ವಿಪಕ್ಷಗಳ ಒಗ್ಗಟ್ಟು ಒಡೆಯಲು ಕೇಂದ್ರ ಸರ್ಕಾರದಿಂದ ಯತ್ನ: ಮಲ್ಲಿಕಾರ್ಜುನ ಖರ್ಗೆ

ವಿಪಕ್ಷಗಳ ಒಗ್ಗಟ್ಟು ಒಡೆಯಲು ಕೇಂದ್ರ ಸರ್ಕಾರದಿಂದ ಯತ್ನ: ಮಲ್ಲಿಕಾರ್ಜುನ ಖರ್ಗೆ

ಕಲಬುರಗಿ: ವಿರೋಧ ಪಕ್ಷಗಳ ಒಗ್ಗಟ್ಟು ಒಡೆಯಲು ಕೇಂದ್ರ ಸರ್ಕಾರ ಯತ್ನಿಸುತ್ತಿದ್ದು, ನಮ್ಮ ವಿರುದ್ಧ ಸೇಡು ತೀರಿಸಿಕೊಳ್ಳಲು ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.

ಈ ಕುರಿತು ಬುಧವಾರ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಇದು ಮೋದಿ ಸರ್ಕಾರದ ಕಿರುಕುಳ ಮತ್ತು ಸೇಡಿನ ರಾಜಕೀಯ ಹೊರತು ಬೇರೇನೂ ಅಲ್ಲ ಎಂದು ಆರೋಪಿಸಿದ್ದಾರೆ.

ಮೋದಿ ಸರ್ಕಾರದ ವಿರುದ್ಧ ಧ್ವನಿ ಎತ್ತಿದವರನ್ನು ದಮನಿಸಲಾಗುತ್ತದೆ. ಆದರೆ ಈ ಬೆದರಿಕೆಗಳಿಗೆಲ್ಲ ವಿರೋಧ ಪಕ್ಷಗಳು ಬಗ್ಗುವುದಿಲ್ಲ ಎಂದು ಅವರು ಹೇಳಿದ್ದಾರೆ.

ಕೇಂದ್ರ ಸರ್ಕಾರದ ನಿರ್ಲಕ್ಷ್ಯದಿಂದಾಗಿ ಮಣಿಪುರದಲ್ಲಿ ಪರಿಸ್ಥಿತಿ ಹದಗೆಟ್ಟಿದೆ. ಮೊದಲೇ ಕೇಂದ್ರ ಸರ್ಕಾರ ಅದನ್ನು ಹತೋಟಿಗೆ ತಂದಿದ್ರೆ ಪ್ರಾಣಹಾನಿ ಸಂಭವಿಸುತ್ತಿರಲಿಲ್ಲ. ಕೇಂದ್ರ ಸರ್ಕಾರದ ನಿರ್ಲಕ್ಷ್ಯದಿಂದಲೇ ಮಣಿಪುರದಲ್ಲಿ ಹಿಂಸಾಚಾರ ಉಲ್ಬಣಕ್ಕೆ ಕಾರಣವಾಗಿದೆ ಎಂದು ಆರೋಪಿಸಿದರು.

ಈಗಾಗಲೇ ರಾಷ್ಟ್ರಪತಿಯವರಿಗೆ ನಿಯೋಗದ ಮೂಲಕ ಹೋಗಿ ಅಲ್ಲಿನ ಸ್ಥಿತಿ ಗತಿಯ ಬಗ್ಗೆ ತಿಳಿಸಿದ್ದೇವೆ. ಕೇಂದ್ರ ಸರ್ಕಾರದ ನಿರ್ಲಕ್ಷ್ಯದಿಂದ ಪರಿಸ್ಥಿತಿ ಇಷ್ಟೊಂದು ಹದಗೆಟ್ಟಿದೆ. ಮೊದಲೇ ಕೇಂದ್ರ ಸರ್ಕಾರ ಅದನ್ನು ಹತೋಟಿಗೆ ತಂದಿದ್ರೆ ಇಷ್ಟೊಂದು ಪ್ರಾಣಹಾನಿ, ಮನೆಗಳು ಹಾಗೂ ಆಸ್ತಿ ಪಾಸ್ತಿ ಹಾಳಾಗುತ್ತಿರಲಿಲ್ಲ. ತ್ವರಿತ ಪ್ರತಿಕ್ರಿಯೆ ಇಲ್ಲದ ಕಾರಣ ಇಂತಹ ಕೆಟ್ಟ ಪರಿಸ್ಥಿತಿ ಬಂದಿದೆ ಎಂದರು.

