೋಪಿಸಿದ್ದಾರೆ. ಆದರೆ, ಈ ಆರೋಪವನ್ನು ಮಾಂಝಿ ಅವರು ನಿರಾಕರಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!