ಏಕರೂಪ ನಾಗರೀಕ ಸಂಹಿತೆ ಕೈಬಿಡಲು ಮುಸ್ಲಿಂ ಒಕ್ಕೂಟ ಒತ್ತಾಯ
ದಾವಣಗೆರೆ: ಕಾನೂನು ಆಯೋಗವು ಏಕರೂಪ ನಾಗರಿಕ ಸಂಹಿತೆ ಚರ್ಚೆಯ ವಿಷಯವನ್ನು ಕೈಬಿಡುವಂತೆ ಆದೇಶಿಸಬೇಕೆಂದು ಕೋರಿ ಮುಸ್ಲಿಂ ಒಕ್ಕೂಟದ ಸದಸ್ಯರು ಸೋಮವಾರ ಅಪರ ಜಿಲ್ಲಾಧಿಕಾರಿ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಿದರು.
ಇದೇ ವೇಳೆ ಮಾತನಾಡಿದ ಮುಸ್ಲಿಂ ಒಕ್ಕೂಟದ ಸಂಚಾಲಕ ನಜೀರ್ ಅಹ್ಮದ್, ಭಾರತದ ಕಾನೂನು ಆಯೋಗವು ಏಕರೂಪ ನಾಗರಿಕ ಸಂಹಿತೆ ವಿಷಯದ ಕುರಿತು ಸಾರ್ವಜನಿಕರ ಅಭಿಪ್ರಾಯ ಸಂಗ್ರಹಕ್ಕೆ ಆಹ್ವಾನ ನೀಡಿದೆ. ಏಕರೂಪ ನಾಗರಿಕ ಸಂಹಿತೆ ಜಾರಿಯಾಗುವುದರಿಂದ ಭಾರತದ ನಾಗರಿಕರಿಗೆ ನೀಡಿರುವ ಮೂಲಭೂತ ಹಕ್ಕಗಳು ಮೊಟಕುಗೊಳ್ಳುತ್ತವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಭಾರತದಲ್ಲಿ ಬುಡಕಟ್ಟು ಜನಾಂಗದವರು, ಮುಸಲ್ಮಾನರು, ಕ್ರಿಶ್ಚಿಯನ್ನರು, ಬೌದ್ಧರು, ಜೈನರು, ಸಿಖ್ಖರು ಅನೇಕ ಜನಾಂಗದವರು ವಾಸಿಸುತ್ತಿದ್ದು, ಎಲ್ಲಾ ಧರ್ಮೀಯರಿಗೆ ಅನುಕೂಲವಾಗಲೆಂದೇ ಸಂವಿಧಾನದ ಆರ್ಟಿಕಲ್ ೨೬ ದೇಶದ ಪ್ರತಿಯೊಬ್ಬ ನಾಗರಿಕನಿಗೆ ತನ್ನ ಇಚ್ಛೆಯ ಅನುಸಾರ ತನಗೆ ಇಷ್ಟವಾದ ಧರ್ಮದ ಪ್ರಕಾರ ಜೀವನವನ್ನು ನಡೆಸಲು ಧಾರ್ಮಿಕ ಸ್ವಾತಂತ್ರ್ಯವನ್ನು ನೀಡಿದೆ. ಆದರೆ, ಏಕರೂಪ ನಾಗರಿಕ ಸಂಹಿತೆ ಸಂವಿಧಾನಕ್ಕೆ ವಿರೋಧವಾಗಿದೆ ಎಂದು ಹೇಳಿದರು.