ಇಡಿಯಿಂದ ತಮಿಳು ನಾಡು ಸಚಿವ ಸೆಂಥಿಲ್ ಬಾಲಾಜಿ ಬಂಧನ, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಖಂಡನೆ

ಆಸ್ತಿ ಕಳೆದುಕೊಂಡವರಿಗೆ, ಹಾಗೂ ತಮ್ಮವರನ್ನು ಕಳೆದುಕೊಂಡ ಮನೆಯವರಿಗೆ ಪರಿಹಾರ ನೀಡುವಂತೆ ಮನವಿ ಮಾಡಲಾಗಿದೆ. ಕೇಂದ್ರ ಸರ್ಕಾರದೊಂದಿಗೆ ಮಾತನಾಡುವಂತೆ ರಾಷ್ಟ್ರಪತಿಯವರಿಗೆ ಪತ್ರ ಕೂಡ ಕೊಟ್ಟಿದ್ದೆವೆ. ಆದರೆ ಯಾವುದೇ ಉತ್ತರ ಬಂದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಇದೇ ವೇಳೆ ರಾಜಸ್ಥಾನ, ಛತ್ತೀಸ್‌ಗಡ, ಮೇಘಾಲಯ ಹಾಗೂ ಮಧ್ಯಪ್ರದೇಶದಲ್ಲಿ ಚುನಾವಣೆ ಹತ್ತಿರ ಬರುತ್ತಿವೆ. ಈ ರಾಜ್ಯಗಳಲ್ಲೂ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಈಗಾಗಲೇ ನಮ್ಮ ಮುಖಂಡರಿಗೆ ಕೆಲಸ ಮಾಡುವಂತೆ ಹೇಳಿದ್ದೇವೆ. ಮಧ್ಯಪ್ರದೇಶದಲ್ಲಿ ಕೆಲ ಗ್ಯಾರಂಟಿಗಳನ್ನು ಘೋಷಣೆ ಮಾಡಿದ್ದೇವೆ. ಅಲ್ಲಿ ವಾತಾವರಣ ಈಗ ಮೊದಲಿನಂತೆ ಇಲ್ಲ. ಪರಿಸ್ಥಿತಿ ಚೆನ್ನಾಗಿದೆ. ಈ ಬಾರಿ ಅಲ್ಲಿಯೂ ಕಾಂಗ್ರೆಸ್ ಸರ್ಕಾರ ಭಾರೀ ಬಹುಮತದಿಂದ ಗೆಲ್ಲಲಿದೆ. ರಾಜಸ್ಥಾನದಲ್ಲಿ ಕೂಡ ನಾವು ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಅಧಿಕಾರಕ್ಕೆ ಬಂದರೆ ಈ ರಾಜ್ಯಗಳಲ್ಲಿ “ಕರ್ನಾಟಕ ಮಾದರಿ” ಯನ್ನು ಕಾಂಗ್ರೆಸ್ ಅಳವಡಿಸಿಕೊಳ್ಳುತ್ತದೆಯೇ ಎಂಬ ಪ್ರಶ್ನೆಗೆ ಉತ್ತರಿಸಿ, ಪ್ರತಿ ರಾಜ್ಯಕ್ಕೂ ಅಲ್ಲಿನ ಜನರ ಅಗತ್ಯಗಳಿಗೆ ಅನುಗುಣವಾಗಿ ಕಾಂಗ್ರೆಸ್ ಹೊಸ ಮಾದರಿಯನ್ನು ರಚಿಸಲಿದೆ. ಮಧ್ಯಪ್ರದೇಶ, ರಾಜಸ್ಥಾನ ಮತ್ತು ಛತ್ತೀಸ್‌ಗಢದಲ್ಲಿ ಗೆಲ್ಲುವ ಸಾಧ್ಯತೆಗಳಿವೆ. ಆದರೆ, ಮೇಘಾಲಯದಲ್ಲಿ ಕಠಿಣ ಹೋರಾಟ ನೀಡುವ ವಿಶ್ವಾಸವಿದೆ ಎಂದರು.

Leave a Reply

Your email address will not be published. Required fields are marked *

error: Content is protected !!