ಗ್ಯಾರಂಟಿ ಬಗ್ಗೆ ಪಕ್ಷ ಕೊಟ್ಟ ಮಾತಿನಂತೆ ನಡೆಯಬೇಕು: ಸರ್ಕಾರಕ್ಕೆ ಶಾಮನೂರು ಶಿವಶಂಕರಪ್ಪ ಕಿವಿಮಾತು

ದಾವಣಗೆರೆ: ಕಾಂಗ್ರೆಸ್ ಪಕ್ಷವು ಚುನಾವಣಾ ಪೂರ್ವದಲ್ಲಿ ನೀಡಿದ್ದ ಗ್ಯಾರಂಟಿಗಳ ಜಾರಿಗೆ ಷರತ್ತುಗಳನ್ನು ವಿಧಿಸಬಾರದು. ಒಂದು ಕೈಯಲ್ಲಿ ಕೊಟ್ಟು ಇನ್ನೊಂದು ಕೈಯಲ್ಲಿ ಕಿತ್ತುಕೊಳ್ಳಬಾರದು. ಕೊಟ್ಟ ಮಾತಿನಂತೆಯೇ ಸರ್ಕಾರ ನಡೆದುಕೊಳ್ಳಬೇಕು ಎಂದು ಶಾಸಕ ಶಾಮನೂರು ಶಿವಶಂಕರಪ್ಪ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ವಿದ್ಯುತ್ ದರ ಏರಿಕೆಯಿಂದ ಕೈಗಾರಿಕೆಗಳಿಗೆ ಹೊಡೆತ ಬಿದ್ದಿದ್ದು, ಅವು ಉಳಿಯುವುದೇ ಕಷ್ಟವಾಗಿದೆ. ಆದ್ದರಿಂದ ದರ ಹೆಚ್ಚಳ ನಿರ್ಧಾರ ಕೈಬಿಡಬೇಕು ಎಂದು ಹೇಳಿದರು.
ವಿದ್ಯುತ್ ದರವನ್ನು ನಾವು ಹೆಚ್ಚಿಸಿಲ್ಲ ಎಂದು ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳೆರಡೂ ಹೇಳುತ್ತಿವೆ. ಬಿಜೆಪಿ ಆಡಳಿತದ ಅವಧಿಯಲ್ಲೇ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ (ಕೆಇಆರ್‌ಸಿ) ದರ ಏರಿಕೆ ಬಗ್ಗೆ ತಿಳಿಸಿತ್ತು. ಕಾಂಗ್ರೆಸ್‌ನವರು ಇದಕ್ಕೆ ಸಹಿ ಹಾಕಿದ್ದಾರೊ ಬಿಟ್ಟಿದ್ದಾರೊ ಗೊತ್ತಿಲ್ಲ. ಈ ಪ್ರಸ್ತಾವ ಒಪ್ಪಿಕೊಳ್ಳದೆ ಹಿಂದಿನ ದರವನ್ನೇ ಮುಂದುವರಿಸಬೇಕು ಎಂದರು.