ಭಾರತದಲ್ಲಿ ಪ್ರತಿಯೊಬ್ಬ ನಾಗರಿಕನು ಧಾರ್ಮಿಕ ಮೌಲ್ಯಗಳನ್ನು ರೂಢಿಸಿಕೊಂಡು ಜೀವನ ನಡೆಸಲು ಭಾರತದ ಸಂವಿಧಾನವು ಹಕ್ಕನ್ನು ನೀಡಿದೆ. ಬೇರೆ ರಾಜ್ಯಗಳಲ್ಲಿ ವಿವಿಧ ಭಾಷೆಗಳನ್ನು ಮಾತನಾಡುವವರು ಇದ್ದಾರೆ. ಈ ರೀತಿ ಇದ್ದರೂ ಎಲ್ಲರೂ ಒಂದೇ ಎಂದು ದೇಶದ ಸಮಗ್ರತೆ ಮತ್ತು ಐಕ್ಯತೆಯನ್ನು ಎತ್ತಿ ಹಿಡಿದಿದ್ದಾರೆ. ಆಡಳಿತರೂಢ ಸರ್ಕಾರ ಧಾರ್ಮಿಕ ಆಚರಣೆಯಲ್ಲಿ ವಿಷಬೀಜವನ್ನು ಬಿತ್ತಿ ಭಾರತದ ನಾಗರಿಕರಲ್ಲಿ ಕೋಮು ಸಂಘರ್ಷ ಉಂಟುಮಾಡಲು ಏಕರೂಪ ನಾಗರಿಕ ಸಂಹಿತ ರೂಪಿಸಲು ಹುನ್ನಾರ ನಡೆಸುತ್ತಿದೆ ಎಂದು ಆರೋಪಿಸಿದರು.
ಇಂತಹ ಕಾನೂನು ಭಾರತದ ಹಿತಕ್ಕೆ, ದೇಶದ ಸಮಗ್ರತೆ ಮತ್ತು ಐಕ್ಯತೆಗೆ ಧಕ್ಕೆ ತರಬಹುದಾಗಿದೆ. ಆದ್ದರಿಂದ ಇಂತಹ ಸಂವಿಧಾನ ವಿರೋಧಿ ಏಕರೂಪ ನಾಗರಿಕ ಸಂಹಿತೆಯನ್ನು ದೇಶದ ಬಹುಸಂಖ್ಯಾತ ನಾಗರಿಕರು ವಿರೋಧಿಸುತ್ತಿದ್ದಾರೆ. ಆದ್ದರಿಂದ ರಾಷ್ಟಪತಿಗಳು ಮಧ್ಯಪ್ರವೇಶಿಸಿ ಏಕರೂಪ ನಾಗರೀಕ ಸಂಹಿತೆ ಚರ್ಚೆಯ ವಿಷಯವನ್ನು ಕಾನೂನು ಆಯೋಗವು ಕೈಬಿಡುವಂತೆ ಆದೇಶಿಸಬೇಕು ಎಂದು ಒತ್ತಾಯಿಸಿದರು.
ಈ ವೇಳೆ ಒಕ್ಕೂಟ ಮಖಂಡರಾದ ಟಿ.ಅಸ್ಗರ್, ಮಹಮ್ಮದ್ ಶೋಯೇಬ್ ನೂರ್ ಅಹ್ಮದ್, ನಿಜಾಮುದ್ದೀನ್, ಮಸೂದ್ ಅಹ್ಮದ್, ಐ. ಕೆ ಮುನ್ನ ಸಾಬ್, ಮೆಹಬೂಬ್ ಬೀಡ, ಅನ್ವರ್ ಹಸೇನ್, ಅಜ್ಮತ್, ಖಲೀಲವುಲ್ಲಾ ಖಾನ್, ಪಿ. ನಬಿಸಾಬ್, ಮಹಮ್ಮದ್ ಹನೀಫ್ ಸಾಬ್, ಹುಸೇನ್ ಅಂಬುಲೆನ್ಸ್, ಮಹಮ್ಮದ್ ಫಾರೂಕ್, ಅಬ್ದುಲ್ ರೆಹಮಾನ್ ಸಾಬ್, ಸಮೀವುಲ್ಲಾ ಸಾಬ್, ಸೈಯದ್ ಅಕ್ಬರ್, ಸೈಯದ್ ಮುಸ್ತಫಬ್‌ಬ್ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.