ಅಂದು ಕಾಲೇಜಿನ ಅತಿ ಕಡಿಮೆ ವೇತನದ ಸೇವಕ: ಇಂದು ಜನಪ್ರಿಯ ಶಾಸಕ

ಅಂದು ಕಾಲೇಜಿನ ಅತಿ ಕಡಿಮೆ ವೇತನದ ಸೇವಕ: ಇಂದು ಜನಪ್ರಿಯ ಶಾಸಕ:

ದಾವಣಗೆರೆ (ಜಗಳೂರು): ಅದೊಂದು ಸಮಯದಲ್ಲಿ ಮನೆಯಲ್ಲಿ ಕಿತ್ತು ತಿನ್ನುವ ಬಡತನ, ಕಾಡಿಗೆ ಹೋಗು ಕಟ್ಟಿಗೆ ತಂದು ಜೀವನ ಮಾಡಬೇಕಾದ ಸ್ಥಿತಿ, ಈ ನಡುವೆ ಜವಾನ ಕೆಲಸ..ಆದರೀಗ ಅವರು ಒಂದು ಕ್ಷೇತ್ರದ ಶಾಸಕ.

ಹೌದು..ಜಗಳೂರಿನವರೇ ಆದ ಬಿ.ದೇವೆಂದ್ರಪ್ಪ ಈ ಕಥೆಯ ರೂವಾರಿ..ಇವರು ಪಟ್ಟಣದ ಅಮರಭಾರತಿ ವಿದ್ಯಾ ಕೇಂದ್ರದಲ್ಲಿ ಜವಾನರಾಗಿ ಕೆಲಸ ಮಾಡುತ್ತಿದ್ದು, ಈಗ ಇಡೀ ಊರಿನ ನಾಯಕರಾಗಿದ್ದಾರೆ. ‘‘ನನಗೆ ಮಾರ್ಗದರ್ಶಕರಾದ ಹಾಗೂ ಜೀವನ ರೂಪಿಸಿಕೊಟ್ಟ ವಿದ್ಯಾರತ್ನ ಡಾ.ಟಿ.ತಿಪ್ಪೇಸ್ವಾಮಿ ಇಲ್ಲದೇ ಇದ್ದಿದ್ದರೆ ನಾನು ಶಾಸಕನಾಗುತ್ತಿರಲಿಲ್ಲ. ನಾನು ಗುರುವಿನ ಗುಲಾಮ. ಬಡತನದಲ್ಲಿ ಬೆಂದು ಒಂದೊತ್ತಿನ ಊಟಕ್ಕೂ ಗತಿಯಿಲ್ಲದ ಕಾಲದಲ್ಲಿ ಎಲ್ಲೋ ಓದುತ್ತಿದ್ದ ನನ್ನನ್ನು ತಮ್ಮ ಕಾಲೇಜಿಗೆ ಕರೆಸಿ, ಡಿ ದರ್ಜೆಯ ನೌಕರನಾಗಿ ಸೇರಿಸಿಕೊಂಡು 380 ರೂ. ವೇತನ ನೀಡುತ್ತಿದ್ದರು. ಅವರು ಕಾಲೇಜಿನಲ್ಲಿ ಕೆಲಸ ಕೊಟ್ಟಿದ್ದರಿಂದ ನನ್ನ ಇಬ್ಬರು ಪುತ್ರರಾದ ಕೀರ್ತಿಕುಮಾರ್, ವಿಜಯ್ ಕುಮಾರ್ ಉತ್ತಮ ವ್ಯಾಸಂಗ ಮಾಡಿದರು.

ಸಣ್ಣ ಮಗ ಎಂಬಿಬಿಎಸ್ ಮುಗಿಸಿ ಐಆರ್‌ಎಸ್ ಪರೀಕ್ಷೆಯಲ್ಲಿ ಪಾಸ್ ಮಾಡಲು ತಿಪ್ಪೇಸ್ವಾಮಿ ಅವರೇ ಕಾರಣ,’’ ಹಳೇಯ ನೆನಪುಗಳ ಹಂಚಿಕೊಂಡರು.‘‘ನನ್ನ ಮಕ್ಕಳ ಶಾಲಾ ಶುಲ್ಕ ಕಟ್ಟಿಸಿಕೊಳ್ಳದೇ ಓದಿಸಿದರು. ಅವರ ಋಣ ನನ್ನ ಮೇಲಿದೆ. ಅವರು ಕೊಟ್ಟ ಭಿಕ್ಷೆಯಿಂದಲೇ ನಾನು ಈ ಮಟ್ಟಕ್ಕೆ ಬೆಳೆದೆ. ತಿಪ್ಪೇಸ್ವಾಮಿ ಅವರ ಪುತ್ರ ಮಧು ಅವರು ತಿಪ್ಪೇಸ್ವಾಮಿ ಹಾದಿಯಲ್ಲೇ ಬೆಳೆಯುತ್ತಿದ್ದಾರೆ’’ ಎಂದು ಸ್ಮರಿಸಿಕೊಂಡರು.

ಶಾಸಕ ಬಿ.ದೇವೇಂದ್ರಪ್ಪ ತಾವು ಈ ಹಿಂದೆ ಜವಾನರಾಗಿ ಕಾರ್ಯನಿರ್ವಹಿಸುತ್ತಿದ್ದ ಪಟ್ಟಣದ ಅಮರಭಾರತಿ ವಿದ್ಯಾ ಕೇಂದ್ರದಲ್ಲಿ ಕಸ ಗುಡಿಸಿ, ಘಂಟೆ ಭಾರಿಸುವ ಮೂಲಕ ತಮ್ಮ ಹಳೆ ನೆನಪನ್ನು ನೆನೆಸಿಕೊಂಡರು. ಸಂಸ್ಥೆಯ ಕಾರ್ಯದರ್ಶಿ ಮಧು ಅವರ ಕೊಠಡಿಯಲ್ಲಿ ಹಾಜರಿ ಪುಸ್ತಕಕ್ಕೆ ಸಹಿ ಮಾಡಿ, ಸಂಸ್ಥಾಪಕ ವಿದ್ಯಾರತ್ನ ಡಾ.ತಿಪ್ಪೇಸ್ವಾಮಿ ಭಾವಚಿತ್ರಕ್ಕೆ ನಮಿಸಿದ ನಂತರ ಜವಾನನ ಖುರ್ಚಿಯಲ್ಲಿ ಕುಳಿತರು. ನಂತರ ಪೊರಕೆ ಹಿಡಿದು ಕಸ ಗುಡಿಸಿದರು. ಕಾಲೇಜಿನ ಬೆಲ್ ಭಾರಿಸಿದ ನಂತರ ರಾಷ್ಟ್ರಗೀತೆ ಮೊಳಗಿತು. ಕಡುಬಡತನದ ನಡುವೆ ಬೆಳೆದ ದೇವೇಂದ್ರಪ್ಪನವರು ಶಾಲೆಯಲ್ಲಿ ಜವಾನರಾಗಿ ಕಾರ್ಯನಿರ್ವಹಿಸಿದ್ದರು. ಮಾತ್ರವಲ್ಲ, ಇಂದಿಗೂ ಅದೇ ಅಭಿಮಾನ, ಪ್ರೀತಿ ವಿಶ್ವಾಸ ಈ ಶಾಲೆಯ ಮೇಲಿದೆ. ಅಂದು ಮಾಡುತ್ತಿದ್ದ ಕೆಲಸಗಳನ್ನು ಇಂದಿಗೂ ಮರೆತಿಲ್ಲ.

30 ವರ್ಷಗಳ ಕಾಲ ಸಂಸ್ಥೆಯಲ್ಲಿ ಜವಾನನಾಗಿ ಕೆಲಸ ಮಾಡಿರುವ ಇವರು ಇಡೀ ಜಗಳೂರು ತಾಲೂಕಿಗೆ ಚಿರಪರಿಚಿತರು.ಜವಾನ ಕೆಲಸದಿಂದ ನಿವೃತ್ತಿ ಹೊಂದಿದ ಬಳಿಕ ಚುನಾವಣಾ ಕಣಕ್ಕಿಳಿದ ದೇವೇಂದ್ರಪ್ಪ ಮೊದಲ ಬಾರಿಗೆ ಜೆಡಿಎಸ್ ಪಕ್ಷದಿಂದ ಸ್ಪರ್ಧಿಸಿ ಸೋಲು ಅನುಭವಿಸಿದ್ದರು. ಛಲಬಿಡದೇ ಜೆಡಿಎಸ್ ತೊರೆದು ಕಾಂಗ್ರೆಸ್ ಕೈ ಹಿಡಿದು ಟಿಕೆಟ್ ಆಕಾಂಕ್ಷಿಯಾಗಿದ್ದರು. ಮೊದಲ ಬಾರಿಗೆ ಕಾಂಗ್ರೆಸ್‌ನಿಂದ ಹಾಗು ಡಿಕೆಶಿ ಕೃಪಾಕಟಾಕ್ಷದಿಂದ ಟಿಕೆಟ್ ಕೂಡ ದಕ್ಕಿಸಿಕೊಂಡ ಇವರು ಕೇವಲ 800 ಮತಗಳ ಅಂತರದಿಂದ ಗೆಲುವಿನ ನಗೆ ಬೀರಿದ್ದರು. ಜಗಳೂರು ಶಾಸಕರಾಗಿ ಆಯ್ಕೆಯಾದರೂ ದೇವೇಂದ್ರಪ್ಪ ತನಗೆ 30 ವರ್ಷಗಳಿಂದ ಅನ್ನ ನೀಡಿದ್ದ ಜವಾನ ವೃತ್ತಿಯನ್ನು ನೆನೆದು ಕೆಲಕಾಲ ತಾವು ದುಡಿದ ಕಾಲೇಜಿನಲ್ಲಿ ಸಂಬಳರಹಿತ ಕೆಲಸ ಮಾಡಿದರು.

ನಾನು ರೌಡಿಯಲ್ಲ ಜನಸೇವಕ : ‘‘ಚುನಾವಣೆಯಲ್ಲಿ ಸಂದರ್ಭದಲ್ಲಿ ನನ್ನನ್ನು ರೌಡಿ ಎಂದು ಕೆಲವರು ಅಪಪ್ರಚಾರ ಮಾಡಿದರು. ನಾನು ರೌಡಿಯಾಗಿದ್ದರೆ ನನ್ನನ್ನು ಜನ ಗೆಲ್ಲಿಸುತ್ತಿದ್ದರೆ ? ‘‘ಜನ ಸೇವೆಯೇ ಜನಾರ್ಧನನ ಸೇವೆ’’ ಎಂದು ನಂಬಿದ್ದೇನೆ. ರೌಡಿ ಎಂದು ಬಿಂಬಿಸಿದ ಅನೇಕರಿಗೆ ಇದು ಅರ್ಥವಾಗಲಿ. ನನಗೆ ಜನಪ್ರಿಯ ಶಾಸಕ ಎಂಬ ಬಿರುದು ಬೇಡ. ಐದು ವರ್ಷ ಪೂರೈಸಿದ ನಂತರ ಕೆಲಸ ನೋಡಿ ಮಾತನಾಡಿ’’ ಎಂದು ಶಾಸಕ ದೇವೇಂದ್ರಪ್ಪ ವಿರೋಧಿಗಳಿಗೆ ಚಾಟಿ ಬೀಸಿದರು.

ಕ್ಷೇತ್ರದ ಕಸ ಗುಡಿಸುವೆ : ‘‘ಕ್ಷೇತ್ರದ ಅಭಿವೃದ್ಧಿಗೆ ಮುಲಾಜಿಲ್ಲದೆ, ಮರ್ಜಿಗೆ ಒಳಗಾಗದೇ ಅಧಿಕಾರಿಗಳಿಂದ ಕೆಲಸ ಮಾಡಿಸುವೆ. ಜನ ನನಗೆ ಕ್ಷೇತ್ರದ ಕಸ ಗುಡಿಸುವ ಅವಕಾಶ ಕೊಟ್ಟಿದ್ದಾರೆ. ನಾನು ಮಲಗಲ್ಲ, ಅಧಿಕಾರಿಗಳನ್ನು ಕಚೇರಿಯಲ್ಲಿ ಮಲಗಲು ಬಿಡಲ್ಲ. ಅಧಿಕಾರಿಗಳು ಹೃದಯ ತುಂಬಿ ಕೆಲಸ ಮಾಡಬೇಕು. ಭಯ ಮುಕ್ತ ಆಡಳಿತ ನೀಡಿ, ಸರಕಾರದ ಸವಲತ್ತುಗಳನ್ನು ಜನತೆಗೆ ತಲುಪಿಸುತ್ತೇನೆ,’’ ಎಂದು ದೇವೇಂದ್ರಪ್ಪ ಹೇಳಿದರು.

Leave a Reply

Your email address will not be published. Required fields are marked *

error: Content is protected !!